ತುಮಕೂರು: ನಾಡ ಬಂದೂಕು ತಯಾರಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಜಾಲ ಸಕ್ರಿಯವಾಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರು ಮಂದಿಯ ತಂಡವನ್ನು ಬಂಧಿಸಿದ್ದಾರೆ. ಗುಬ್ಬಿ ತಾಲೂಕಿನ (Gubbi News) ತಿಪ್ಪೂರು ಗ್ರಾಮದ ಮಧುಚಂದ್ರ(29). ಶಿವಕುಮಾರ್(24), ಹೊಸಕೆರೆ ನಿಟ್ಟೂರು ಹೋಬಳಿಯ ಮಂಜುನಾಥ(39), ಚೌಳಕಟ್ಟೆಯ ತಿಮ್ಮರಾಜ(45) ಮಾದಾಪುರದ ರವೀಶ್ (50) ಮತ್ತು ಭೀಮಸಂದ್ರದ ಇಮ್ರಾನ್ ಪಾಷಾ(40) ಬಂಧಿತರು.
ಆ.12ರಂದು ರಾತ್ರಿ 10.30ರ ಸುಮಾರಿನಲ್ಲಿ ಗುಬ್ಬಿ ತಾಲೂಕಿನ ತಿಪ್ಪೂರು ಗ್ರಾಮದ ಆರೋಪಿಗಳಾದ ಮಧುಚಂದ್ರ ಮತ್ತು ಶಿವಕುಮಾರ್ ಲೈಸೆನ್ಸ್ ಇಲ್ಲದೆ ನಾಡ ಬಂದೂಕಿನೊಂದಿಗೆ ಬೇಟೆಗೆ ಹೋಗಿದ್ದಾಗ ಸ್ಥಳೀಯ ನಿವಾಸಿ ದರ್ಶನ್ ಎಂಬುವರು ಆಕ್ಷೇಪಿಸಿದ್ದರು.
ಅದೇ ವೇಳೆ ಬಂದೂಕು ಕೆಳಗೆ ಬಿದ್ದು ಮಿಸ್ ಫೈರ್ ಆಗಿದ್ದರಿಂದ ದರ್ಶನ್ ಅವರ ಪತ್ನಿ ಚೈತ್ರಾ ಗಾಯಗೊಂಡಿದ್ದರು. ಈ ಬಗ್ಗೆ ಪೊಲೀಸ್ ಠಾಣೆಗೆ ಚೈತ್ರಾ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾಗ, ಬಂದೂಕು ತಯಾರಿಸಿ 25-30 ಸಾವಿರ ರೂ.ಗೆ ಮಾರಾಟ ಮಾಡುವ ಜಾಲವಿರುವುದು ತಿಳಿದುಬಂದಿದೆ.
ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಮರಿಯಪ್ಪ ಮತ್ತು ಅಬ್ದುಲ್ ಖಾದರ್ ಮಾರ್ಗದರ್ಶನದಲ್ಲಿ ಉಪವಿಭಾಗದ ಡಿವೈಎಸ್ಪಿ ಶೇಖರ್ ಅವರ ನೇತೃತ್ವದಲ್ಲಿ ಗುಬ್ಬಿ ವೃತ್ತದ ಸಿಪಿಐ ಗೋಪಿನಾಥ , ಪಿಎಸ್ಐ ಸುನೀಲ್‌ಕುಮಾರ್ ಹಾಗೂ ಸಿಬ್ಬಂದಿ ತಂಡ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ನರಸಿಂಹರಾಜು ಹಾಗೂ ದುಶ್ಯಂತ್ ಕಾರ್ಯ ಪ್ರವೃತ್ತರಾಗಿ ಮಾಹಿತಿ ಕಲೆ ಹಾಕಿ ಆರು ಮಂದಿಯ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳಾದ ತಿಮ್ಮರಾಜು ಮತ್ತು ರವೀಶ್ ತಮ್ಮ ಸ್ವಗ್ರಾಮದಲ್ಲಿಯೇ ಆಕ್ರಮವಾಗಿ ಬಂದೂಕು ತಯಾರಿಸುತ್ತಿದ್ದು, ಅದಕ್ಕೆ ಬೇಕಾದ ಮೆಷನರಿ ಕೆಲಸವನ್ನು ಆರೋಪಿ ಇಮ್ರಾನ್ ಎಂಬಾತ ಲೇತ್ ಮತ್ತು ಡ್ರಿಲ್ಲಿಂಗ್ ಮೆಷಿನ್‌ನಿಂದ ಮಾಡಿಕೊಡುತ್ತಿದ್ದುದು ವಿಚಾರಣೆಯಿಂದ ಗೊತ್ತಾಗಿದೆ.
ಆರೋಪಿಗಳಿಂದ 4 ಬಂದೂಕುಗಳು, ಬಂದೂಕಿನ ಬಿಡಿ ಭಾಗಗಳು ಹಾಗೂ ಬಂದೂಕು ತಯಾರಿಸಲು ಬಳಸುವ ಉಪಕರಣಗಳು, ಕಚ್ಚಾ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಬಂದೂಕುಗಳನ್ನು ಖರೀದಿಸಿದವರು ಕಾಡುಪ್ರಾಣಿಗಳ ಬೇಟೆಯಾಡಲು ಉಪಯೋಗಿಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಇನ್ನು ಕೆಲವರ ಬಳಿ ನಾಡ ಬಂದೂಕು ಅಕ್ರಮವಾಗಿ ಇಟ್ಟುಕೊಂಡಿರುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದು, ಅವುಗಳ ಪತ್ತೆ ಕಾರ್ಯ ಮುಂದುವರಿದಿದೆ.
ಈ ಸುದ್ದಿಯನ್ನೂ ಓದಿ | Blood-Red liquid flood: ಮುತ್ತಿನ ನಗರದ ಬೀದಿ ಬೀದಿಗಳಲ್ಲಿ ಹರಿದ ಕೆಂಪು ದ್ರವ…ಆತಂಕದಲ್ಲಿ ಜನ
ಬೈಕ್‌ಗೆ ಗುದ್ದಿ ಪರಾರಿಯಾದ ಕಾರು ಚಾಲಕ, ಇಬ್ಬರು ಸವಾರರ ಸಾವು
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಆಂಡ್ ರನ್ (Hit and Run) ಪ್ರಕರಣ ನಡೆದಿದೆ. ಕಾರು ಚಾಲಕನೊಬ್ಬ ಇಬ್ಬರು ಬೈಕ್ ಸವಾರರ (Bike riders) ಸಾವಿಗೆ ಕಾರಣನಾಗಿ ಪರಾರಿಯಾಗಿದ್ದಾನೆ. ಬೆಂಗಳೂರು (Bengaluru news) ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಬಳಿ ನೆರಗನಹಳ್ಳಿ ಗೇಟ್ ಬಳಿ ಈ ಭೀಕರ ಅಪಘಾತ (Road Accident) ಸಂಭವಿಸಿದೆ.
ವೇಗವಾಗಿ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಇಬ್ಬರು ಸವಾರರು ಸಾವನ್ನಪ್ಪಿದ್ದಾರೆ. ದೇವನಹಳ್ಳಿ ಬಳಿಯ ನೇರಗನಹಳ್ಳಿ ಗೇಟ್ ಬಳಿ ಬೈಕ್ ಮೇಲೆ ವೆಂಕಟೇಶ್ ಮತ್ತು ಮಹೇಶ್ ಎನ್ನುವ ಸವಾರರು ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಚಿಮ್ಮಿಬಿದ್ದು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಬೈಕ್ ಸವಾರರಾದ ವೆಂಕಟೇಶ ಹಾಗೂ ಮಹೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದ ನಂತರ ಚಾಲಕ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿ ಆಗಿದ್ದಾನೆ. ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಅಪಘಾತ ಕುರಿತು ಪ್ರಕರಣ ದಾಖಲಾಗಿದೆ.