Tuesday, 24th December 2024

Government Employees: ಸರ್ಕಾರಿ ನೌಕರರ ಸಂಘದ ಅಧ್ಯಕ್ಷತೆಗೆ ಸರ್ವಾನುಮತದ ಅಭ್ಯರ್ಥಿಯಾಗಿ ಷಡಾಕ್ಷರಿ ಆಯ್ಕೆ

Govt Employees

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ (Government Employees) ಸಂಘದ ರಾಜ್ಯಾಧ್ಯಕ್ಷರು, ರಾಜ್ಯ ಖಜಾಂಚಿಗಳ ಸ್ಥಾನಕ್ಕೆ ಅಭ್ಯರ್ಥಿಗಳ ಆಯ್ಕೆ ಭಾನುವಾರ ನಡೆದಿದ್ದು, ಸರ್ವಾನುಮತದ ಆಯ್ಕೆ ನಡೆಸಲಾಗಿದೆ. ರಾಜ್ಯಾದ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಈ ಸಭೆಯಲ್ಲಿ ಹಾಲಿ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಅವರನ್ನು ಸರ್ವಾನುಮತದಿಂದ ತೀರ್ಮಾನಿಸಿ ಘೋಷಿಸಲಾಗಿದೆ.

ಡಿಸೆಂಬರ್‌ 8ರಂದು ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್‌ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-29 ಅವಧಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಾಗೂ ರಾಜ್ಯ ಖಜಾಂಚಿ ಸ್ಥಾನಕ್ಕೆ ಆಯ್ಕೆ ಮಾಡಲು ರಾಜ್ಯದ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು ಹಾಗೂ ಬೆಂಗಳೂರು ನಗರ ರಾಜ್ಯ ಪರಿಷತ್‌ ಸದಸ್ಯರು ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.

ಕೊಪ್ಪಳ ಜಿಲ್ಲಾಧ್ಯಕ್ಷರಾದ ನಾಗರಾಜ್ ಜುಮ್ಮಣ್ಣ ಅವರನ್ನು ಸರ್ವಾನುಮತದಿಂದ ಘೋಷಿಸಲಾಯಿತು. ಸೋಮವಾರ (ಡಿಸೆಂಬರ್‌ 9) ಬೆಳಗ್ಗೆ 11:30ಕ್ಕೆ ಸರ್ಕಾರಿ ನೌಕರರ ಸಂಘದ ನಾಮಪತ್ರವನ್ನು ಸಲ್ಲಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ರಾಜ್ಯದ 1000 ಚುನಾಯಿತ ಪದಾಧಿಕಾರಿಗಳು ಭಾಗವಹಿಸಿದರು. ರಾಜ್ಯ ನಿವೃತ್ತ ನೌಕರ ಸಂಘದ ಅಧ್ಯಕ್ಷರಾದ ಭೈರಪ್ಪ, ಮಾಜಿ ಅಧ್ಯಕ್ಷ ಶೇಷ ಗೌಡ ಭಾಗವಹಿಸಿದ್ದರು. ಜೊತೆಗೆ 26 ಜನ ಜಿಲ್ಲಾಧ್ಯಕ್ಷರು, 92 ಜನ ಬೆಂಗಳೂರು ನಗರ ರಾಜ್ಯಪರಿಷತ್ ಸದಸ್ಯರು, 190 ತಾಲೂಕು ಅಧ್ಯಕ್ಷರುಗಳು, ಪದಾಧಿಕಾರಿಗಳು ಭಾಗವಹಿಸಿದ್ದರು.

ಸರ್ಕಾರಿ ನೌಕರರ ಸಂಘದ ಚುನಾವಣೆ ಕೊನೆಯ ಘಟ್ಟ ತಲುಪಿದ್ದು, ಡಿ.9ರಿಂದ ರಾಜ್ಯ ಘಟಕದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಡಿ.27ರಂದು ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶವೂ ಘೋಷಣೆಯಾಗಲಿದೆ.