Saturday, 23rd November 2024

Fake Cab: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಕಲಿ ಕ್ಯಾಬ್ ಚಾಲಕ; ಮಹಿಳೆಗೆ ಭಯಾನಕ ಅನುಭವ

fake cab

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru international Airport) ಅಸಲಿ ಕ್ಯಾಬ್‌ ಚಾಲಕನಂತೆ ನಟಿಸಿದ ನಕಲಿ (fake cab) ಚಾಲಕನೊಬ್ಬ, ಮಹಿಳೆಯನ್ನು ಹತ್ತಿಸಿಕೊಂಡು ಹೋಗಿದ್ದಾನೆ. ಅಲರ್ಟ್‌ ಆದ ಮಹಿಳೆ ಕೂಡಲೇ ಪೊಲೀಸರನ್ನು ಸಂಪರ್ಕಿಸಿದ ಪರಿಣಾಮ ಸಂಭಾವ್ಯ ಅಪಾಯ ತಪ್ಪಿದೆ.

ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಈ ಕುರಿತು ಒಂದು ಪೋಸ್ಟ್‌ ಅನ್ನು ಸಂತ್ರಸ್ತ ಮಹಿಳೆ ಹಾಕಿದ್ದಾರೆ. ಮಹಿಳೆ ಶುಕ್ರವಾರ ರಾತ್ರಿ 10:30ಕ್ಕೆ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದರು. ವಿಮಾನ ನಿಲ್ದಾಣದ ಪಿಕಪ್ ನಿಲ್ದಾಣದಿಂದ ಓಲಾ ಕ್ಯಾಬ್ ಅನ್ನು ಬುಕ್ ಮಾಡಿದ್ದರು. ಆದರೆ, ನಿಯೋಜಿತನಲ್ಲದ ಬೇರೊಬ್ಬ ಚಾಲಕ ಆಕೆಯ ಬಳಿಗೆ ಬಂದು ಆಕೆಯನ್ನು ಕರೆದೊಯ್ಯಲು ಮುಂದಾಗಿದ್ದ.

ಆದರೆ ಚಾಲಕ ಕಡ್ಡಾಯ OTPಯನ್ನು ಆಕೆಯ ಬಳಿ ಕೇಳಲಿಲ್ಲ ಮತ್ತು Ola ಅಪ್ಲಿಕೇಶನ್ ಅನ್ನು ಬಳಸಲಿಲ್ಲ ಎಂಬುದು ಮಹಿಳೆಗೆ ಗೊತ್ತಾಯಿತು. ತನ್ನ ಓಲಾ ಆಪ್‌ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆತ ಹೇಳಿದ್ದ. ಬಳಿಕ ತನ್ನ ಮೊಬೈಲ್‌ನ ಮ್ಯಾಪ್ಸ್‌ನಲ್ಲಿ ಆಕೆ ತಲುಪಬೇಕಾದ ಜಾಗವನ್ನು ನಮೂದಿಸಲು ಕೇಳಿದ. ನಂತರ ಕಾರು ಚಲಾಯಿಸುವಾಗ, ಹೆಚ್ಚುವರಿ ಶುಲ್ಕವನ್ನು ಕೇಳಿದ. ಆಕೆ ನಿರಾಕರಿಸಿದ್ದರು.

ಈ ಹಂತದಲ್ಲಿ ಆತಂಕಗೊಂಡ ಮಹಿಳೆ, ಬೇರೆ ಕಾರಿಗೆ ತನ್ನನ್ನು ವರ್ಗಾಯಿಸುವಂತೆ ಸೂಚಿಸಿದ್ದರು. ನಂತರ ವಿಮಾನ ನಿಲ್ದಾಣದ ಪಿಕಪ್ ಸ್ಟ್ಯಾಂಡ್‌ಗೆ ಹಿಂತಿರುಗುವಂತೆ ಕೇಳಿಕೊಂಡರು. ಚಾಲಕ ಆಕೆಯ ಮನವಿಯನ್ನು ನಿರ್ಲಕ್ಷಿಸಿ, ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿ, ಪೆಟ್ರೋಲ್‌ಗೆ ₹ 500 ಕೊಡುವಂತೆ ಬೇಡಿಕೆಯಿಟ್ಟಿದ್ದ.

ಇದರಿಂದ ಆತಂಕಗೊಂಡ ಮಹಿಳೆ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿದ್ದರು. ಅದೇ ಸಮಯದಲ್ಲಿ ತಮ್ಮ ಕುಟುಂಬದ ಒಬ್ಬ ಸದಸ್ಯರಿಗೂ ಕಾಲ್‌ ಮಾಡಿ ಮಾಹಿತಿ ನೀಡುತ್ತಿದ್ದರು. ಪೊಲೀಸರು ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ್ದು, 20 ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿ ಚಾಲಕನನ್ನು ವಶಕ್ಕೆ ಪಡೆದರು. ಚಾಲಕನನ್ನು ಬಸವರಾಜ ಎಂದು ಗುರುತಿಸಲಾಗಿದೆ.

”ಒಲಾ ಪಿಕಪ್ ಸ್ಟೇಷನ್‌ನಲ್ಲಿ @BLRAirport ನಿಂದ ಯಾರೋ ಒಬ್ಬ ಕ್ಯಾಬ್ ಡ್ರೈವರ್‌ನಿಂದ ನಾನು ಸಂಭಾವ್ಯ ಕಳ್ಳಸಾಗಣೆ/ಅತ್ಯಾಚಾರ/ಲೂಟಿ/ಹಲ್ಲೆ ತಪ್ಪಿಸಿಕೊಂಡೆ. ರಾತ್ರಿ 10:30ಕ್ಕೆ BLR ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಇದು ನಡೆಯಿತು. ನಾನು 112 ಗೆ ಕರೆ ಮಾಡದೇ ಇದ್ದಲ್ಲಿ ಇದನ್ನು ಟೈಪ್ ಮಾಡಲು ನಾನು ಇರುತ್ತಿರಲಿಲ್ಲ” ಎಂದು ಮಹಿಳೆ Xನಲ್ಲಿ ಬರೆದಿದ್ದಾರೆ.

ಈ ಘಟನೆಯು ವಿಮಾನ ನಿಲ್ದಾಣದ ಭದ್ರತೆ ಮತ್ತು ಬಾಡಿಗೆ ವಾಹನಗಳ ಸುರಕ್ಷತಾ ಪ್ರೋಟೋಕಾಲ್‌ಗಳ ಬಗ್ಗೆ ನೆಟಿಜನ್‌ಗಳ ನಡುವೆ ಕಳವಳವನ್ನು ಹುಟ್ಟುಹಾಕಿದೆ. ”ಇದು ತುಂಬಾ ಭಯಾನಕವಾಗಿದೆ. ನಿಮ್ಮ ದೂರು ಓದುವಾಗ ನನಗೆ ಕಳವಳ ಆಗುತ್ತಿದೆ.” ಎಂದಿದ್ದಾರೆ ಒಬ್ಬರು. ”ಕೆಲವು ತಿಂಗಳ ಹಿಂದೆ ನನಗೂ ಇಂಥ ಅನುಭವ ಆಗಿದೆ. ನಾನು ಕೂಡ ಕ್ಯಾಬ್‌ನಲ್ಲಿ ಹತ್ತಿದ ಬಳಿಕ ಅದು ಸರಿಯಾದ ಕ್ಯಾಬ್‌ ಅಲ್ಲ ಎಂದು ಗೊತ್ತಾದ ಬಳಿಕ ಅದರಿಂದ ಇಳಿದೆ” ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

”@BLRAirport ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು. ವಿಮಾನ ನಿಲ್ದಾಣವು ನಗರದಿಂದ ದೂರದಲ್ಲಿದೆ ಮತ್ತು ಸಾಕಷ್ಟು ಪ್ರತ್ಯೇಕವಾಗಿದೆ. ಇದು ತುಂಬಾ ಗಂಭೀರ ಘಟನೆ” ಎಂದು ಇನ್ನೊಬ್ಬರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: Viral Video: ರೈಲ್ವೇ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರ್ಮಿಕ ಬಲಿ; ಭೀಕರ ದೃಶ್ಯ ಭಾರೀ ವೈರಲ್‌!