Saturday, 4th January 2025

Govt Employees: ಮುಖ್ಯ ಕಾರ್ಯದರ್ಶಿ ಭೇಟಿಯಾದ ರಾಜ್ಯ ಸರ್ಕಾರಿ ನೌಕರರ ಸಂಘದ ನಿಯೋಗ; ಬೇಡಿಕೆಗಳ ಈಡೇರಿಕೆಗೆ ಮನವಿ

Govt Employees

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾಗಿರುವ ಸಿ.ಎಸ್. ಷಡಾಕ್ಷರಿ, ಜಿಲ್ಲಾಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು, ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರ ನಿಯೋಗವು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಮಂಗಳವಾರ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವಂತೆ ಅವರಿಗೆ ಮನವಿ ಮಾಡಲಾಗಿದೆ.

ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಭಿತ ಕುಟುಂಬ ಸದಸ್ಯರಿಗೆ ಉಚಿತ ನಗದುರಹಿತ ಚಿಕಿತ್ಸೆ ನೀಡುವ ʼಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆʼ (ಕೆ.ಎ.ಎಸ್.ಎಸ್) ಯನ್ನು ಶೀಘ್ರವಾಗಿ ಅನುಷ್ಠಾಗೊಳಿಸುವಂತೆ ಮನವಿ ಮಾಡಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಕಾರ್ಯದರ್ಶಿಗಳು, 2025ನೇ ಜನವರಿ 15 ರಂದು ಆರ್ಥಿಕ ಇಲಾಖೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಸಭೆ ಏರ್ಪಡಿಸಿ ಈ ಯೋಜನೆಯ ಬಗ್ಗೆ ಸಮಾಲೋಚನೆ ನಡೆಸಿ ಶೀಘ್ರವಾಗಿ ಅನುಷ್ಠಾನಗೊಳಿಸುವುದಾಗಿ ತಿಳಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತನ್ನ ನೌಕರರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿಶಿಷ್ಟ ಸೌಲಭ್ಯಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಮಾಡಿಕೊಂಡಿರುವ ಒಡಂಬಡಿಕೆಯ ಮಾದರಿಯಲ್ಲೇ ರಾಜ್ಯ ಸರ್ಕಾರದ ಅಧಿಕಾರಿ, ನೌಕರರು, ನಿಗಮ-ಮಂಡಳಿ, ಸ್ವಾಯತ್ತ ಸಂಸ್ಥೆಯ ಸಿಬ್ಬಂದಿಗಳು ವೇತನ ಪಡೆಯುವ ಉದ್ದೇಶಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹೊಂದಿರುವ ಉಳಿತಾಯ ಖಾತೆಗಳನ್ನು ‘ಸಮಗ್ರ ಸಂಬಳ ಪ್ಯಾಕೇಜ್ ಖಾತೆ’ ಯಾಗಿ (Comprehensive Salary Package Account) ಪರಿವರ್ತಿಸಿಕೊಂಡು ಬ್ಯಾಂಕ್‌ ನೀಡುವ ರೂ. 1.00 ಕೋಟಿ ಅಪಘಾತ ವಿಮಾ ಪರಿಹಾರ ಸೌಲಭ್ಯವನ್ನು ರಾಜ್ಯ ಸರ್ಕಾರಿ ನೌಕರರಿಗೂ ಕಲ್ಪಿಸಿಕೊಡುವ ನಿಟ್ಟಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ಸಮಾಲೋಚಿಸಲು ಮನವಿ ಮಾಡಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಕಾರ್ಯದರ್ಶಿಗಳು, ಎಸ್.ಎಲ್.ಬಿ.ಸಿ. ರವರೊಂದಿಗೆ ಸಭೆ ನಡೆಸಿ ಶೀಘ್ರವಾಗಿ ಕಾರ್ಯರೂಪಕ್ಕೆ ತರುವುದಾಗಿ ತಿಳಿಸಿದರು.

ಕೊಪ್ಪಳ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮನ್ನವರ, ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಬಿ. ಬಳ್ಳಾರಿ ಹಾಗೂ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರುಗಳಾದ ಎಸ್. ಬಸವರಾಜು, ಚೇತನ್ ರಾಜು, ಲೋಕೇಶ್, ರಾಘವೇಂದ್ರ, ಮೋಹನ್ ಕುಮಾರ್, ಪ್ರತೀಪ್ ಮತ್ತು ಕೇಂದ್ರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿ | CM Siddaramaiah: ಹೊಸ ವರ್ಷಕ್ಕೆ ಸಹಬಾಳ್ವೆಯ ಆಶಯ ಕೋರಿದ ಸಿಎಂ ಸಿದ್ದರಾಮಯ್ಯ

ಹೊಸ ವರ್ಷಕ್ಕೆ ಸಹಬಾಳ್ವೆಯ ಆಶಯ ಕೋರಿದ ಸಿಎಂ ಸಿದ್ದರಾಮಯ್ಯ

cm siddaramaiah

ಬೆಂಗಳೂರು: ರಾಜ್ಯಾದ್ಯಂತ ಜನತೆ 2024ಕ್ಕೆ ಗುಡ್ ಬೈ ಹೇಳಿ 2025ನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಹೊಸ ವರ್ಷವನ್ನು (New Year Celebration) ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ನಾಡಿನ ಜನತೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಪ್ರೀತಿಯ ನಾಡಬಾಂಧವರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹೊಸ ವರ್ಷವನ್ನು ಹೊಸ ಚಿಂತನೆ, ಹೊಸ ಭರವಸೆ ಹಾಗೂ ಹೊಸ ಉತ್ಸಾಹದೊಂದಿಗೆ ಬರಮಾಡಿಕೊಳ್ಳೋಣ. ಜಾತಿ, ಧರ್ಮಗಳ‌ ದ್ವೇಷ ತೊರೆದು ಎಲ್ಲರೂ ಒಂದಾಗಿ ಪ್ರೀತಿ – ಸಹಬಾಳ್ವೆಯ ಹಾದಿಯಲ್ಲಿ ಹೆಜ್ಜೆಹಾಕೋಣ. 2025ರ ನವ ವಸಂತ ತಮ್ಮೆಲ್ಲರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ ಎಂದು ಹಾರೈಸಿದ್ದಾರೆ.

ನಿನ್ನೆ ರಾತ್ರಿ ಬೆಂಗಳೂರಿನ ಬ್ರಿಗೇಡ್‌ ರಸ್ತೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ಹಲವು ತಾಣಗಳಲ್ಲಿ ಯುವಜನತೆ ಸೇರಿ ಸಂಗೀತ ಕುಡಿತ ಕುಣಿತಗಳ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿತ್ತು. ಇಂದು ಮುಂಜಾನೆ ರಾಜ್ಯದ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ಹೊಸ ವರ್ಷದ ವಿಶೇಷ ಪೂಜೆಗಳು ನಡೆದಿದ್ದು, ಭಕ್ತಾದಿಗಳು ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿ ದೇವರ ದರ್ಶನ ಪಡೆಯುವ ಮೂಲಕ ಹೊಸ ವರ್ಷದ ನೂತನ ದಿನವನ್ನು ಸ್ವಾಗತಿಸಿದರು.

ಇದನ್ನೂ ಓದಿ: New Year: ಹೊಸ ವರ್ಷ; ಎಲ್ಲೆಲ್ಲಿ ಹೇಗ್ಹೇಗೆ?