-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೀರೆ ದಿನದ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ ಜಾಗತಿಕ ಮಟ್ಟದಲ್ಲಿ ಸೀರೆ ಪ್ರೇಮ (Global Saree Fashion) ಮೊದಲಿಗಿಂತ ಹೆಚ್ಚಾಗಿದೆ. ಹೌದು, ಎಲ್ಲರಿಗೂ ತಿಳಿದಿರುವಂತೆ, ಡಿಸೆಂಬರ್‌ನಲ್ಲಿ ಸೀರೆ ದಿನವನ್ನು ಆಚರಿಸಲಾಗುತ್ತದೆ. ಇದಕ್ಕೆ ಪೂರಕ ಎಂಬಂತೆ, ಡಿಸೆಂಬರ್‌ನಲ್ಲಿ ಪ್ರಪಂಚದಾದ್ಯಂತ ಮಹಿಳಾಪರ ಸಂಘಟನೆಗಳು ಹಾಗೂ ಕ್ಲಬ್‌ಗಳು ನಾನಾ ಬಗೆಯ ಸೀರೆ ಫ್ಯಾಷನ್, ಡ್ರೇಪಿಂಗ್ ಹಾಗೂ ವಿಭಿನ್ನ ಸೀರೆ ಕ್ಯಾಂಪೇನ್‌ಗಳನ್ನು ಆಯೋಜಿಸುವುದನ್ನು ಕಾಣಬಹುದು.
ಮಹಿಳೆಯರ ಯೂನಿವರ್ಸಲ್ ಉಡುಗೆ: ಆರ್‌ಜೆ ಆಶಾ ವಿಶ್ವನಾಥ್
ಇನ್ನು, ಜಾಗತೀಕ ಮಟ್ಟದಲ್ಲಿ ಭಾರತೀಯ ಸಂಪ್ರದಾಯವನ್ನು ಬಿಂಬಿಸುವ ಸೀರೆಗಳು ತಮ್ಮದೇ ಆದ ಸ್ಥಾನವನ್ನು ಪಡೆದುಕೊಂಡಿವೆ. ಅಲ್ಲದೇ, ಹಿರಿಯ ಕಿರಿಯರೆನ್ನದೇ ಎಲ್ಲಾ ವರ್ಗ ಹಾಗೂ ವಯಸ್ಸಿನ ಮಹಿಳೆಯರು, ಹುಡುಗಿಯರನ್ನು ಆವರಿಸಿಕೊಂಡಿವೆ. ಅದು ಬೆಲೆಬಾಳುವ ರೇಷ್ಮೆ ಸೀರೆಯಾಗಬಹುದು, ಡಿಸೈನರ್ ಸೀರೆಯಾಗಬಹುದು, ಹ್ಯಾಂಡ್ಲೂಮ್ ಕಾಟನ್ ಸೀರೆಯಾಗಬಹುದು, ಈ ಜನರೇಷನ್ ಹುಡುಗಿಯರು ಇಷ್ಟಪಡುವ ರೆಡಿಮೇಡ್ ಸೀರೆಯಾಗಬಹುದು. ಒಟ್ಟಾರೆ, ಸೀರೆ ಎಂಬ ಮಾಯಾ ಉಡುಗೆಯು ಭಾರತೀಯರ ಮಹಿಳೆಯರ ಯೂನಿವರ್ಸಲ್ ಡ್ರೆಸ್ಕೋಡ್‌ನಲ್ಲಿ ಸೇರಿ ಹೋಗಿವೆ ಎನ್ನುತ್ತಾರೆ ಆರ್‌ಜೆ & ಸೀರೆ ಎಕ್ಸ್‌ಪರ್ಟ್ ಆಶಾ ವಿಶ್ವನಾಥ್.
ಬದಲಾಗದ ಸೀರೆ ಟ್ರೆಡಿಷನ್: ಫ್ಯಾಷನ್ ಎಕ್ಸ್‌ಪರ್ಟ್ ವಿದ್ಯಾ ವಿವೇಕ್
ಇನ್ನು, ಇಳಕಲ್, ಮೊಳಕಾಲ್ಮುರ್ ಹ್ಯಾಂಡ್ಲೂಮ್ ಸೀರೆಯಿಂದಿಡಿದು ಮೈಸೂರ್ ಸಿಲ್ಕ್, ಬನಾರಸ್, ಧರ್ಮವರಂ-ಕಾಂಚೀಪುರಂ ರೇಷ್ಮೆ ಸೀರೆಗಳು ಇಂದಿಗೂ ಮಹಿಳೆಯರ ಲಿಸ್ಟ್‌ನಿಂದ ಹೊರ ಬಿದ್ದಿಲ್ಲ! ಅಷ್ಟ್ಯಾಕೆ! ಬಾಲಿವುಡ್ ತಾರೆಯರಿಂದಿಡಿದು ನಮ್ಮ ಸ್ಯಾಂಡಲ್‌ವುಡ್ ನಟಿಯರು ಕೂಡ ಆಗಾಗ್ಗೆ ಇವನ್ನು ಉಟ್ಟು, ಸೀರೆ ಪ್ರೇಮವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಟ್ರೆಂಡ್ ಸೆಟ್ ಮಾಡುತ್ತಲೇ ಇರುತ್ತಾರೆ ಎನ್ನುತ್ತಾರೆ ಫ್ಯಾಷನ್ ವಿಶ್ಲೇಷಕರಾದ ವಿದ್ಯಾ ವಿವೇಕ್.
ರಾಣಿ-ಮಹಾರಾಣಿಯರ ಕೊಡುಗೆ: ಮಾಡೆಲ್ ಸಂಗೀತಾ ಹೊಳ್ಳ
ಇನ್ನು, ಜಾಗತೀಕ ಮಟ್ಟದಲ್ಲಿ ಪ್ರತಿ ಸಮಾರಂಭಗಳಲ್ಲೂ ಉಟ್ಟು, ಸೀರೆಯ ಮಹತ್ವವನ್ನು ಜಗತ್ತಿನಾದಾದ್ಯಂತ ಪಸರಿಸಲು ಕಾರಣರಾದವರಲ್ಲಿ ಉತ್ತರ-ದಕ್ಷಿಣ ಭಾರತದ ರಾಜವಂಶದ ರಾಣಿ-ಮಹಾರಾಣಿಯರು ಹಾಗೂ ರಾಯಲ್ ಸೀಮೆಯ ಮಹಿಳೆಯರು ಸೇರುತ್ತಾರೆ ಎನ್ನುತ್ತಾರೆ ಮಾಡೆಲ್ ಸಂಗೀತಾ ಹೊಳ್ಳ. ಅವರ ಪ್ರಕಾರ, ನಮ್ಮಲ್ಲಿ, ಮೊದಲಿನಿಂದಲೂ ಸಾಮಾನ್ಯ ವರ್ಗದ ಮಹಿಳೆಯರು ಸೀರೆಯನ್ನು ಹೊರತುಪಡಿಸಿದರೇ, ಇನ್ನಿತರೇ ಉಡುಗೆಗಳನ್ನು ಧರಿಸುತ್ತಿರಲಿಲ್ಲ. ಹಾಗಾಗಿ ಇಂದಿಗೂ ಸೀರೆಯು ತನ್ನದೇ ಮಹತ್ವ ಕಾಪಾಡಿಕೊಂಡಿದೆ ಎನ್ನುತ್ತಾರೆ. ಇದಕ್ಕೆ ಪೂರಕ ಎಂಬಂತೆ, ಇಂದಿನ ಕಾಲಕ್ಕೆ ತಕ್ಕಂತೆ ಸೀರೆಯ ರೂಪ, ಉಡುವ ರಿವಾಜು ಹಾಗೂ ಉದ್ದ ಬದಲಾಗಿದೆ ಅಷ್ಟೇ! ಎನ್ನುತ್ತಾರೆ ಅವರು.
ಇಂಡೋ-ವೆಸ್ಟರ್ನ್ ಸೀರೆ ಲವ್: ಮಾಡೆಲ್ ನಿಶಾ ಉಮಾಶಂಕರ್
ಅಂದಹಾಗೆ, ಈ ಜನರೇಷನ್ ಯುವತಿಯರು ಎಷ್ಟೇ ಮಾಡರ್ನ್ ಆದರೂ ಒಂದಲ್ಲ ಒಂದು ಬಾರಿ ಸೀರೆಯನ್ನು ಉಟ್ಟಿಯೇ ಇರುತ್ತಾರೆ. ಇದಕ್ಕೆ ಕಾರಣ, ನಮ್ಮತನ ಬಿಂಬಿಸುವ ಸೀರೆಗಳ ರೂಪ ಬದಲಾಗಿರುವುದು. ಇಂದಿನ ಹುಡುಗಿಯರ ಮನೋಭಿಲಾಷೆಗೆ ತಕ್ಕಂತೆ ಬದಲಾದ ರೂಪದಲ್ಲಿ ದೊರೆಯುತ್ತಿರುವುದು. ರೆಡಿ ಸೀರೆ, ಲೆಹೆಂಗಾ ಸೀರೆ, ಜಾಕೆಟ್ ಸೀರೆ, ಗೌನ್ ಸೀರೆಗಳು ಈ ಲಿಸ್ಟ್‌ನಲ್ಲಿ ಸೇರುತ್ತವೆ ಎನ್ನುತ್ತಾರೆ ಮಾಡೆಲ್ ನಿಶಾ ಉಮಾಶಂಕರ್.
ಈ ಸುದ್ದಿಯನ್ನೂ ಓದಿ | Saree Day Special 2024: ಸೆಲೆಬ್ರೆಟಿಗಳ ಸೀರೆ ಲವ್ ಹೀಗಿದೆ ನೋಡಿ…
ಒಟ್ಟಾರೆ, ಸೀರೆ ಉಡಲು ಯಾವ ದಿನವಾದರೇನು? ಇಷ್ಟವಾದಾಗ ಸೀರೆ ಉಡೋಣಾ! ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸೋಣಾ! ಎನ್ನುತ್ತಾರೆ ಸೀರೆ ಪ್ರೇಮಿಗಳು.
(ಲೇಖಕಿ ಫ್ಯಾಷನ್ ಪತ್ರಕರ್ತೆ)