ಮಂಗಳೂರು: ದಕ್ಷಿಣ ಕನ್ನಡ (Dakshina kannada) ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ನದಿಯಲ್ಲಿ ಮುಳುಗಿ (Drowned) ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ (students death) ಘಟನೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಮೂಡುಕೋಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾರ್ಯಕ್ರಮವೊಂದಕ್ಕೆ ಬಂದಿದ್ದ ಕುಪ್ಪಪೆದವು ನಿವಾಸಿ ಲಾರೆನ್ಸ್ (20) ಬೆಳ್ತಂಗಡಿ ತಾಲೂಕಿನ ಪಾರೆಂಗಿ ಗ್ರಾಮದ ಸೂರಜ್ (19) ಬಂಟ್ವಾಳ ಗ್ರಾಮದ ವಗ್ಗದ ಜೈಸನ್ (19) ಮೃತಪಟ್ಟಿದ್ದಾರೆ.
ಊಟ ಮುಗಿಸಿ ಮೂಡುಕೋಡಿ ಗ್ರಾಮದ ನಡ್ತಿಕಲ್ಲು ಬರ್ಕಜೆ ಡ್ಯಾಂ ಬಳಿಯ ಎರುಗುಂಡಿ ಬಳಿ ಸ್ನಾನ ಮಾಡಲು ನದಿಗೆ ಇಳಿದ ವೇಳೆ ನದಿಯಲ್ಲಿ ಮುಳುಗಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮೃತ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಬಿಎಸ್ ಸಿ ನರ್ಸಿಂಗ್ ಓದುತ್ತಿದ್ದರು ಎಂದು ತಿಳಿದು ಬಂದಿದೆ. ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿತ್ರದುರ್ಗದಲ್ಲಿ ಪ್ರೀತಿಸಿ ಮದುವೆಯಾದ ಯುವಕನ ಕೊಚ್ಚಿ ಕೊಲೆ
ಚಿತ್ರದುರ್ಗ: ಚಿತ್ರದುರ್ಗದಲ್ಲಿ ಯುವಕನೊಬ್ಬನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಪ್ರೀತಿಸಿ ಮದುವೆಯಾಗಿದ್ದ ಯುವಕನನ್ನು, ಯುವತಿಯ ಮನೆಯ ಸುಮಾರು 20 ಜನರು ಯುವಕನ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಘಟನೆ ಚಿತ್ರದುರ್ಗದ ಕೋಣನೂರು ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಯುವಕ ಮಂಜುನಾಥ್ ಎಂಬಾತ. ಯುವತಿ ರಕ್ಷಿತಾ ಮನೆಯವರು ಇವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಕೂಡ ಕಳೆದ ಮೂರು ತಿಂಗಳ ಹಿಂದೆ ಇವರಿಬ್ಬರು ದೇವಸ್ಥಾನದಲ್ಲಿ ಕುಟುಂಬಸ್ಥರ ವಿರೋಧದ ನಡುವೆಯೂ ಮದುವೆಯಾಗಿದ್ದರು.
ಮಂಜುನಾಥ್ ಮೇಲೆ ಕೋಪಗೊಂಡಿದ್ದ ರಕ್ಷಿತಾ ಕುಟುಂಬ ಬುಧವಾರ ಮಧ್ಯಾಹ್ನ ಏಕಾಏಕಿ ಹಲ್ಲೆ ನಡೆಸಿದೆ. ಸುಮಾರು 20 ಮಂದಿ ಮಂಜುನಾಥ್ ಗೆ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಮಂಜುನಾಥ್ ತಂದೆ ಚಂದ್ರಪ್ಪ ಹಾಗೂ ತಾಯಿ ಅನಸೂಯಮ್ಮಗೂ ಗಂಭೀರ ಗಾಯವಾಗಿದೆ .ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬ್ರಹ್ಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: KSRTC Breaking: ಕೆಎಸ್ಆರ್ಟಿಸಿ ಬಸ್ ಹರಿದು ದಂಪತಿ ಸ್ಥಳದಲ್ಲಿಯೇ ಸಾವು