Wednesday, 8th January 2025

ED Raid: ಬಿಬಿಎಂಪಿ ಮುಖ್ಯ ಆಯುಕ್ತರ ಕಚೇರಿಗೆ ಇಡಿ ದಾಳಿ, ಬೋರ್‌ವೆಲ್‌ ಹಗರಣ ತನಿಖೆ

bbmp

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಖ್ಯ ಆಯುಕ್ತರ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ED raid) ಅಧಿಕಾರಿಗಳು ನಿನ್ನೆ ದಿಢೀರ್ ದಾಳಿ ನಡೆಸಿದ್ದಾರೆ. ಬೆಳಗ್ಗೆ 11 ಗಂಟೆಗೆ ಏಳು ಇಡಿ ಅಧಿಕಾರಿಗಳ ತಂಡ ಕೇಂದ್ರ ಕಚೇರಿಯಲ್ಲಿರುವ ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರ ಕಚೇರಿಯಲ್ಲಿ ಶೋಧ ನಡೆಸಿದೆ.

2016ರಲ್ಲಿ ನಡೆದಿದೆ ಎನ್ನಲಾದ ಬೋರ್‌ವೆಲ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಈ ದಾಳಿ ನಡೆಸಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ಕೊರೆಸಿದ್ದ ಬೋರ್‌ವೆಲ್‌ನಲ್ಲಿ 960 ಕೋಟಿ ರೂಪಾಯಿ ಪೈಕಿ 400 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆದಿದ್ದು ಇದೇ ಅವಧಿಯಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಎಇ, ಎಇಇಗಳನ್ನೂ ವಿಚಾರಣೆ ನಡೆಸಲಾಗುತ್ತಿದೆ.

ದಾಳಿ ವೇಳೆ ಇಡಿ ಅಧಿಕಾರಿಗಳು ಪ್ರಮುಖ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಸಂಗ್ರಹಿಸುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA)ಯ ನಿಬಂಧನೆಗಳ ಅಡಿಯಲ್ಲಿ ಬಿಬಿಎಂಪಿಗೆ ಸಂಬಂಧಿಸಿದ ಸುಮಾರು ಆರು ಕಚೇರಿಗಳನ್ನು ಶೋಧಿಸಲಾಗಿದೆ. 2016ರಿಂದ 2019ರ ನಡುವೆ ಬೋರ್‌ವೆಲ್ ಮತ್ತು ಆರ್‌ಒ ಪ್ಲಾಂಟ್‌ಗಳ ಬಗ್ಗೆ 2020ರ ಜೂನ್ 16ರಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದೇನೆ ಎಂದು ಬಿಜೆಪಿ ಮುಖಂಡ ರಮೇಶ್ ತಿಳಿಸಿದರು.

ದಾಳಿಗಳ ಬಗ್ಗೆ ಬಿಬಿಎಂಪಿ ಇಂಜಿನಿಯರ್-ಇನ್-ಚೀಫ್ ಬಿ ಎಸ್ ಪ್ರಹ್ಲಾದ್ ಅವರು ಇಡಿ ತಮ್ಮ ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿದೆ. ಅಧಿಕಾರಿಗಳು 2016 ಮತ್ತು 2019ರ ನಡುವೆ ಸ್ಥಾಪಿಸಲಾದ ಬೋರ್‌ವೆಲ್‌ಗಳು ಮತ್ತು ಆರ್‌ಒ ಘಟಕಗಳಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಗಾಗಿ ಬಂದಿದ್ದಾರೆ ಎಂದು ತಿಳಿಸಿದರು. ಇಡಿ ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿದೆ ಮತ್ತು ನಾವು ಅವರಿಗೆ ಸಹಕರಿಸುತ್ತಿದ್ದೇವೆ. ನಾವು ದಾಖಲೆಗಳನ್ನು ನೀಡುತ್ತಿದ್ದೇವೆ. ಅವರು ಏನು ಕೇಳುತ್ತಾರೋ ಅದನ್ನು ನಾವು ನೀಡುತ್ತೇವೆ ಎಂದು ಪ್ರಹ್ಲಾದ್ ಹೇಳಿದರು. ಜತೆಗೆ ವಿವಿಧ ಇಲಾಖೆಗಳ ಮುಖ್ಯಸ್ಥರ ಜತೆ ಸಭೆ ನಡೆಯುತ್ತಿದೆ. ನಾವು ಅವರನ್ನು ಇಡಿ ಅಧಿಕಾರಿಗಳಿಗೆ ಪರಿಚಯಿಸುತ್ತಿದ್ದೇವೆ ಎಂದರು.

Leave a Reply

Your email address will not be published. Required fields are marked *