Monday, 16th September 2024

ವಿಶ್ವವಾಣಿ ವಿಶೇಷ: ಭರವಸೆ ಈಡೇರಿಸಲು ಸರಕಾರ ಸಿದ್ದವಿದ್ದರೂ ಏಕೆ ಮೊಂಡಾಟ ?

ಸರಕಾರಿ ನೌಕರರನ್ನಾಗಿಸಿದರೆ ನಿಗಮವನ್ನೇ ಮುಚ್ಚಬೇಕಾಗುತ್ತದೆ

ವೇತನ ಆಯೋಗದ ಶಿಫಾರಸು ಜಾರಿಗೊಳಿಸಲು ಸಾಧ್ಯವೇ ಇಲ್ಲ 

ಸಾರಿಗೆ ನೌಕರರ ಭಂಡತನಕ್ಕೆ ಸರಕಾರದ ಪ್ರಶ್ನೆ

ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಸಾರಿಗೆ ಮುಷ್ಕರ ಕರೆ ನೀಡಿರುವ ಸಾರಿಗೆ ನೌಕರರ ಮೊಂಡಾಟದಿಂದ ಸಾರಿಗೆ ನಿಗಮ, ಸಾರ್ವಜನಿಕರು ಹಾಗೂ ಸ್ವತಃ ಸಾರಿಗೆ ಇಲಾಖೆಯ ನೌಕರರಿಗೆ ಸಮಸ್ಯೆೆಯಾಗಿದೆ.

ಹೌದು, ಎರಡು ಬೇಡಿಕೆ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ನೌಕರರಿಗೆ ಈ ಎರಡು ಬೇಡಿಕೆಗಳು ಈಡೇರುವುದಿಲ್ಲ
ಎನ್ನುವುದು ಸ್ಪಷ್ಟವಾಗಿ ಗೊತ್ತಿದೆ. ಆರನೇ ವೇತನ ಜಾರಿಯಾಗಲಿ, ಸಾರಿಗೆ ನಿಗಮದ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸುವ ಯಾವ ಭರವಸೆಯೂ ಸರಕಾರ ನೀಡದಿದ್ದರೂ, ಈ ಎರಡು ಬೇಡಿಕೆಗಳನ್ನು ಇಟ್ಟುಕೊಂಡು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಆದರೆ ಈ ಎರಡೂ ಬೇಡಿಕೆಗಳು ಈಡೇರಿಸಲು ಸಾಧ್ಯವಿಲ್ಲ. ಒಂದು ವೇಳೆ ಈಡೇರಿಸಿದರೆ, ನಿಗಮಗಳನ್ನೇ ಮುಚ್ಚುವ ಪರಿಸ್ಥಿತಿ ಎದುರಾಗುತ್ತದೆ ಎನ್ನುವ ವಾಸ್ತವ ತಿಳಿದಿದ್ದರೂ, ಸರಕಾರಕ್ಕೆ ಹಾಗೂ ನಿಗಮಕ್ಕೆ ಕೆಟ್ಟ ಹೆಸರು ತರಬೇಕು ಎನ್ನುವ ಕಾರಣಕ್ಕೆ, ಕೆಲ ರಾಜಕಾರಣಿಗಳ ಮಾತು ಕೇಳಿಕೊಂಡು ನೌಕರರು ಈ ರೀತಿ ಮಾಡುತ್ತಿದ್ದಾರೆ ಎನ್ನುವ ಮಾತು ಸ್ವತಃ ಸಾರಿಗೆ ನೌಕರರಲ್ಲಿಯೇ ಕೇಳಿಬರುತ್ತಿದೆ.

ವೇತನ ಹೆಚ್ಚಳಕ್ಕೆ ಬದ್ಧ: ಸಾರಿಗೆ ನೌಕರರು ಈ ಹಿಂದೆ ಪ್ರತಿಭಟನೆ ನಡೆಸಿದ್ದಾಗಲೇ, ವೇತನ ಹೆಚ್ಚಳದ ಭರವಸೆ ನೀಡಲಾಗಿತ್ತು. ಆದರೆ ಆರನೇ ವೇತನ ಆಯೋಗ ಜಾರಿಗೊಳಿಸುವ ಯಾವುದೇ ಚರ್ಚೆಗಳು ನಡೆದಿರಲಿಲ್ಲ. ಈಗಲೂ ಸರಕಾರ ವೇತನ ಹೆಚ್ಚಳಕ್ಕೆ ಬದ್ಧವಾಗಿದೆ.

ಸಾರಿಗೆ ಇಲಾಖೆಯ ವೇತನ ಪರಿಷ್ಕರಣೆ ನಿಯಮದ ಅನ್ವಯ, 4 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆಯಾಗಬೇಕು. ಆದರೆ ಈ ಬಾರಿ ಕರೋನಾ ಇದ್ದ ಕಾರಣಕ್ಕೆ ಕಳೆದ ವರ್ಷ ವೇತನ ಹೆಚ್ಚಿಸಲು ಸಾಧ್ಯವಾಗಿಲ್ಲ. ಇದೀಗ ಉಪಚುನಾವಣೆ ಫಲಿತಾಂಶದ ಬಳಿಕ ವೇತನ ಹೆಚ್ಚಿಸುವ ಭರವಸೆ ನೀಡಲಾ ಗಿದೆ. ಒಂದು ವೇಳೆ ವೇತನ ಹೆಚ್ಚಳವಾದರೆ, 20 20ರ ಜೂನ್‌ನಿಂದಲೇ ಅನ್ವಯವಾಗು ವಂತೆ ವೇತನ ಹೆಚ್ಚಳವಾಗುವುದರಿಂದ ನೌಕರರಿಗೆ ಯಾವುದೇ ಅನ್ಯಾಾಯವಾಗುವುದಿಲ್ಲ. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿ ಗಳು, ಈ ಸತ್ಯವನ್ನು ನೌಕರರಿಂದ ಮರೆ ಮಾಚುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಆರ್‌ಟಿಒಗೆ ಚಾಲಕರಾಗೋ ಪ್ಲಾನ್: ಬಹುತೇಕ ಚಾಲಕರು, ನಿರ್ವಾಹಕರು ಅವರನ್ನು ಸರಕಾರಿ ನೌಕರರು ಎಂದು ಪರಿಗಣಿಸುವಂತೆ ಕೇಳುತ್ತಿರುವುದಕ್ಕೆ ಪ್ರಮುಖ ಕಾರಣ ಎಂದರೆ, ಈ ರೀತಿ ಒಮ್ಮೆ ಸರಕಾರಿ ನೌಕರರ ಸ್ಥಾನಮಾನ ಸಿಕ್ಕರೆ, ಬಸ್ ನಿರ್ವಹಣೆ ಬಿಟ್ಟು ಆರ್‌ಟಿಒ ಇಲಾಖೆಗೆ ವರ್ಗಾವಣೆಯಾಗಬಹುದು. ಇದರಿಂದ ಇತರ ವರಮಾನ ಹೆಚ್ಚಿಸಿಕೊಳ್ಳಬಹುದು ಎನ್ನುವ ಯೋಚನೆಯಲ್ಲಿದ್ದಾರೆ.

ಆದರೆ ಸರಕಾರಿ ನೌಕರರು ಎಂದು ಪರಿಗಣಿಸುವುದರಿಂದ, ಇತರ ನಿಗಮದ ಸಿಬ್ಬಂದಿ ಇದೇ ಆಗ್ರಹ ಮುಂದುವರಿಸುವ ಸಾಧ್ಯತೆ ಯಿದೆ. ಆದ್ದರಿಂದ ಈ ಬೇಡಿಕೆ ಅಸಾಧ್ಯ. ಇದರೊಂದಿಗೆ ಈಗಾಗಲೇ ಕರೋನಾ ಸಂಕಷ್ಟ ಕಾಲದಲ್ಲಿಯೂ, ಸಾರಿಗೆ ನೌಕರರಿಗೆ ಪ್ರತಿತಿಂಗಳು ವೇತನ ನೀಡಲಾಗಿದೆ. ನಿಗಮಗಳಲ್ಲಿ ಅನುದಾನದ ಕೊರತೆ ಇದ್ದಿದ್ದರಿಂದ ಸರಕಾರ ಸುಮಾರು 2 ಸಾವಿರ ಕೋಟಿ ನೀಡಿತ್ತು. ಆದರೂ ಈ ಪ್ರತಿಭಟನೆ ನಡೆಸುವುದು ಸರಿಯಾದ ಕ್ರಮವಲ್ಲ ಎನ್ನುವ ಮಾತುಗಳು ಕೇಳಿಬಂದಿವೆ.

ಶಾಂತಿಯುತ ಪ್ರತಿಭಟನೆ ಎಲ್ಲಿದೆ?
ಪ್ರತಿಭಟನಾ ನಿರತರು ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರೂ ಸರಕಾರ ನಮ್ಮ ಮೇಲೆ ಗದಾಪ್ರಹಾರ ನಡೆಸುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ ಎರಡು ದಿನಗಳ ಹಿಂದೆ ಕೆಲಸಕ್ಕೆ ಹೋದ ಚಾಲಕನ ಮೇಲೆ ಕಲ್ಲು ತೂರಿದ್ದಾರೆ. ಇದರಿಂದ ಆ ಚಾಲಕ ಕೊನೆಯುಸಿರು ಎಳೆದಿದ್ದಾರೆ. ನಿಮ್ಮೊಂದಿಗೆ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಈ ರೀತಿ ಸಾಯಿಸಿದ್ದೀರಾ. ಇದನ್ನು ಶಾಂತಿಯುತ ಪ್ರತಿಭಟನೆ ಎನ್ನಲು ಸಾಧ್ಯವೇ? ಅಷ್ಟಕ್ಕೂ ಇದೀಗ ಮೃತಪಟ್ಟವರಿಗೆ ನೌಕರರಾಗಲಿ, ಕೋಡಿಹಳ್ಳಿ ಚಂದ್ರಶೇಖರ್ ಆಗಲಿ ಸಹಾಯ ಮಾಡಿದರೇನು ಎನ್ನುವ ಪ್ರಶ್ನೆಗಳು ಶುರುವಾಗಿವೆ.

Leave a Reply

Your email address will not be published. Required fields are marked *