Wednesday, 25th December 2024

Govt employees: ಡಿ.27ಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಖಜಾಂಚಿ ಸ್ಥಾನಕ್ಕೆ ಚುನಾವಣೆ; ಸಿ.ಎಸ್‌.ಷಡಾಕ್ಷರಿ ಬಣದ ಪ್ರಣಾಳಿಕೆ ಬಿಡುಗಡೆ

Govt employees

ಬೆಂಗಳೂರು: ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಯ ರಾಜ್ಯಾಧ್ಯಕ್ಷ ಮತ್ತು ರಾಜ್ಯ ಖಜಾಂಚಿ ಸ್ಥಾನದ ಚುನಾವಣೆ (Govt employees) ಡಿ.27ರಂದು ನಡೆಯಲಿದೆ. ಹಾಲಿ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಅವರು ಈ ಬಾರಿಯೂ ರಾಜ್ಯಾಧ್ಯಕ್ಷರ ಹುದ್ದೆಗೆ ಸ್ಪರ್ಧಿಸಲಿದ್ದು, ರಾಜ್ಯ ಖಜಾಂಚಿ ಸ್ಥಾನಕ್ಕೆ ಹಾಲಿ ರಾಜ್ಯ ಉಪಾಧ್ಯಕ್ಷರು ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮನ್ನ ಅವರು ಸ್ಪರ್ಧಿಸಲಿದ್ದಾರೆ.

ಸಂಘದ ರಾಜ್ಯಾಧ್ಯಕ್ಷ ಮತ್ತು ರಾಜ್ಯ ಖಜಾಂಚಿ ಸ್ಥಾನದ ಚುನಾವಣೆಯು ಡಿ.27ರಂದು ಶುಕ್ರವಾರ ಬೆಳಗ್ಗೆ 9 ರಿಂದ ಸಂಜೆ 4ಗಂಟೆವರೆಗೆ ನಗರದ ಕಬ್ಬನ್‌ ಪಾರ್ಕ್‌ನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಅಭ್ಯರ್ಥಿ ಸಿ.ಎಸ್‌.ಷಡಾಕ್ಷರಿ ಮತ್ತು ರಾಜ್ಯ ಖಜಾಂಚಿ ಸ್ಥಾನದ ಅಭ್ಯರ್ಥಿ ನಾಗರಾಜ ಜುಮ್ಮನ್ನ ಅವರು ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ರಾಜ್ಯ ಸರ್ಕಾರಿ ನೌಕರರನ್ನು ಕೋರಿದ್ದಾರೆ.

ಸಂಘದ ಸ್ಥಾನಗಳನ್ನು ಅಧಿಕಾರವೆಂದು ತಿಳಿಯದೆ ಸರ್ಕಾರಿ ನೌಕರರ ಸಮಸ್ಯೆ – ಸವಾಲುಗಳನ್ನು ಆದ್ಯತೆಯ ಮೇಲೆ ಪರಿಹರಿಸಲು ನಮಗೆ ದೊರೆತ ಅವಕಾಶ ಮತ್ತು ಜವಾಬ್ದಾರಿಯೆಂದು ಭಾವಿಸಿದ್ದೇವೆ. ಸಂಘಟನೆಯ ಕಾರ್ಯವೈಖರಿ ಹಾಗೂ ಮನೋಧರ್ಮ ಹೊಸತನದ ಸುಧಾರಣೆಯತ್ತ ಬದಲಾಗಬೇಕು. ಅದಕ್ಕಾಗಿ, ನಾವೆಲ್ಲರೂ ʼಹೊಸ ಮನ್ವಂತರದತ್ತ ವಿಕಾಸಶೀಲ ಹೆಜ್ಜೆಗಳನ್ನಿಡಲು ಬದಲಾವಣೆಗಾಗಿ ಕೈ ಜೋಡಿಸೋಣʼ ಎಂದು 2019ರಲ್ಲಿ ಹೊರಟಾಗ ತಾವೆಲ್ಲರೂ ಬೆಂಬಲಿಸಿ, ಆಶೀರ್ವದಿಸಿದ್ದೀರಿ.

ಅವಕಾಶ ಸಿಕ್ಕಾಗ ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಸಂಘಟನೆಯನ್ನು ಮುನ್ನಡೆಸಿರುವ ತೃಪ್ತಿ ನಮಗಿದೆ. ಮತ್ತೊಮ್ಮೆ 2024-29ರ ಅವಧಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ನಮ್ಮನ್ನು ಬೆಂಬಲಿಸಿದಲ್ಲಿ ಅಹರ್ನಿಶಿ ಸರ್ಕಾರಿ ನೌಕರರ ಶ್ರೇಯೋಭಿವೃದ್ಧಿಗಾಗಿ ಸೇವಾಭಾವದಿಂದ ಕಾರ್ಯ ನಿರ್ವಹಿಸುತ್ತೇವೆ. ʼನವ ಮನ್ವಂತರʼದ ಇನ್ನಷ್ಟು ಸಾಧನೆಗಳಿಗಾಗಿ ಕೈ ಜೋಡಿಸಬೇಕೆಂದು ಎಂದು ಸಿ.ಎಸ್‌.ಷಡಾಕ್ಷರಿ ಮತ್ತು ನಾಗರಾಜ ಜುಮ್ಮನ್ನ ಮನವಿ ಮಾಡಿದ್ದಾರೆ.

2024-2029ನೇ ಅವಧಿಯ ಭರವಸೆಯ ಸಂಕಲ್ಪಗಳು

1.ಸಂಘದ 104 ವರ್ಷಗಳ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಬೌಗೋಳಿಕ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮನ್ನರವರಿಗೆ ರಾಜ್ಯ ಖಜಾಂಚಿ ಸ್ಥಾನದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ.

2.ಹಳೇ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸುವ ಸಂಬಂಧ ಈಗಾಗಲೇ ರಚನೆಯಾಗಿರುವ ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳ ಸಮಿತಿ ಸಭೆಗಳನ್ನು ನಡೆಸಿದ್ದು ಹಾಗೂ ಕೆಲವು ರಾಜ್ಯಗಳಿಂದ ವರದಿಯನ್ನು ಪಡೆದಿರುವುದರಿಂದ ಎನ್.ಪಿ.ಎಸ್. ನೌಕರರ ಪರವಾಗಿ ಶೀಘ್ರ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸಮಿತಿಯ ಮೇಲೆ ಒತ್ತಡ ತಂದು 2025ರ ವರ್ಷದಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ.

3.ನಮ್ಮ ತಂಡದ ಒತ್ತಡದ ಫಲವಾಗಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಅನುದಾನ ಕಾಯ್ದಿರಿಸಿ ಜಾರಿಗೊಳಿಸಲು ಆದೇಶವನ್ನು ಹೊರಡಿಸಿರುತ್ತದೆ. ಯೋಜನೆಯ ಜಾರಿಗೆ ಸಂಬಂಧಿಸಿದಂತೆ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿ 2025ನೇ ವರ್ಷದಲ್ಲಿ ಈ ಯೋಜನೆಯನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಸರ್ಕಾರಿ ನೌಕರರಿಗೆ ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದುರಹಿತ ಆರೋಗ್ಯ ಚಿಕಿತ್ಸೆ ದೊರಕಿಸಿಕೊಡುವಲ್ಲಿ ಯಶಸ್ವಿ ಹೊಂದುವುದು.

4.ರಾಜ್ಯ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಅನುಷ್ಠಾನಗೊಳ್ಳದೇ ಬಾಕಿ ಇರುವ ಎಲ್ಲಾ ಇತರೆ ಭತ್ಯೆಗಳು ಹಾಗೂ 2ನೇ ವರದಿಯ ಶಿಫಾರಸ್ಸುಗಳ ಜಾರಿಗೆ ಕ್ರಮವಹಿಸುವುದು.

5.371ಜೆ ವಿಶೇಷ ಸ್ಥಾನಮಾನ ಮೀಸಲಾತಿಯನ್ವಯ ಬಾಕಿ ಇರುವ ಮುಂಬಡ್ತಿ ಹಾಗೂ ನೇಮಕಾತಿ ಅವಕಾಶಗಳನ್ನು ಮೊದಲ ಆದ್ಯತೆಯಲ್ಲಿ ಪರಿಗಣಿಸಲಾಗುವುದು.

6. 7ನೇ ವೇತನ ಆಯೋಗ ತನ್ನ ಶಿಫಾರಸ್ಸು ವರದಿಯಲ್ಲಿ ಮುಂದಿನ ಕೇಂದ್ರ ಮಾದರಿಯ ವೇತನ ಭತ್ಯೆಗಳ ಪರಿಷ್ಕರಣೆಯನ್ನು ರಾಜ್ಯ ಸರ್ಕಾರಿ ನೌಕರರಿಗೂ ಪರಿಗಣಿಸಲು ಶಿಫಾರಸ್ಸು ಮಾಡಿರುವುದರಿಂದ ಕೇಂದ್ರ 8ನೇ ವೇತನ ಆಯೋಗ ಜಾರಿಯಾದ ತಕ್ಷಣವೇ ರಾಜ್ಯದಲ್ಲೂ ಕೇಂದ್ರ ಮಾದರಿ ವೇತನವನ್ನು ಅನುಷ್ಠಾನಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಕಾರ್ಯಕ್ರಮ ರೂಪಿಸುವುದು.

7.ಸಂಘದ ಸ್ವಂತ ಕಟ್ಟಡ ಅಥವಾ ನಿವೇಶನವಿಲ್ಲದ ಜಿಲ್ಲೆ, ತಾಲ್ಲೂಕು ಶಾಖೆಗಳಿಗೆ ಸ್ವಂತ ಕಚೇರಿಯನ್ನು ನಿರ್ಮಿಸಲು ಆರ್ಥಿಕ ಸಹಾಯಧನ ನೀಡುವುದು.

8.ರಾಜ್ಯದ ಜಿಲ್ಲೆ, ತಾಲ್ಲೂಕು ಸಂಘದ ಪದಾಧಿಕಾರಿಗಳಿಗೆ ಹಿರಿತನ, ಅನುಭವ ಹಾಗೂ ಸಾಮಾಜಿಕ ನ್ಯಾಯದಡಿ ರಾಜ್ಯ ಸಂಘದ ಪದಾಧಿಕಾರಿಗಳ ಹುದ್ದೆಗೆ ನೇಮಿಸುವುದು.

9.ಒರಿಸ್ಸಾ ರಾಜ್ಯದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಮಹಿಳೆಯರಿಗೆ ಮಾಸಿಕ ಋತುಸ್ರಾವ ವಿಶೇಷ ರಜೆ ಸೌಲಭ್ಯವನ್ನು ಮಂಜೂರು ಮಾಡಿಸುವುದು.

10.ಸರ್ಕಾರಿ ನೌಕರರ ಗಳಿಕೆ ರಜೆಯನ್ನು ಹಾಲಿ ಇರುವ 300 ರಿಂದ 340ಕ್ಕೆ ಹೆಚ್ಚಿಸುವುದು.

11.ಬ್ಯಾಂಕ್‌ಗಳ ಸಹಕಾರದೊಂದಿಗೆ ಸರ್ಕಾರಿ ನೌಕರರು ಅಪಘಾತದಲ್ಲಿ ಮರಣಿಸಿದಲ್ಲಿ ರೂ. 1.00 ಕೋಟಿ ಪರಿಹಾರ ವಿಮಾ ಯೋಜನೆ ಜಾರಿಗೊಳಿಸುವುದು.

12.ರಾಜ್ಯದಲ್ಲಿ ಜಾರಿಯಲ್ಲಿರುವ ಕೆನೆಪದರ ಆದಾಯದ ಮಿತಿಯನ್ನು ರೂ. 8.00 ಲಕ್ಷದಿಂದ 15.00 ಲಕ್ಷಗಳಿಗೆ ಹೆಚ್ಚಿಸುವುದು.

13.ಬೆಂಗಳೂರು ನಗರ ಭಾಗದಲ್ಲಿ ನಿವೇಶನ ಖರೀದಿಸಿ ರಾಜ್ಯದ ನಾನಾ ಭಾಗಗಳಿಂದ ಬರುವ ಸರ್ಕಾರಿ ನೌಕರರಿಗೆ ವಸತಿ ಕಲ್ಪಿಸಲು ಸುಸಜ್ಜಿತ 300 ಕೊಠಡಿಗಳನ್ನು ನಿರ್ಮಿಸಿ ಕನಿಷ್ಠ ದರದಲ್ಲಿ ಬಾಡಿಗೆ ನಿಗದಿಪಡಿಸುವುದು.

14.‘ಕನ್ವೆನ್ಷನ್ ಹಾಲ್’ ನಿರ್ಮಾಣ ಮಾಡಿ, ಸರ್ಕಾರಿ ನೌಕರರ ಕುಟುಂಬದ ಕೌಟುಂಬಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಕೇವಲ ನಿರ್ವಹಣಾ ಶುಲ್ಕವನ್ನು ಮಾತ್ರ ಪಡೆದು ಉಚಿತವಾಗಿ ನೀಡುವುದು.

15.ರಾಜ್ಯ ಸರ್ಕಾರಿ ನೌಕರರ ಮಕ್ಕಳು ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಪಡೆಯಲು ಪ್ರತ್ಯೇಕ ಮೀಸಲು ವ್ಯವಸ್ಥೆ ಕಲ್ಪಿಸುವುದು.

16.ಪಿ.ಎಸ್.ಟಿ. ಪದವೀಧರ ಶಿಕ್ಷಕರಿಗೆ ಸೇವಾ ಜೇಷ್ಠತೆಯೊಂದಿಗೆ ಜಿ.ಪಿ.ಟಿ. ಶಿಕ್ಷಕರೆಂದು ಪದನಾಮೀಕರಣ ಮಾಡಿಸುವುದು.

17.ಬಡ್ತಿ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ 10,15,20 ಹಾಗೂ 30 ವರ್ಷದ ಕಾಲಮಿತಿ, ಸ್ವಯಂಚಾಲಿತ ಹಾಗೂ ಹೆಚ್ಚುವರಿ ವೇತನ ಭತ್ಯೆ ಮಂಜೂರು ಮಾಡಿಸಲು ಕ್ರಮವಹಿಸುವುದು.

18.ಪ್ರತಿ ವರ್ಷ ರಾಜ್ಯ ಸರ್ಕಾರಿ ನೌಕರರಿಗೆ ನೂತನ ವರ್ಷದ ಡೈರಿ ಮತ್ತು ಕ್ಯಾಲೆಂಡರ್‌ಗಳನ್ನು ವಿತರಿಸುವುದು.

ಈ ಮೇಲ್ಕಂಡ ಮೂಲಭೂತ ಸೇವಾ ಸೌಲಭ್ಯ ಸೇರಿ ಇತರೆ ವಿನೂತನ ಯೋಜನೆಗಳ ಭರವಸೆಯ ಪ್ರಣಾಳಿಕೆಯನ್ನು ತಮಗೆ ನೀಡುವುದರ ಜತೆಗೆ ಕಾಲ ಕಾಲಕ್ಕೆ ಉದ್ಭವಿಸುವ ಸಮಸ್ಯೆ ಸವಾಲುಗಳನ್ನು ಯಶಸ್ವಿಯಾಗಿ ಈಡೇರಿಸುವ ಪ್ರಾಮಾಣಿಕ ಜವಾಬ್ದಾರಿಯನ್ನು ನಾವು ಅರಿತಿದ್ದೇವೆ ಎಂದು ಸಿ.ಎಸ್‌.ಷಡಾಕ್ಷರಿ ಮತ್ತು ನಾಗರಾಜ ಜುಮ್ಮನ್ನ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Computer Literacy Test: ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ ಗಡುವು ಮತ್ತೆ ವಿಸ್ತರಣೆ