Thursday, 12th December 2024

ಏಕಮಾತ್ರಂ ಕಲಿಸಿದಾತಂ ಗುರು

ಸಾಮಾನ್ಯ ಸಾಧಕ ಅಸಾಮಾನ್ಯ ಸಾಧನೆ ಮಾಡಬಹುದು ಎನ್ನುವ ವಿಶ್ವಾಸ ತುಂಬಿದ ಗುರುವಿಗೆ ಓದುಗ ಶಿಷ್ಯನ ನುಡಿ ನಮನ

ನಾವು ಸ್ವಾಮಿತ್ವವನ್ನು ಆಗಷ್ಟೇ ಸ್ವೀಕರಿಸಿದ ಸಂಧರ್ಭ. ಆರಂಭದ ಸಾಧಕಾವಸ್ಥೆಯಲ್ಲಿ ದೂರದಿಂದಲೇ ಪ್ರೇರಣೆಯಾದ ವ್ಯಕ್ತಿ ಶ್ರೀ ವಿಶ್ವೇಶ್ವರ ಭಟ್ಟರು. ಪ್ರತಿವಾರ ಅವರ ಅಂಕಣಗಳಿಗೆ ಜಾತಕಪಕ್ಷಿಯಂತೆ ಕಾಯುತ್ತಿದ್ದ ನಾವು ಅವರು ಯಾವುದೇ ವಿಷಯದ ಮೇಲೆ ಬರೆದ ಅಂಕಣವಿದ್ದರೂ ಅದನ್ನ ಓದಿ ಆನಂದಿಸುತ್ತಿದ್ದೇವು. ಪ್ರತಿಯೊಂದು ಅಂಕಣದಿಂದ ಹೊಸದೊಂದು ವಿಷಯದ ಜ್ಞಾನ ಪಡೆದುಕೊಳ್ಳುತ್ತಿದ್ದೆವು.

ದೇಶ ಸುತ್ತು – ಕೋಶ ಓದು ಎನ್ನುವ ನಾಣ್ಣುಡಿಯಿದೆ. ಆದರೆ, ಭಟ್ಟರು ಬರೆದ ಅಂಕಣಗಳನ್ನು ಓದಿದರೆ ಸಾಕು ವಿಶ್ವಕೋಶ ಓದಿದ ಹಾಗೆ. ಲಿಂಗವನರಿಯದೆ ಏನನೂ ಅರಿತಡೆಯೂ ಫಲವಿಲ್ಲ, ಲಿಂಗವನರಿತ ಬಳಿಕ ಮತ್ತೇನನರಿದಡೆಯೂ ಫಲವಿಲ್ಲ ಎನ್ನುವ ಹಾಗೆ, ಆಡು ಮುಟ್ಟದ ಸೊಪ್ಪಿಲ್ಲ – ವಿಶ್ವೇಶ್ವರ ಭಟ್ಟರು ಬರೆಯದ ವಿಷಯವಿಲ್ಲ. ಅವರ ಲೇಖನ ಓದಿದರೆ ಎಲ್ಲವನ್ನೂ ಓದಿದ ಹಾಗೆಯೇ ಇರುತ್ತದೆ.

2004 ನೇ ಸಾಲಿನಿಂದಲೂ ಅವರ ಜೊತೆ ಆತ್ಮೀಯ ಒಡನಾಟವಿದೆ. ನಾವು ಏನೂ ಅಲ್ಲ ಎನ್ನುವ ಪರಿಸ್ಥಿತಿಯಲ್ಲೂ ನಮ್ಮ ಬಗ್ಗೆ ಅದೇ ಆತ್ಮೀಯತೆ ಹಾಗೂ ಕಕ್ಕುಲತೆ ತೋರಿದ ಜೀವ ವಿಶ್ವೇಶ್ವರ ಭಟ್ಟರದ್ದು. ಒಬ್ಬ ಸಾಮಾನ್ಯ ಕೂಡಾ ಅಸಾಮಾನ್ಯ ಸಾಧನೆ ಮಾಡಬಹುದು ಎನ್ನುವ ವಿಶ್ವಾಸವನ್ನು ನನ್ನಲ್ಲಿ ತುಂಬಿದ ಹಾಗೂ ಆ ಮೂಲಕ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನನ್ನ ಇಂದಿನ ಸಾಧನೆಗೆ ಮುನ್ನಡಿಯನ್ನು ಬರೆದವರು ವಿಶ್ವೇಶ್ವರ ಭಟ್ಟರು.

ಆಧ್ಯಾತ್ಮದಲ್ಲಿ ಸಾಧನೆ ಮಾಡಬೇಕು ಎನ್ನುವ ಗುರಿಯಿಂದಲೇ ನಾವು ಸ್ವಾಮಿತ್ವನ್ನು ಸ್ವೀಕರಿಸಿದ್ದು. ಆದರೆ, ಈ ಕ್ಷೇತ್ರದಲ್ಲೂ ವಿಶೇಷವಾದದ್ದನ್ನು ಹೇಗೆ ಸಾಧಿಸಬಹುದು ಎನ್ನುವುದರ ಬಗೆಗಿನ ದಾರೀ ದೀಪ ಅವರು ಹಾಗೂ ಅವರು ಬರೆದ ಅಂಕಣಗಳು ನೀಡಿವೆ. ಅವರ ಅಂಕಣಗಳ ಮೂಲಕ ಏನಾದರೂ ಸಾಧನೆ ಮಾಡಲು ಹೊರಟಲ್ಲಿ ಏನೆಲ್ಲಾ ತೊಂದರೆಗಳು ಬರಬಹುದು – ಯಾವ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ – ಅಡ್ಡಿ ಆತಂಕಗಳನ್ನು ಪರಿಹರಿಸಕೊಳ್ಳುವ ವಿಧಾನ ಹೀಗೆ ಹಲವಾರು ವಿಷಯಗಳನ್ನು ತಿಳಿಸಿಕೊಟ್ಟಿದ್ದಾರೆ.

ಅಲ್ಲದೆ, ನನ್ನ ಯಾವುದೇ ಸಂದೇಹದ ಪ್ರಶ್ನೆಗಳಿಗೂ ಸಮರ್ಥವಾದ ಉತ್ತರ ಹಾಗೂ ದಾರಿಯನ್ನು ತೋರಿಸಿಕೊಟ್ಟವರು ಇವರು. ಏಕಮಾತ್ರಂ ಕಲಿಸಿದಾತಂ ಗುರು ಎನ್ನುವ ಹಾಗೇ, ಇದೇ ಪ್ರೇರಣೆಯಿಂದ ನಾವು ಬರೆದ ಮೊದಲ ಸ್ಪೂರ್ತಿ ಪುಸ್ತಕವನ್ನು ನಾವು ಪ್ರೀತಿಯ ಗುರುಗಳಾದ ವಿಶ್ವೇಶ್ವರ ಭಟ್ಟರಿಗೆ ಅರ್ಪಿಸಿದ್ದೇವೆ. ನಮ್ಮ ಕಷ್ಟದ ಸಂಧರ್ಭಗಳಲ್ಲಿ ಟೀಕೆ ಟಿಪ್ಪಣಿಗಳನ್ನ ಹೇಗೆ ಸ್ವೀಕರಿಸಬೇಕು ಹಾಗೂ ಸೋಲಿನಲ್ಲಿ ಅತಿ ಹೆಚ್ಚು ಧೈರ್ಯ ತುಂಬಿದ್ದು ವಿಶ್ವೇಶ್ವರ ಭಟ್ಟರು.

ಇಂದು ವಿಶ್ವೇಶ್ವರ ಭಟ್ಟರು ಮೊದಲ ಬಾರಿಗೆ ಹರಿಹರ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಭೇಟಿ ನೀಡಿ ನಮ್ಮ ಮಠದ ವಾತಾ ವರಣವನ್ನು ನೋಡಿ ಬಹಳ ಸಂತೋಷಪಟ್ಟರು. ಬೇರೆಯವರು ಸಂತೋಷಪಡುವುದಕ್ಕೂ ಇವರು ಸಂತೋಷ ಪಡುವುದಕ್ಕೂ ಬಹಳ ವ್ಯತ್ಯಾಸವಿದೆ. ಏನೂ ಇಲ್ಲದಾಗ ನಮ್ಮನ್ನು ನೋಡಿ ದಾರಿದೀಪವಾದ ಗುರುಗಳು ಏನೋ ಸಣ್ಣದನ್ನು ಸಾಧನೆ ಮಾಡಿ ದಾಗ ನೋಡಿ ಅವರು ಪಟ್ಟ ಹೆಮ್ಮೆ – ಖುಷಿಯನ್ನು ಪದಗಳನ್ನು ವಿವರಿಸಲು ಸಾಧ್ಯವಿಲ್ಲ.

ನಾವು ಯಾವಾಗಲೂ ಅವರ ಓದುಗ ಶಿಷ್ಯ ಎನ್ನುವ ಖುಷಿ ನಮ್ಮದಾಗಿದೆ ಎಂದು ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.