ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಯ ರಾಜ್ಯಾಧ್ಯಕ್ಷ ಮತ್ತು ರಾಜ್ಯ ಖಜಾಂಚಿ ಸ್ಥಾನದ ಚುನಾವಣೆ (Govt employees) ಡಿ. 27ರಂದು ನಡೆಯಲಿದೆ. ಸರ್ಕಾರಿ ನೌಕರರ ಹಿತ ರಕ್ಷಣೆ ಮತ್ತು ಶ್ರೇಯೋಭಿವೃದ್ಧಿಗಾಗಿ ಪ್ರಜಾಸತ್ತಾತ್ಮಕ ನೌಕರರ ವೇದಿಕೆ ಚುನಾವಣಾ ಕಣಕ್ಕಿಳಿದಿದೆ.
ಸರ್ಕಾರಿ ನೌಕರರ ವೇತನ ತಾರತಮ್ಯ ಸೇರಿದಂತೆ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಬಿ.ಪಿ. ಕೃಷ್ಣೇಗೌಡ ಹಾಗೂ ಖಜಾಂಚಿ ಹುದ್ದೆಯ ಅಭ್ಯರ್ಥಿ ವಿ.ವಿ. ಶಿವರುದ್ರಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಪಿ. ಕೃಷ್ಣೇಗೌಡ, ʼʼ2019-24ರ ಅವಧಿಯಲ್ಲಿದ್ದ ಸಂಘದ ಪದಾಧಿಕಾರಿಗಳು ಯಾವುದೇ ರಚನಾತ್ಮಕ ಸಾಧನೆ ಮಾಡಿಲ್ಲ. ಸರ್ಕಾರಿ ನೌಕರರ ಸಂಘಕ್ಕೆ ಹೊಸ ಚೈತನ್ಯ, ಹೊಸ ಆಯಾಮ ದೊರೆಕಿಸಿ ಕೊಡುವ ನಿಟ್ಟಿನಲ್ಲಿ ನಮ್ಮ ಬಣ ಕಾರ್ಯ ನಿರ್ವಹಿಸಲಿದೆ. ಸರ್ಕಾರಿ ನೌಕರರ ಬಗ್ಗೆ ದೂರದೃಷ್ಟಿ ಮತ್ತು ಕಾಳಜಿಯಿಂದ ಕಾರ್ಯನಿರ್ವಹಿಸುತ್ತೇವೆ. ಹಲವಾರು ವರ್ಷಗಳಿಂದ ಸರ್ಕಾರದ ಮುಂದಿರುವ ನೌಕರರ ಬೇಡಿಕೆಗಳನ್ನು ಈಡೇರಿಸಲು ಹಾಗೂ ಎಲ್ಲ ಸರ್ಕಾರಿ ನೌಕರರನ್ನು ಸಮಾನವಾಗಿ ಮುನ್ನಡೆಸುವುದು ನಮ್ಮ ಕಾರ್ಯಸೂಚಿಯ ಪ್ರಮುಖ ಅಂಶʼʼ ಎಂದರು.
ʼʼರಾಜ್ಯದಲ್ಲಿ 5.25 ಲಕ್ಷ ಸರ್ಕಾರಿ ನೌಕರರಿದ್ದು, 30 ಜಿಲ್ಲಾ ಶಾಖೆಗಳು, 186 ತಾಲೂಕು ಶಾಖೆಗಳು ಮತ್ತು 7 ಯೋಜನಾ ಶಾಖೆಗಳಲ್ಲಿ ನೌಕರರ ಸಂಘ ಕಾರ್ಯನಿರ್ವಹಿಸಲಿದೆ. 66 ಜಿಲ್ಲಾ ನಿರ್ದೇಶಕರು, ಜಿಲ್ಲಾಧ್ಯಕ್ಷರು, ಜಿಲ್ಲಾ ಖಜಾಂಚಿ, ರಾಜ್ಯ ಪರಿಷತ್ ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆ ಮಾಡುತ್ತಿದ್ದು, ತಾಲೂಕು ಶಾಖೆಗಳ ನಿರ್ದೇಶಕರು, ತಾಲೂಕು ಅಧ್ಯಕ್ಷರು, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತಿದೆ. ಈ ಎಲ್ಲ ಹಂತಗಳಲ್ಲೂ ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆʼʼ ಎಂದು ಹೇಳಿದರು.
ʼʼಸರ್ಕಾರಿ ನೌಕರರ ಸಂಘದ ಆಡಳಿತವನ್ನು ಸಶಕ್ತಗೊಳಿಸುವುದು ನಮ್ಮ ಗುರಿಯಾಗಿದೆ. ಸಂಘಕ್ಕೆ ಆಡಳಿತಾಧಿಕಾರಿ ನೇಮಿಸುವ ಪರಿಸ್ಥಿತಿ ಎದುರಾಗದಂತೆ ನೋಡಿಕೊಳ್ಳುತ್ತೇವೆ. ಸಂಘದ ಬೈಲಾ ಅನುಷ್ಠಾನ ನಮ್ಮ ಪ್ರಧಾನ ಆದ್ಯತೆಯಾಗಿದೆ. ಪೂರ್ಣ ಪ್ರಮಾಣದಲ್ಲಿ 7ನೇ ವೇತನ ಆಯೋಗದ ವರದಿ ಜಾರಿಗೊಳಿಸುವುದು ನಮ್ಮ ಗುರಿಯಾಗಿದೆ. ಸರ್ಕಾರಿ ನೌಕರರಿಗೆ ಎನ್.ಪಿ.ಎಸ್ ರದ್ದುಗೊಳಿಸುವ ಭರವಸೆ ಈಡೇರಿಲ್ಲ. ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಪಡೆಯುವುದು ನಮ್ಮ ಗುರಿಯಾಗಿದೆ. ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪ್ರಯತ್ನಿಸುತ್ತೇನೆʼʼ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: Govt employees: ಡಿ.27ಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಖಜಾಂಚಿ ಸ್ಥಾನಕ್ಕೆ ಚುನಾವಣೆ; ಸಿ.ಎಸ್.ಷಡಾಕ್ಷರಿ ಬಣದ ಪ್ರಣಾಳಿಕೆ ಬಿಡುಗಡೆ