Thursday, 26th December 2024

Ee Paada Punyapaada Movie: ʼಈ ಪಾದ ಪುಣ್ಯಪಾದʼ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ‌ ಮಾಡಿದ ಶ್ರೀಮುರಳಿ

Ee Paada Punyapaada Movie

ಬೆಂಗಳೂರು: ದಾರಿ ಯಾವುದಯ್ಯ ವೈಕುಂಠಕ್ಕೆ ಚಿತ್ರದ ಖ್ಯಾತಿಯ ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರು ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಮತ್ತೊಂದು ಚಿತ್ರ ʼಈ ಪಾದ ಪುಣ್ಯಪಾದʼ (Ee Paada Punyapaada Movie). ಇತ್ತೀಚಿಗೆ ಈ ಚಿತ್ರದ ಮೊದಲ ಪೋಸ್ಟರ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ಅವರು ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.

ಇದೊಂದು ಆನೆ ಕಾಲು ರೋಗಿಯ ಕಥೆಯಾಧಾರಿತ ಚಿತ್ರವಾಗಿರುವುದರಿಂದ ಪ್ರತಿಯೊಬ್ಬ ಪ್ರೇಕ್ಷಕನಿಗೂ ಕೂಡ ಹೊಸ ಆಯಾಮದಲ್ಲಿ ಈ ಚಿತ್ರ ಪರಿಣಾಮ ಬೀರಬಹುದು ಎಂಬುದು ನಿರ್ದೇಶಕರ ಆಶಯ.

ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ರೀತಿಯ ಖಾಯಿಲೆಗಳು ಸಂಭವಿಸಿದಾಗ ಆ ರೋಗಕ್ಕಿಂತ ಮಾನಸಿಕವಾಗಿಯೇ ಯಾತನೆ ಪಡುವುದು ಜಾಸ್ತಿ ಆಗಿರುತ್ತದೆ. ಯಾವುದೇ ರೋಗ ಬಂದರೂ ಕೂಡ ನಾವು ಎದೆಗುಂದದೆ ತಾಳ್ಮೆಯಿಂದ ಅದನ್ನು ಎದುರಿಸಬೇಕು ಎಂಬುದೇ ಈ ಚಿತ್ರದ ಕಥೆಯಾಗಿದೆ. ಯಾವುದೇ ರೋಗ ಬಂದಿರುವ ವ್ಯಕ್ತಿಯನ್ನು ಯಾವ ರೀತಿ ಪ್ರೀತಿಯಿಂದ ನೋಡಿಕೊಳ್ಳಬೇಕು, ಸಾಂತ್ವನ ಹೇಳಬೇಕು ಎಂಬುದು ಈ ಚಿತ್ರದ ಮುಖಾಂತರ ಕಾಣಿಸುತ್ತದೆ. ಜತೆಗೆ ಸಾಮಾಜಿಕ ಪರಿಣಾಮ ಬೀರುವಂತಹ ಚಿತ್ರಗಳು ಇತ್ತೀಚೆಗೆ ಕಡಿಮೆಯಾಗಿರುವುದರಿಂದ ಇಂತಹ ಚಿತ್ರಕ್ಕೆ ಪ್ರೋತ್ಸಾಹ ಕೊಡಬೇಕೆಂಬುದು ಇಡೀ ಚಿತ್ರತಂಡದ ಆಶಯ ಆಗಿದೆ.

ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ ರೋರಿಂಗ್ ಸ್ಟಾರ್ ಶ್ರೀ ಮುರಳಿ ಮಾತನಾಡಿ, ಹೊಸಬರಿಗೆ ಪ್ರೋತ್ಸಾಹ ನೀಡಬೇಕು ಹೊಸಬರಿಗೆ ದಾರಿಯಾಗಬೇಕು. ಹಾಗಾಗಿ ನಾನು ಈ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆಗೊಳಿಸುತ್ತಿರುವುದಾಗಿ ತಿಳಿಸಿದರು.

ಈ ಸುದ್ದಿಯನ್ನೂ ಓದಿ | Nail Art Expert Interview: ಯುವತಿಯರನ್ನು ಆಕರ್ಷಿಸುತ್ತಿರುವ ನೇಲ್ ಆರ್ಟ್ ಟ್ರೆಂಡ್ ಬಗ್ಗೆ ಇಲ್ಲಿದೆ ಉಪಯುಕ್ತ ಟಿಪ್ಸ್

ಈ ಚಿತ್ರದ ನಾಯಕ ನಟರಾಗಿ ಆಟೋ ನಾಗರಾಜ್ ಅಭಿನಯಿಸಿದ್ದಾರೆ. ರಶ್ಮಿ, ಚೈತ್ರ, ಪ್ರಮೀಳಾ ಸುಬ್ರಹ್ಮಣ್ಯ, ಮನೋಜ್, ಹರೀಶ್ ಕುಂದೂರು, ಬೇಬಿ ರಿದಿ, ಪವಿತ್ರ, ಬಾಲರಾಜ್ ವಾಡಿ, ರೋಹಿಣಿ, ಶಂಕರ್ ಭಟ್, ಪ್ರೀತಿ, ಮೀಸೆ ಮೂರ್ತಿ ಇನ್ನೂ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಅನಂತ ಆರ್ಯನ್ ನೀಡಿದ್ದಾರೆ. ಈ ಚಿತ್ರ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫಿಕೇಟ್ ಪಡೆದಿದೆ. ಈ ಚಿತ್ರವು ಹಲವಾರು ಚಲನಚಿತ್ರೋತ್ಸವಗಳಿಗೆ ಸ್ಪರ್ಧಿಸಲು ರೆಡಿಯಾಗಿದೆ.