Saturday, 28th December 2024

Govt Employees: 2ನೇ ಬಾರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿ.ಎಸ್‌.ಷಡಾಕ್ಷರಿ ಆಯ್ಕೆ

Govt Employees

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ (Govt Employees) 2024-2029ನೇ ಅವಧಿಯ ಚುನಾವಣೆಯಲ್ಲಿ ಜಯ ಗಳಿಸುವ ಮೂಲಕ ಹಾಲಿ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಅವರು ಎರಡನೇ ಬಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮತ್ತು ರಾಜ್ಯ ಖಜಾಂಚಿ ಸ್ಥಾನಕ್ಕೆ ಶುಕ್ರವಾರ ಚುನಾವಾಣೆ ನಡೆದಿದ್ದು, ಅಧ್ಯಕ್ಷರಾಗಿ ಸಿ.ಎಸ್‌.ಷಡಾಕ್ಷರಿ (CS Shadakshari) ಹಾಗೂ ಖಜಾಂಚಿಯಾಗಿ ಶಿವರುದ್ರಯ್ಯ ವಿ.ವಿ ಆಯ್ಕೆಯಾಗಿದ್ದಾರೆ.

ಸಂಘದ ರಾಜ್ಯಾಧ್ಯಕ್ಷ ಮತ್ತು ರಾಜ್ಯ ಖಜಾಂಚಿ ಸ್ಥಾನದ ಚುನಾವಣೆಯು ಡಿ.27ರಂದು ಶುಕ್ರವಾರ ಬೆಳಗ್ಗೆ 9 ರಿಂದ ಸಂಜೆ 4ಗಂಟೆವರೆಗೆ ನಡೆಯಿತು. ನಗರದ ಕಬ್ಬನ್‌ ಪಾರ್ಕ್‌ನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ಚುನಾವಣೆ ನಡೆದಿದ್ದು, ಮತ್ತೊಮ್ಮೆ ಅಧ್ಯಕ್ಷರಾಗಿ ಸಿ.ಎಸ್‌.ಷಡಾಕ್ಷರಿ ಆಯ್ಕೆಯಾಗಿದ್ದಾರೆ.

ಶಿವರುದ್ರಯ್ಯ

ಸಂಘದ 971 ಪ್ರತಿನಿಧಿಗಳು ಅಧ್ಯಕ್ಷ ಹಾಗೂ ಖಜಾಂಚಿ ಆಯ್ಕೆಗೆ ಮತ ಚಲಾವಣೆಗೆ ಹಕ್ಕು ಹೊಂದಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹುದ್ದೆಗೆ ಹಾಲಿ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಹಾಗೂ ಸಂಘದ ಮಾಜಿ ಅಧ್ಯಕ್ಷ ಬಿ.ಪಿ. ಮಂಜೇಗೌಡ ಅವರ ಸಹೋದರ ಬಿ.ಪಿ. ಕೃಷ್ಣೆಗೌಡ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಷಡಾಕ್ಷರಿ ಅವರು 507 ಮತಗಳನ್ನು ಪಡೆದು ಬಿ.ಪಿ. ಕೃಷ್ಣೆಗೌಡ (442 ಮತ) ವಿರುದ್ಧ ವಿಜಯ ಪತಾಕೆ ಹಾರಿಸಿದ್ದಾರೆ.

ಇನ್ನು ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಜಾಸತ್ತಾತ್ಮಕ ವೇದಿಕೆಯ ಶಿವರುದ್ರಯ್ಯ ವಿ.ವಿ. ಅವರು 485 ಮತಗಳನ್ನು ಪಡೆದು ನಾಗರಾಜ ಆರ್‌. ಜುಮ್ಮನ್ನನವರ (467) ವಿರುದ್ಧ ಗೆದ್ದು, ಸಂಘದ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.

ಎರಡನೇ ಬಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ಎಸ್‌.ಷಡಾಕ್ಷರಿ ಅವರಿಗೆ ಸರ್ಕಾರಿ ನೌಕರರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | BOB Recruitment 2025: ಬ್ಯಾಂಕ್‌ ಆಫ್‌ ಬರೋಡಾದಲ್ಲಿದೆ 1,267 ಹುದ್ದೆ; ಪದವಿ ವಿದ್ಯಾರ್ಹತೆ ಹೊಂದಿದ್ದರೆ ಈಗಲೇ ಅಪ್ಲೈ ಮಾಡಿ