ಬೆಂಗಳೂರು: ಚುನಾವಣಾ ಬಾಂಡ್‌ಗಳ ಮೂಲಕ ಹಣ ಸುಲಿಗೆ ಆರೋಪ ಪ್ರಕರಣದಲ್ಲಿ (Electoral Bonds) ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman), ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ವಿವಿಧ ಬಿಜೆಪಿ ನಾಯಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್ ಅವರು ಎಫ್‌ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಎಫ್‌ಐಆರ್ ರದ್ದು ಮಾಡಿ ಆದೇಶ ಹೊರಡಿಸಿದೆ.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಐಪಿಸಿ ಸೆಕ್ಷನ್ 384ರ ವ್ಯಾಖ್ಯಾನವು ಪ್ರತಿಯೊಂದು ಪ್ರಕರಣದ ವಾಸ್ತವಿಕ ವಿಚಾರದ ಮೇಲೆ ಬದಲಾಗುವುದಿಲ್ಲ. ಸಂತ್ರಸ್ತರು ನ್ಯಾಯಾಲಯದ ಮುಂದೆ ಬಂದಿಲ್ಲ. ಈ ಪ್ರಕರಣದಲ್ಲಿನ ದೂರುದಾರರಿಗೆ ಯಾವುದೇ ಹಾನಿಯಾಗಿಲ್ಲ. ಹೀಗಾಗಿ, ಇಲ್ಲಿ ಸುಲಿಗೆ ವಿಚಾರ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಹಿಂದೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ತಿಲಕ್ ನಗರದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಚುನಾವಣಾ ಬಾಂಡ್‌ಗಳ ಮೂಲಕ ಹಣ ಸುಲಿಗೆ ಆರೋಪದಲ್ಲಿ ನಿರ್ಮಲಾ ಸೀತಾರಾಮನ್ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಹಲವು ಬಿಜೆಪಿ ನಾಯಕರ ವಿರುದ್ಧ ತಿಲಕ್ ನಗರದ ಪೊಲೀಸ್ ಠಾಣೆಯಲ್ಲಿ ಸೆ.28ರಂದು ಎಫ್‌ಐಆರ್ ದಾಖಲಾಗಿತ್ತು. ಆದರ್ಶ್ ಅಯ್ಯರ್ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಐಪಿಸಿ ಸೆಕ್ಷನ್ ಐಪಿಸಿ ಸೆಕ್ಷನ್ 34 ಅಡಿ ಪ್ರಕರಣ ದಾಖಲಿಸಿದ್ದ ಪೊಲೀಸರು, ಎಫ್‌ಐಆರ್‌ನಲ್ಲಿ ಎ1 ಆಗಿ ನಿರ್ಮಲಾ ಸೀತಾರಾಮನ್, ಎ2 ಇಡಿ ಅಧಿಕಾರಿಗಳು, ಎ 3 ಜೆ.ಪಿ. ನಡ್ಡಾ, ಎ4 ನಳಿನ್ ಕುಮಾರ್ ಕಟೀಲ್, ಎ5 ಬಿ.ವೈ. ವಿಜಯೇಂದ್ರ, ಎ6 ಆಗಿ ಬಿಜೆಪಿ ಕಚೇರಿ ಕಾರ್ಯನಿರ್ವಾಹಕರ ಹೆಸರನ್ನು ಉಲ್ಲೇಖಿಸಿದ್ದರು.
ಚುನಾವಣಾ ಬಾಂಡ್‌ಗಳ ಮೂಲಕ ಹಣ ಸುಲಿಗೆ ಆರೋಪಿಸಿ ಆದರ್ಶ್ ಅಯ್ಯರ್ ಎಂಬವರು ದೂರು ದಾಖಲಿಸಲು ಅನುಮತಿ ಕೋರಿ ಜನಪ್ರತಿನಿಧಿಗಳ ಕೋರ್ಟ್ನಲ್ಲಿ ಪಿಸಿಆರ್ ದಾಖಲಿಸಿದ್ದರು. ವಾದ ಪ್ರತಿವಾದ ಆಲಿಸಿದ್ದ ಬಳಿಕ ಕೇಸ್ ದಾಖಲಿಸಲು ಕೋರ್ಟ್ ಸೂಚನೆ ನೀಡಿ, ವಿಚಾರಣೆಯನ್ನು ಮುಂದೂಡಿತ್ತು. ದೂರುದಾರ ಆದರ್ಶ್ ಅಯ್ಯರ್ ಅವರು ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್‌ಪಿ)ನ ಸಹ ಅಧ್ಯಕ್ಷರಾಗಿದ್ದು, ಎಲೆಕ್ಟೋರಲ್ ಬಾಂಡ್ ಮೂಲಕ ಬೆದರಿಸಿ ಸುಲಿಗೆ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು.
ಈ ಸುದ್ದಿಯನ್ನೂ ಓದಿ | CM Siddaramaiah: ವಿದ್ಯಾರ್ಥಿಗಳಿಗೆ ಸಂವಿಧಾನದ ಪಾಠ ಮಾಡಿದ ಸಿಎಂ
ದೂರುದಾರನ ಆರೋಪವೇನು?
ನಿರ್ಮಲಾ ಸೀತಾರಾಮನ್ ಹಾಗೂ ಜಾರಿ ನಿರ್ದೇನಾಲಯದ ಅಧಿಕಾರಿಗಳು 2019 ರಿಂದ 2023 ರ ನವೆಂಬರ್ ಅವಧಿಯಲ್ಲಿ ಸಾಂವಿಧಾನಿಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಇತರೆ ಆರೋಪಿಗಳ ಜತೆ ಒಳಸಂಚು ನಡೆಸಿ ಎಂಎನ್‌ಸಿ ಹಾಗೂ ಟಿಎನ್‌ಸಿ ಕಾರ್ಪೋರೇಟ್ ಕಂಪನಿಗಳ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನು ಹೆದರಿಸಿ ಚುನಾವಣಾ ಬಾಂಡ್ ಹೆಸರಿನಲ್ಲಿ 8,000 ಕೋಟಿ ರೂ.ಗಳನ್ನು ಬಲವಂತವಾಗಿ ಸುಲಿಗೆ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.