Sunday, 8th September 2024

ವಿದ್ಯಾವಂತರೇ ಜಾಸ್ತಿ ಭ್ರಷ್ಟರು, ಅನಕ್ಷರಸ್ಥರೇ ಪ್ರಾಮಾಣಿಕರು

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ – 37

ಮೌಲ್ಯಗಳನ್ನು ಬಿಟ್ಟು ಬೇರೆ ಕಾನೂನಿನಿಂದ ಇದಕ್ಕೆ ಮದ್ದಿಲ್ಲ

ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ನ್ಯಾ.ಸಂತೋಷ್ ಹೆಗ್ಡೆ

ಬೆಂಗಳೂರು: ನಮ್ಮಲ್ಲಿ ವಿದ್ಯಾವಂತರೇ ಹೆಚ್ಚು ಭ್ರಷ್ಟರಾಗಿದ್ದಾರೆ, ಅವಿದ್ಯಾಂತರೇ ಪ್ರಮಾಣಿಕರು. ವಿದ್ಯಾವಂತರಿಗೆ ಭ್ರಷ್ಟಾಚಾರದ ದಾರಿಗಳು ಗೊತ್ತಿವೆ. ಹೀಗಾಗಿ, ಉತ್ತಮ ಮೌಲ್ಯಗಳ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದೇ ಹೊರತು ಕಾನೂನಿನಿಂದ ಸಾಧ್ಯವಿಲ್ಲ ಎಂದು ಲೋಕಾಯುಕ್ತ ನಿವೃತ್ತ ನ್ಯಾಯ ಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಭ್ರಷ್ಟಾಚಾರಕ್ಕೆ ಗಲ್ಲು ಶಿಕ್ಷೆ ಇರುವಂತಹ ದೇಶಗಳಲ್ಲಿ ಭ್ರಷ್ಟಾಚಾರದ ಪ್ರಮಾಣ ಭಾರತಕ್ಕಿಂತ ಜಾಸ್ತಿಯಿದೆ. ನಮ್ಮ ದೇಶದಲ್ಲಿ ಹಿಂದೆ ಭ್ರಷ್ಟಾ ಚಾರ ಕಡಿಮೆಯಿದ್ದದ್ದೂ ಸಮಾಜದಲ್ಲಿದ್ದ ಮೌಲ್ಯಗಳಿಂದ. ಈಗ ಎಲ್ಲರೂ ಅಲ್ಪಕಾಲದಲ್ಲಿ ದುಡ್ಡು ಮಾಡಬೇಕು ಎಂಬ ಆಸೆಗೆ ಬಿದ್ದು ದುಡ್ಡು ಮಾಡುವ ಕಡೆಗೆ ಗಮನ ನೀಡಿ, ಭ್ರಷ್ಟಾಚಾರದಲ್ಲಿ ತೊಡಗುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು. ಜೈಲಿಗೆ ಹೋಗಿ ಜಾಮೀನು ಪಡೆದು ಬಂದವರಿಗೆ ಸೇಬಿನ ಹಾರ ಹಾಕುತ್ತೇವೆ, ಅಷ್ಟರಮಟ್ಟಿಗೆ ಸಮಾಜ ದಲ್ಲಿ ಮೌಲ್ಯಗಳು ಕುಸಿತವಾಗಿದೆ. ಇದನ್ನು ಬೆಳೆಸುವ ಕೆಲಸ ಆಗಬೇಕು.

ಸಮಾಜವನ್ನು ಈ ಮಟ್ಟಕ್ಕೆ ತಂದಿದ್ದು ನನ್ನ ವಯಸ್ಸಿನವರು. ಇದನ್ನು ಸರಿಪಡಿಸಲು ಯುವಕರಿಗೆ ಮಾತ್ರ ಸಾಧ್ಯ. ಹೀಗಾಗಿ, ಇಂತಹ ಯುವಜನರಲ್ಲಿ ತೃಪ್ತಿ, ಮಾನವೀಯತೆ ಎಂಬುದನ್ನು ಬೆಳೆಸಬೇಕು. ಅದಕ್ಕೆ ನಾವು ಮಾದರಿ ಯಾಗಬೇಕು. ನಾವು ಪ್ರಾಮಾಣಿಕರಾಗಿ, ಮಕ್ಕಳಿಗೆ ಹೇಳಬೇಕು. ಬರೀ ಮಾತಲ್ಲಿ ಹೇಳಿ, ವೈಯಕ್ತಿಕವಾಗಿ ನಾನು ಸರಿ ಆಗದಿದ್ದರೆ, ನನ್ನನ್ನು ಇಷ್ಟರಲ್ಲಿ ಬೀದಿಗೆ ಎಸೆಯುತ್ತಿದ್ದರು. ಹೀಗಾಗಿ, ನಾವು ನುಡಿದಂತೆ ನಡೆಯುವುದು ಅವಶ್ಯಕ ಎಂದರು.

೨೦೧೦ರಲ್ಲಿ ಹರೀಶ್ ನಂಜಪ್ಪ ಎಂಬ ಯುವಕನಿಗೆ ಅಪಘಾತವಾಗುತ್ತೆ. ಆದರೆ, ಸುತ್ತ ಇದ್ದವರು ಆತನನ್ನು ಆಸ್ಪತ್ರೆಗೆ ಸೇರಿಸದೆ ಫೋಟೋ ತೆಗೆಯತ್ತಿದ್ದರು. ಅವರಲ್ಲಿ ಮಾನವೀಯತೆ ಸತ್ತು ಹೋಗಿತ್ತು. ದೇಹ ಎರಡು ತುಂಡಾಗಿ ಬಿದ್ದಿದ್ದ ಆ ಯುವಕ, ತನ್ನ ಅಂಗಾಂಗ ದಾನ ಮಾಡಲು ಬಯಸುತ್ತಾನೆ. ಇದು ಮಾನವೀ ಯತೆ ಮೊದಲ ಪಾಠ. ಇಂತಹ ಮಾನವೀಯ ಮೌಲ್ಯಗಳು ಮನುಷ್ಯನ ಮನದೊಳಗೆ ಮೂಡಿದರೆ ವ್ಯವಸ್ಥೆ ತನ್ನಿಂದ ತಾನೇ ಸರಿಯಾಗುತ್ತದೆ. ಯಾವ ಬದಲಾವಣೆಯೂ ಕಾನೂನು ಮೂಲಕ ಬಂದರೆ ಎಫೆಕ್ಟ್ ಆಗಲ್ಲ. ಹಿಂದೆ ನೈತಿಕ ಶಿಕ್ಷಣ ಇತ್ತು. ಈಗ ಅದೂ ಇಲ್ಲ. ಭ್ರಷ್ಟಾಚಾರದ ಬೇರು ಯಾರು, ಮರ ಯಾರು ಎಂದು ಹೇಳಲು ಸಾಧ್ಯವಿಲ್ಲ. ನೈತಿಕತೆ ಕಾನೂನಿನಿಂದ ಬರುವುದಿಲ್ಲ, ಮೌಲ್ಯಗಳನ್ನು ಗಟ್ಟಿಗೊಳಿಸುವುದಷ್ಟೇ ಪರಿಹಾರ ಎಂದರು.

ಎಸಿಬಿ ಯಾವ ಮಂತ್ರಿ ಮೇಲೆಯೂ ದಾಳಿ ಮಾಡಿಲ್ಲ: ಲೋಕಾಯುಕ್ತವನ್ನು ದುರ್ಬಲಗೊಳಿಸಲು ಎಸಿಬಿಯನ್ನು ಸ್ಥಾಪನೆ ಮಾಡಲಾಯಿತು. ಎಸಿಬಿ ಈವರೆಗೆ ಯಾವುದೇ ಮಂತ್ರಿ ಮೇಲೆ ದಾಳಿ ಮಾಡಿಲ್ಲ. ಗಣಿ ವರದಿಯಲ್ಲಿ 3 ಮುಖ್ಯಮಂತ್ರಿಗಳು, ಎಂಟು ಸಚಿವರು ಮತ್ತು ಅನೇಕ ಐಎಎಸ್ ಅಧಿಕಾರಿಗಳ ಹೆಸರುಗಳಿವೆ. ಆದರೆ, ಅವರಿಗ್ಯಾರಿಗೂ ಶಿಕ್ಷೆಯಾಗಲಿಲ್ಲ. 1986ರಲ್ಲಿ ಕರ್ನಾಟಕ ಲೋಕಾಯುಕ್ತ ಕಾಯಿದೆ ಜಾರಿಗೆ ತಂದರು. ಇದು ಸ್ವತಂತ್ರವಾಗಿ ಇರಬೇಕಿತ್ತು. ವೆಂಕಟಾ ಚಲಯ್ಯ ಅವರು ಸಂಸ್ಥೆಗೆ ಒಂದು ಮುಖವಾಡ ಕೊಟ್ಟರು, ನಾನು ಅದನ್ನು ಮತ್ತಷ್ಟು ಬಲಗೊಳಿಸಿದೆ. ಆದರೆ, ಆಳುವವರು ಎಸಿಬಿ ಸ್ಥಾಪಿಸಿದರು. ಲೋಕಾಯುಕ್ತದ ಮೇಲೆ ನಿಮಗೆ ಅಷ್ಟೊಂದು ಏಕೆ ಭಯ? ಎಸಿಬಿ ಗೃಹ ಸಚಿವರ ಅಧೀನದಲ್ಲಿರುವ ವ್ಯವಸ್ಥೆ. ಸಣ್ಣಪುಟ್ಟವರ ಮೇಲೆ ದಾಳಿ ಮಾಡುತ್ತಿದೆ. ಸ್ವತಂತ್ರ ವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದು ದುರಂತ ಎಂದರು.

ನಾಯಕತ್ವ ಬೇಡ, ಮೌಲ್ಯ ಬೋಧನೆಯಷ್ಟೆ !: ಇಂತಹದ್ದೊಂದು ಬದಲಾವಣೆಯ ಹೋರಾಟಕ್ಕೆ ಸಂತೋಷ್ ಹೆಗ್ಡೆ ಅವರು ಏಕೆ ನಾಯಕತ್ವ ವಹಿಸಬಾರದು ಎಂಬ ಕೇಳುಗರ ಪ್ರಶ್ನೆಗೆ ಉತ್ತರಿಸಿದ ಅವರು, ನಾಯಕತ್ವ ವಹಿಸಲು ಯುವಕರು ಮುಂದೆ ಬರಬೇಕು. ನಾನು ಅವರ ಹಿಂದೆ ನಡೆಯುತ್ತೇನೆ. ಸಮಾಜಕ್ಕೆ ಭ್ರಷ್ಟಾಚಾರವನ್ನು ನಿಗ್ರಹಿಸಲು ಬೇಕಾಗುವ ಮೌಲ್ಯಗಳ ಬಗ್ಗೆ ಮನವರಿಕೆ ಮಾಡಿಕೊಡುವುದು ಮಾತ್ರ ನನ್ನ ಕೆಲಸ. ಸುಮಾರು 1600 ಕಾರ್ಯಕ್ರಮಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿದ್ದೇನೆ. ಕರೋನಾ ಕಾರಣದಿಂದ ಒಂದೂವರೆ ವರ್ಷದಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ಮುಂದೆಯೂ ಕಾರ್ಯಕ್ರಮಗಳ ಮೂಲಕ ಯುವಜನರನ್ನು ಜಾಗೃತಿ ಗೊಳಿಸುವ ಕೆಲಸ ಮಾಡುತ್ತೇನೆ. ಇಂತಹದ್ದೊಂದು ಹೋರಾಟಕ್ಕೆ ಯಾರಾದರೂ ಮುಂದಾದರೆ ನಾನೂ ಅವರೊಂದಿಗೆ ನಿಲ್ಲುತ್ತೇನೆ ಎಂದು ತಿಳಿಸಿದರು.

ಮನಕಲಕುವ ಘಟನೆಗಳು: 2008ರಲ್ಲಿ ಆರು ತಿಂಗಳ ಮಗು ಕರೆದುಕೊಂಡು ಬಂದರು. ಅದಕ್ಕೆ ಗುದದ್ವಾರವೇ ಇರಲಿಲ್ಲ. ವೈದ್ಯರು ಮೆಡಿಕಲ್ ಕಾಲೇಜಿನಲ್ಲಿ ದುರಾಸೆಗೆ ಬಿದ್ದು, ಚಿಕಿತ್ಸೆ ನೀಡಲಿಲ್ಲ. ಮಣಿಪಾಲ್ ಆಸ್ಪತ್ರೆಯಲ್ಲಿ ನಾವೇ ಆಪರೇಷನ್ ಮಾಡಿಸಿದೆವು. ಈಗ ಹತ್ತು ವರ್ಷದ ಮಗು ಅದು. ಮತ್ತೊಬ್ಬಾಕೆಗೆ 250 ರು. ಮಗ ಕಳಿಹಿಸುತ್ತಿದ್ದ ಹಣದಲ್ಲಿ ಪೋಮ್ಯಾನ್ ಶೇ.10 ರಷ್ಟು ಲಂಚ ಪಡೆಯುತ್ತಿದ್ದ. ಇಲಾಖೆಯ ಅಧಿಕಾರಿಗಳಿಗೆ ಹೇಳಿದರೆ, ಇದು ಕೇವಲ 25 ರು. ಕೇಸ್ ಸರ್ ಎಂದು ಕೈ ಚೆಲ್ಲಿದರು. ಮತ್ತೊಂದು ಪ್ರಕರಣದಲ್ಲಿ ಹೈದರಾಬಾದ್ ವ್ಯಕ್ತಿಯೊಬ್ಬರಿಗೆ ಶವ ನೀಡಲು ನಿರಾಕರಿಸಿದರು.

ನಾನೇ ಸ್ವತಃ ಹೋಗಿ ಕೇಳಿದ್ದಕ್ಕೆ ಅಲ್ಲಿನ ವೈದ್ಯರು, ಏನ್ರಿ ಅವಸರ, ಶವ ಏನು ಕೊಳೆತು ಹೋಗಲ್ಲ, ಜೀವಂತ ರೋಗಿಗಳ ಪರೀಕ್ಷೆ ಮಾಡುವುದು ಇಂಪಾ ರ್ಟೆಂಟೋ ಇಲ್ಲ, ಶವ ಪರೀಕ್ಷೆ ಮಾಡುವುದು ಇಂಪಾರ್ಟೆಂಟೋ ಎಂದರು. ಇದಕ್ಕೆ ಕಾರಣ ಏನೆಂಬುದು ನನಗೆ ಅರ್ಥವಾಗಿತ್ತು ಎಂದು ನಮ್ಮ ಲೋಕಾಯುಕ್ತ ರಾಗಿದ್ದಾಗಿನ ಮನಕಲಕುವ ಘಟನೆಗಳ ಬಗ್ಗೆ ಮೆಲುಕು ಹಾಕಿದರು.

ಎಸಿಬಿ ಸ್ಥಾಪನೆ ಮಾಡಿದ್ದು ನಮ್ಮ ಪಕ್ಷದ ತಪ್ಪು !: ನಮ್ಮದೇ ಸರಕಾರ ಎಸಿಬಿ ಮಾಡಿದ್ದು ಲೋಕಾಯುಕ್ತ ಹಲ್ಲು ಕೀಳಲು ಎಂಬುದು ಗೊತ್ತಿದೆ. ಅದು ನೂರಕ್ಕೆ
ನೂರರಷ್ಟು ತಪ್ಪು ನಿರ್ಧಾರ. ಆದರೆ, ಅದನ್ನು ವಿರೋಧಿಸಿ, ಅಧಿಕಾರಕ್ಕೆ ಬಂದರೆ ಬಲಗೊಳಿಸುವ ಭರವಸೆ ನೀಡಿದ್ದವರೂ ಸುಮ್ಮನಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್. ಶಂಕರ್ ಹೇಳಿದರು.

ವೈಟ್‌ಟಾಪಿಂಗ್ ವಿರೋಧಿಸಿ ಈಗ ಅದನ್ನೇ ಮಾಡುತ್ತಾರೆ. ಹೀಗೆ ಎಲ್ಲ ಪಕ್ಷಕ್ಕೂ ಕೇಳುವವರೇ ಇಲ್ಲದ ವ್ಯವಸ್ಥೆ ಬೇಕಾಗಿದೆ. ನಾನು ಪ್ರತಿನಿಧಿಸುವ ಪಕ್ಷವೂ ಸೇರಿ ಎಲ್ಲ ಪಕ್ಷಗಳಲ್ಲಿ ಭ್ರಷ್ಟಾಚಾರವಿದೆ. ಚುನಾವಣೆ ವ್ಯವಸ್ಥೆ ಹದಗೆಟ್ಟಿದೆ. ಜನರು ಹಣ ಕೇಳುತ್ತಾರೆ ಎನ್ನುವುದಕ್ಕಿಂತ ರಾಜಕಾರಣಿಗಳು ದಾರಿ ತಪ್ಪಿಸಿದ್ದೇವೆ. ಹೀಗಾಗಿ, ಚುನಾವಣಾ ಸುಧಾರಣೆಗೆ ಕಾನೂನು ತರುವುದು ಸೂಕ್ತ. ಚುನಾವಣಾ ಪ್ರಕ್ರಿಯೆ ರಾಜಕಾರಣದಿಂದ ಬೇರ್ಪಡಿಸಬೇಕು.

ನ್ಯಾಯಾಂಗದಲ್ಲಿ ಉತ್ತರದಾಯಿತ್ವ ತರಬೇಕು. ಇದನ್ನು ಸಂತೋಷ್ ಹೆಗ್ಡೆ ನೇತೃತ್ವದಲ್ಲಿ ಮಾಡಬಹುದು. ಹೋರಾಟಕ್ಕೆ ಮುಂಚೂಣಿ ಬರೆಯುವ ಪ್ರಯತ್ನ ನಿಮ್ಮಂಥವರಿಂದಾಗಲಿ. ಅತ್ಯುನ್ನತ ಹುದ್ದೆ ಅಲಂಕರಿಸಿ ರಾಜ್ಯಪಾಲರಾಗುವುದನ್ನು ನೋಡಿದ್ದೇವೆ. ಜಾತಿ ಮತ್ತು ಹಣದ ಪ್ರಭಾವ ಕಡಿಮೆ ಮಾಡದಿದ್ದರೆ,
ಜನರ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಹೆಗ್ಡೆಯವರ ಮುತ್ತಿನ ನುಡಿಗಳು

ತ್ವರಿತವಾಗಿ ನ್ಯಾಯ ಸಿಗದಿದ್ದರೆ ಆ ನ್ಯಾಯಕ್ಕೆ ಬೆಲೆಯಿಲ್ಲ.

ಜೈಲಿಗೆ ಹೋಗಿ ಜಾಮೀನು ಪಡೆದು ಬಂದವರಿಗೆ ಸೇಬಿನ ಹಾರ ಹಾಕುತ್ತೇವೆ.ನೀವು ಎಷ್ಟು ಹಣ ಬೇಕಾದರೂ ಮಾಡಿ, ಕಾನೂನು ವ್ಯಾಪ್ತಿಯಲ್ಲಿ ಮಾಡಿ.

ರಾಜಕಾರಣಿಗಳಿಗೆ ಸದನದ ಹೊರಗೆ ಯಾವುದೇ ಅಧಿಕಾರವಿಲ್ಲ.

ದೇಶದ ಮೊದಲ ಹಗರಣ 52 ಲಕ್ಷ, ಇತ್ತೀಚಿನ ಕೋಲ್ ಗೇಟ್ ಹಗರಣ 1.84 ಲಕ್ಷ ಕೋಟಿ

ಇಂದಿರಾ ಗಾಂಧಿಯನ್ನೇ ಕೊಂದರು, ಇನ್ನು ನಾನ್ಯಾರು ಎಂದು ಸೆಕ್ಯುರಿಟಿ ಬೇಡ ಎಂದೆ

ಭ್ರಷ್ಟಾಚಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕು

ಮನುಷ್ಯನಲ್ಲಿ ದುರಾಸೆ ಇರುವವರೆಗೆ ಕಾನೂನಿಗೆ ಬೆಲೆಯಿಲ್ಲ.

ವ್ಯಕ್ತಿಗಳಿಂದಾಗಿ ಸಂಸ್ಥೆಯ ಮೌಲ್ಯ ಕುಸಿದಿದೆ. ಅನರ್ಹರಿಗೆ ಗೌರವ ಸಿಗಬಾರದು

ವೃತ್ತಿ ಜೀವನದಲ್ಲಿ ಒತ್ತಡಕ್ಕೆ ಮಣಿದಿಲ್ಲ, ತಲೆಬಾಗಿಲ್ಲ

ಯಾರ ಕಾಲೂ ಹಿಡಿಯಲಿಲ್ಲ, ಸಲಾಂ ಹೊಡೆಯಲಿಲ್ಲ, ಅದೃಷ್ಟದಿಂದ ಲೋಕಾಯುಕ್ತನಾದೆ.

ತೃಪ್ತಿ, ಮಾನವೀಯ ಮೌಲ್ಯಗಳಿಂದ ಮಾನವೀಯ ಸಮಾಜ ಸಾಧ್ಯ.

ಅತ್ಯಾಚಾರಿಗಳು, ಅನಾಚಾರಿಗಳು ನಮ್ಮನ್ನು ಆಳುತ್ತಿದ್ದಾರೆ.

ನನಗೆ ಇರುವುದೊಂದೇ ಕಾರು, ಒಂದೇ ಅಪಾರ್ಟ್ ಮೆಂಟ್, ಒಬ್ಬಳೇ ಹೆಂಡತಿ.

Leave a Reply

Your email address will not be published. Required fields are marked *

error: Content is protected !!