ತುಮಕೂರು: ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ಸ್ಫೋಟ ಮಾಡಿದ ಪ್ರಕರಣದಲ್ಲಿ ಬಂಧನವಾಗಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ ಅವರು ಜೈಲಿನಿಂದ ಮಂಗಳವಾರ ಬಿಡುಗಡೆಯಾಗಿದ್ದಾರೆ. ಮಧುಗಿರಿ ಉಪ ಕಾರಾಗೃಹದಿಂದ ರಿಲೀಸ್ ಆದ ಬಳಿಕ ಪ್ರತಿಕ್ರಿಯಿಸಿರುವ ಡ್ರೋನ್ ಪ್ರತಾಪ್ (Drone Prathap) ಅವರು, ದೇಶಾದ್ಯಂತ ಇಂತಹ ನೂರಾರು ವಿಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಅವರನ್ನೆಲ್ಲಾ ಯಾಕೆ ಅರೆಸ್ಟ್ ಮಾಡಿಲ್ಲ. ನನ್ನ ಒಬ್ಬನನ್ನೇ ಯಾಕೆ ಅರೆಸ್ಟ್ ಮಾಡಿದ್ದೀರಾ. ನನಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ.
ಸೋಡಿಯಂ ಸ್ಫೋಟ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಡ್ರೋನ್ ಪ್ರತಾಪ್ ಅವರು ಕಳೆದ 9 ದಿನಗಳಿಂದ ಜೈಲುವಾಸದಲ್ಲಿದ್ದರು. ಸೋಮವಾರ ಮಧುಗಿರಿ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಇಂದು ಡ್ರೋನ್ ಪ್ರತಾಪ್ ಬಿಡುಗಡೆಯಾಗಿದ್ದಾರೆ. ಮೊದಲ 3 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಡ್ರೋನ್ ಪ್ರತಾಪ್, 9 ದಿನಗಳ ನ್ಯಾಯಾಂಗ ಬಂಧನದ ಬಳಿಕ ಇದೀಗ ಜೈಲಿನಿಂದ ರಿಲೀಸ್ ಆಗಿದ್ದಾರೆ.
ದೇಶಾದ್ಯಂತ ಇಂತಹ ನೂರಾರು ವಿಡಿಯೊಗಳನ್ನ ಪೋಸ್ಟ್ ಮಾಡಿದ್ದಾರೆ. ಅವರನ್ನೆಲ್ಲಾ ಯಾಕೆ ಅರೆಸ್ಟ್ ಮಾಡಿಲ್ಲ. ನನ್ನ ಒಬ್ಬನನ್ನೇ ಯಾಕೆ ಅರೆಸ್ಟ್ ಮಾಡಿದ್ದೀರಾ ಎಂದು ಪ್ರಶ್ನಿಸಿದ ಅವರು, ನಾನು ಒಂದೇ ಒಂದು ಪ್ರಶ್ನೆ ಕೇಳುತ್ತೇನೆ. ಇಡೀ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಬೇರೆಯವರೆಲ್ಲಾ ಕೆಜಿಗಟ್ಟಲೇ ಸೋಡಿಯಂ ಬಳಸಿ ಸೈನ್ಸ್ ಎಕ್ಸ್‌ಪೆರಿಮೆಂಟ್ ಮಾಡಿದ್ದಾರೆ. ಯ್ಯೂಟೂಬ್‌ನಲ್ಲಿ ವಿಡಿಯೊ ಅಪ್ಲೋಡ್ ಮಾಡಿದ್ದಾರೆ. CRAZY XYZ, MISTER INDIAN HACKER ಮತ್ತಿತರ ಯೂಟ್ಯೂಬರ್‌ಗಳು ಇದೇ ರೀತಿ ಮಾಡಿದ್ದಾರೆ.
ನಾನು ಮಾಡಿರುವುದು ಸೈನ್ಸ್ ಅಂಡ್ ಎಜುಕೇಷನ್ ಉದ್ದೇಶಕ್ಕಾಗಿ. ಮೊದಲೇ ಡಿಸ್ಕ್ಲೈಮರ್ ಹಾಕಿ ಮಾಡಿದ್ದೇನೆ. ಕಾಲೇಜು, ಸ್ಕೂಲ್‌ಗಳಲ್ಲಿ ಸುಲಭವಾಗಿ ಸಿಗೋ ಮೆಟಿರಿಯಲ್ ಬಳಸಿದ್ದೇನೆ. ಅದಕ್ಕೆ ಎಕ್ಸ್‌ಪ್ಲೋಸಿವ್ ಅದು ಇದು ಅಂತ ಮಾಡೋದು ಅಗತ್ಯ ಇರಲಿಲ್ಲ. ನನ್ನ ಮೇಲೆ ಕೇಸ್ ಹಾಕಿದ್ದಾರೆ, ಬೇರೆಯವರ ಮೇಲೆ ಯಾಕೆ ಹಾಕಿಲ್ಲ ಅವರ ಮೇಲೆ ಏನು ಅಗದೇ ನನ್ನ ಟಾರ್ಗೆಟ್ ಮಾಡ್ತಾರೆ ಅಂದ್ರೆ ಏನರ್ಥ, ನನಗೆ ನ್ಯಾಯ ಬೇಕು ಒತ್ತಾಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Dalit Boy Suicide: ಬರ್ತ್ ಡೇ ಪಾರ್ಟಿಗೆಂದು ಕರೆದು ವಿವಸ್ತ್ರಗೊಳಿಸಿ ಹಲ್ಲೆ; ನೊಂದ ಯುವಕ ಆತ್ಮಹತ್ಯೆ
ಸೋಡಿಯಂ ಸ್ಫೋಟದ ವಿಡಿಯೊವನ್ನು ಆಧರಿಸಿ ಮಿಡಿಗೇಶಿ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡು ಡ್ರೋನ್ ಪ್ರತಾಪ್ ಅವರನ್ನು ಆರೆಸ್ಟ್ ಮಾಡಿದ್ದರು. ಬಳಿಕ ಅವರ ಇಬ್ಬರು ಸ್ನೇಹಿತರನ್ನು ಕೂಡ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಡ್ರೋನ್ ಪ್ರತಾಪ್‌ಗೆ ಡಿಸೆಂಬರ್ 26ರವರೆಗೆ ಅಂದರೆ 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿತ್ತು. ಜಾಮೀನು ಮಂಜೂರು ಆಗಿರುವ ಹಿನ್ನೆಲೆಯಲ್ಲಿ ಇಂದು ಜೈಲಿನಿಂದ ಡ್ರೋನ್ ಪ್ರತಾಪ್ ಬಿಡುಗಡೆ ಆಗಿದ್ದಾರೆ.
ಈ ಪ್ರಕರಣದ ಬಗ್ಗೆ ಸಂಪೂರ್ಣ ವಿವರ ನೀಡುವಂತೆಯೂ ಮುಖ್ಯಮಂತ್ರಿಗಳ ಸಚಿವಾಲಯದಿಂದ ಆದೇಶ ನೀಡಲಾಗಿತ್ತು. ಸೋಡಿಯಂ ಮೆಟಲ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಧುಗಿರಿ ಸಿಪಿಐ ಕಚೇರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಆಗಮಿಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದರು. ಡ್ರೋನ್ ಪ್ರತಾಪ್ ಈ ಹಿಂದೆಯೂ ಕೆಲವು ವಂಚನೆ ಪ್ರಕರಣಗಳಲ್ಲಿ ಸುದ್ದಿಯಾಗಿದ್ದರು.