Friday, 27th December 2024

Munirathna: ಮೊಟ್ಟೆ ಎಸೆತ ಪ್ರಕರಣದಲ್ಲಿ 150 ಜನರ ಮೇಲೆ ಮುನಿರತ್ನ ದೂರು, ಬಂಧಿತ ಆರೋಪಿಗಳಿಗೆ ಜಾಮೀನು

MLA Munirathna

ಬೆಂಗಳೂರು:‌ ಬೆಂಗಳೂರಿನ ರಾಜರಾಜೇಶ್ವರಿ (Bengaluru news) ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ (Munirathna) ಮೇಲಿನ ಮೊಟ್ಟೆ ದಾಳಿ (Egg throw) ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದು, ಮೂವರಿಗೂ ಜಾಮೀನು (Bail) ಸಿಕ್ಕಿದೆ. ತಮ್ಮ ಮೇಲೆ ಎಸಗಲಾದ ಮೊಟ್ಟೆ ದಾಳಿಯ ಕುರಿತು 150 ಜನರ ಮೇಲೆ ಮುನಿರತ್ನ ದೂರು ನೀಡಿದ್ದಾರೆ.

ಮೊಟ್ಟೆ ಎಸೆತದ ಸ್ಥಳದಿಂದ ಬಂಧನಕ್ಕೊಳಗಾಗಿದ್ದ ಆರೋಪಿಗಳಾದ ಚಂದ್ರು, ವಿಶ್ವನಾಥ್, ಕೃಷ್ಣಮೂರ್ತಿಗೆ ಬೆಂಗಳೂರಿನ 32ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ನಗರದ ಕಂಠೀರವ ಸ್ಟುಡಿಯೋ ಬಳಿ ಬುಧವಾರ (ಡಿಸೆಂಬರ್ 25) ಶಾಸಕ ಮುನಿರತ್ನ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮ ಆಯೋಜಿಸಿದ್ದರು. ಅದೇ ಸಂದರ್ಭದಲ್ಲಿ ಮುನಿರತ್ನ ಅವರ ತಲೆಗೆ ಮೊಟ್ಟೆ ಎಸೆಯಲಾಗಿತ್ತು. ಇದರ ಬೆನ್ನಲ್ಲೇ ನಂದಿನ ಲೇಔಟ್ ಠಾಣೆ ಪೊಲೀಸರು ವಿಶ್ವನಾಥ, ಕೃಷ್ಣಮೂರ್ತಿ ಮತ್ತು ಚಂದ್ರು ಎನ್ನುವರುನ್ನು ಬಂಧಿಸಿದ್ದರು.

ತಮ್ಮ ಮೇಲಿನ ಮೊಟ್ಟೆ ದಾಳಿಗೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ಅವರು ದೂರು ನೀಡಿದ್ದು, ಈ ದೂರಿನ ಮೇರೆಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಒಳಸಂಚು ರೂಪಿಸಿ, ಹಲ್ಲೆ ಮತ್ತು ಕೊಲೆ ಮಾಡುವ ಉದ್ದೇಶದ ಭಾಗವಾಗಿ ಮೊಟ್ಟೆ ಎಸೆಯಲಾಗಿದೆ ಎಂದು ಮುನಿರತ್ನ ದೂರಿನಲ್ಲಿ ಆರೋಪಿಸಿದ್ದಾರೆ. ಮುನಿರತ್ನ ನೀಡಿರುವ ದೂರಿನಲ್ಲಿ ಮಾಜಿ ಸಂಸದ ಡಿಕೆ ಸುರೇಶ್, ಕುಸುಮಾ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಸೇರಿದಂತೆ ನೂರರಿಂದ 150 ಜನರ ಹೆಸರಿದೆ.

ತಮ್ಮನ್ನು ಹತ್ಯೆ ಮಾಡುವ ಸಂಚಿನ ಮುಂದುವರೆದ ಭಾಗವಾಗಿ ಮೊಟ್ಟೆ ಎಸೆಯಲಾಗಿದೆ ಎಂದು ಶಾಸಕ ಮುನಿರತ್ನ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಮೊಟ್ಟೆ ಎಸೆದವರು ಎಂದು ಆರೋಪ ಎದುರಿಸುತ್ತಿರುವವರೂ ಸಹ ಪ್ರತಿದೂರು ನೀಡಿದ್ದಾರೆ. ಮುನಿರತ್ನ ಅವರ ಬೆಂಬಲಿಗರೇ ಗುಂಪು ಕಟ್ಟಿಕೊಂಡು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: MLA Munirathna: ಮುನಿರತ್ನ ಮೇಲೆ ಕೆಮಿಕಲ್‌ ಮಾದರಿ ಪದಾರ್ಥವಿದ್ದ ಮೊಟ್ಟೆ ಎಸೆಯಲಾಗಿದೆ: ಸಂಸದ ಡಾ.ಮಂಜುನಾಥ್