ಬೆಂಗಳೂರು: ಕಾವೇರಿ-2.0 (Kaveri 2.0) ತಂತ್ರಾಂಶದೊಂದಿಗೆ ಇ-ಆಸ್ತಿ (E-Aasthi) ತಂತ್ರಾಂಶ ಸಂಯೋಜನೆ ಮಾಡಲಾಗಿದ್ದು, ನಾಳೆಯಿಂದ (ಅಕ್ಟೋಬರ್ 7) ರಾಜ್ಯಾದ್ಯಂತ ಇ-ಆಸ್ತಿ ಖಾತಾ ತಂತ್ರಾಂಶ ವ್ಯವಸ್ಥೆ ಜಾರಿಯಾಗಲಿದೆ. ಹೀಗಾಗಿ ಇನ್ನು ಮುಂದೆ ರಾಜ್ಯಾದ್ಯಂತ ಸ್ಥಿರಾಸ್ತಿ ನೋಂದಣಿಗೆ ಇ-ಆಸ್ತಿ ಕಡ್ಡಾಯವಾಗಿದೆ.
ನಗರಾಭಿವೃದ್ಧಿ ಇಲಾಖೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿಗಳ ಹಕ್ಕು ವರ್ಗಾವಣೆಗೆ ಸಂಬಂಧಿಸಿದಂತೆ ಇ-ಆಸ್ತಿ ತಂತ್ರಾಂಶ ಮತ್ತು ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಡಲು ಸಮ್ಮತಿಸಲಾಗಿದೆ. ಅಕ್ಟೋಬರ್ 7ರಿಂದ ಎಲ್ಲ ಉಪನೋಂದಣಿ ಕಚೇರಿಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ತಂತ್ರಾಂಶದಿಂದಲೇ ಇ-ಖಾತಾ ಪಡೆಯಬೇಕೆಂದು ಜಿಲ್ಲಾ ನೋಂದಣಾಧಿಕಾರಿ ಸೂಚಿಸಿದ್ದಾರೆ.
ನಗರ ಪ್ರದೇಶಗಳಲ್ಲಿ ಕೃಷಿಯೇತರ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಆಸ್ತಿ ತಂತ್ರಾಂಶವನ್ನು ರೂಪಿಸಿದ್ದು, ಇ-ಆಸ್ತಿ ತಂತ್ರಾಂಶವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2.0 ತಂತ್ರಾಂಶದೊಂದಿಗೆ ಸಂಯೋಜಿಸಿ ಪ್ರಾಯೋಗಿಕವಾಗಿ 2020ರಿಂದ ರಾಮನಗರ ಮತ್ತು ಕನಕಪುರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಾರಿಗೊಳಿಸಿದ್ದು, ಇದು ಯಶಸ್ವಿಯಾಗಿದೆ.
ಕಾರಣವೇನು?
ಇ-ಖಾತಾ ಸಂಯೋಜನೆಯಿಂದ ಸ್ವತ್ತುಗಳ ನೋಂದಣಿ ವೇಳೆ ಮೋಸ ಹೋಗುವುದನ್ನು ತಡೆಯಬಹುದು. ಸ್ವತ್ತಿನ ಸ್ವರೂಪ ಮತ್ತು ಮತ್ತು ನೈಜ ಮಾಲೀಕರನ್ನು ಗುರುತಿಸಲು ಸಾಧ್ಯ. ಭವಿಷ್ಯದಲ್ಲಿ ಉಂಟಾಗಬಹುದಾದ ವ್ಯಾಜ್ಯ ಕಾನೂನು ತೊಂದರೆಗಳನ್ನು ತಪ್ಪಿಸಬಹುದು ಎಂದು ಕಂದಾಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಏನು ಮಾಡಬೇಕು?
ಸರ್ಕಾರ ಎಲ್ಲ ಜಿಲ್ಲೆಗಳಲ್ಲಿ ಆಸ್ತಿಗಳ ನೋಂದಣಿ ಮಾಡಲು ಇ-ಖಾತಾ ಕಡ್ಡಾಯಗೊಳಿಸಿರುವುದರಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ಜನರು ತಮ್ಮ ಆಸ್ತಿಯನ್ನು ಮಾರಾಟ ಮಾಡಬೇಕು ಎಂದರೆ ಮೊದಲು ಇ-ಖಾತಾ ಪಡೆದುಕೊಳ್ಳಬೇಕು. ಇದರ ಸಹಾಯದಿಂದ ಮಾತ್ರ ನಕಲಿ ನೋಂದಣಿ ತಡೆಯಬಹುಹುದು ಎಂದು ಕಂದಾಯ ಇಲಾಖೆ ತಿಳಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಬಡಾವಣೆ ಮತ್ತು ವಸತಿ ಯೋಜನೆಗಳ ಆಸ್ತಿಗಳಿಗೆ ಯುನಿಫೈಡ್ ಲ್ಯಾಂಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌ನಲ್ಲಿ ಇ-ಖಾತಾ ನೀಡಿದೆ. ಇದನ್ನೂ ಕಾವೇರಿ 2.0 ತಂತ್ರಾಂಶದ ಜತೆ ಸಂಯೋಜನೆ ಮಾಡಲಾಗಿದ್ದು, ಇಲ್ಲಿಂದಲೇ ಮಾಹಿತಿ ಪಡೆದು ಆಸ್ತಿಗಳ ನೋಂದಣಿ ಮಾಡಬೇಕಿದೆ.
ಎಚ್ಚರಿಕೆ ನೀಡಿದ ಕಂದಾಯ ಇಲಾಖೆ
ಇ-ಸ್ವತ್ತು ತಂತ್ರಾಂಶ ಮತ್ತು ಕಾವೇರಿ 2.0 ಸಾಫ್ಟ್‌ವೇರ್ ಸಂಯೋಜಿಸಲಾಗಿದೆ. ಆದ್ದರಿಂದ ಜನರು ತಮ್ಮ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದಲ್ಲಿ ಖಾತಾ ಪಡೆದ ಮೇಲಷ್ಟೇ ದಸ್ತಾವೇಜು ನೋಂದಣಿ ಪ್ರಕ್ರಿಯೆ ನಡೆಯಲಿದೆ. ಕೈ ಬರಹ ಅಥವಾ ಭೌತಿಕ ಖಾತಾ ಪಡೆದುನೋಂದಣಿ ನಡೆಸಿದರೆ ಅಂತಹ ಸಬ್ ರಿಜಿಸ್ಟ್ರಾರ್, ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಕಂದಾಯ ಇಲಾಖೆ ಎಚ್ಚರಿಕೆ ನೀಡಿದೆ.
2006ರಲ್ಲಿ ಕೃಷಿ ಜಮೀನು ನೋಂದಣಿಗೆ ಭೂಮಿ ತಂತ್ರಾಂಶವನ್ನು ಕಾವೇರಿ ತಂತ್ರಾಂಶಕ್ಕೆ ಸಂಯೋಜಿಸಿ ಸರ್ವೆ ನಕ್ಷೆ ನಮೂನೆ-11ಇ ಕಡ್ಡಾಯಗೊಳಿಸಿ ಮೋಜಿಣಿ ಸಾಫ್ಟ್‌ವೇರ್‌ಗೆ ಲಿಂಕ್ ಮಾಡಲಾಗಿತ್ತು. ಗ್ರಾಮ ಪಂಚಾಯತ್ ವ್ಯಾಪ್ತಿಯ ಕೃಷಿಯೇತರ ಸ್ವತ್ತುಗಳ ದಸ್ತಾವೇಜು ನೋಂದಣಿಗೆ ಇ-ಸ್ವತ್ತು ತಂತ್ರಾಂಶವನ್ನು ಕಾವೇರಿ ಸಾಫ್ಟ್‌ವೇರ್ ಜತೆ 2014ರಲ್ಲಿ ಸಂಯೋಜಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ: Property Registration: ಇನ್ನು ಸರ್ಕಾರಿ ರಜಾ ದಿನಗಳಲ್ಲೂ ಆಸ್ತಿ ನೋಂದಣಿ ಮಾಡಬಹುದು!