Monday, 25th November 2024

Guru Vandana: ಗುರು-ಶಿಷ್ಯರ ಸಮಾಗಮ; ಲಕ್ಷ್ಮೀಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಅದ್ಧೂರಿ ಗುರುವಂದನೆ

Guru Vandana

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮೀಪುರದ ಸರ್ಕಾರಿ ಪ್ರೌಢಶಾಲೆಯು, ಗುರು-ಶಿಷ್ಯರ ಸಮಾಗಮದ ಅವಿಸ್ಮರಣೀಯ ಕ್ಷಣಕ್ಕೆ ಭಾನುವಾರ ಸಾಕ್ಷಿಯಾಯಿತು. ಅಕ್ಷರ ಕಲಿಸಿ, ಜ್ಞಾನಾರ್ಜನೆಗೆ ನೆರವಾದ ಗುರುಗಳಿಗೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಪ್ರೀತಿಯಿಂದ ಸನ್ಮಾನಿಸಿದರೆ, ಶಿಷ್ಯವೃಂದದ ಗುರುಭಕ್ತಿ, ವಿಧೇಯತೆ ಕಂಡು ಶಿಕ್ಷಕರು ಭಾವಪರವಶರಾದರು.

ಶಿಷ್ಯ ಬಳಗದ ಗುರುವಂದನೆ ಸ್ವೀಕರಿಸಲು ದೂರದ ಊರುಗಳಿಂದ ಶಿಕ್ಷಕರು ಕಾರ್ಯಕ್ರಮಕ್ಕೆ ಬಂದಿದ್ದರು. ಹೀಗಾಗಿ ತಮ್ಮ ನೆಚ್ಚಿನ ಶಿಕ್ಷಕರನ್ನು ಕಾಣಲು ಶಾಲೆಯ ನೂರಾರು ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ವೇಳೆ ಶಿಕ್ಷಕ ವೃಂದವನ್ನು ಹಳೆಯ ವಿದ್ಯಾರ್ಥಿಗಳು ಪುಷ್ಪವೃಷ್ಟಿಯೊಂದಿಗೆ ಅದ್ಧೂರಿಯಾಗಿ ವೇದಿಕೆಗೆ ಸ್ವಾಗತಿಸಿದರು.

ಇನ್ನು ಶಾಲೆಯಲ್ಲಿ ಸೇವೆ ಸಲ್ಲಿಸಿದ ದಿನಗಳ ನೆನಪುಗಳನ್ನು ಸ್ಮರಿಸಿ ಶಿಕ್ಷಕರು ಸಂತಸಪಟ್ಟರು. ಈ ವೇಳೆ ಶಿಕ್ಷಕರಿಗೆ ಶಾಲು ಹೊದಿಸಿ ಹೂವಿನ ಹಾರ ಹಾಕಿ, ಸ್ಮರಣಿಕೆ ನೀಡುವ ಮೂಲಕ ಹಳೆಯ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿ ಆಶೀರ್ವಾದ ಪಡೆದರು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಕೆ.ಆರ್‌. ಶ್ರೀನಿವಾಸುಲು ಅವರು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಸಿಗುವಂತಹ ಶಿಕ್ಷಣ, ಸಂಸ್ಕಾರ ಬೇರೆಲ್ಲೂ ಸಿಗಲ್ಲ. ಲಕ್ಷ್ಮೀಪುರ ಶಾಲೆಯು ತಾಲೂಕಿನಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಪ್ರೌಢಶಾಲೆಗಳಲ್ಲಿ 2ನೇ ಸ್ಥಾನದಲ್ಲಿದೆ. ಸತತವಾಗಿ ಈ ಶಾಲೆಯ ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಸಾಧನೆ ತೋರಿದ್ದಾರೆ. ಇನ್ನು ಮುಖ್ಯ ಶಿಕ್ಷಕರೊಬ್ಬರೇ ಏನೂ ಮಾಡಲು ಸಾಧ್ಯವಿಲ್ಲ, ಎಲ್ಲ ಸಹ ಶಿಕ್ಷಕರ ಸಹಕಾರದರಿಂದ ಶಾಲೆಯ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.

ಶಿಕ್ಷಕ ಎ.ಬಾಲರಾಜು ಅವರು ಮಾತನಾಡಿ, ಅನ್ನದಾನಕ್ಕಿಂತ ಮಿಗಿಲಾಗಿ ವಿದ್ಯಾದಾನ ಶ್ರೇಷ್ಠ. ಶಿಕ್ಷಣ ಎನ್ನುವುದು ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ದಾರಿದೀಪವಾಗಿದ್ದು, ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಏಳಿಗೆಗಾಗಿ ಶ್ರಮಿಸಬೇಕು ಕರೆ ನೀಡಿದರು.

ಶಾಲೆ ಅಭಿವೃದ್ಧಿಗೆ ಶಿಕ್ಷಕರ ಕರೆ
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಹಳೆಯ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿಕ್ಷಕರು, ತಾವು ಓದಿದ ಶಾಲೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು. ಹೀಗಾಗಿ ಹಳೆಯ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ನೆರವು ನೀಡುವುದಾಗಿ ಹಳೆಯ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಹೇಶ್‌, ಉಮೇಶ್‌, ಜಗದೀಶ್‌, ಶೇಷಗಿರಿ, ಅಶೋಕ್‌, ವೆಂಕಟರವಣಪ್ಪ ಮತ್ತಿತರರು ಹಾಗೂ 2005ರಿಂದ 2009 ಸಾಲಿನವರೆಗಿನ ನೂರಾರು ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿ | Vishwavani Global Achievers Award: ಜಪಾನ್‌ನಲ್ಲಿ ‘ವಿಶ್ವವಾಣಿ’ಯಿಂದ ಕನ್ನಡ ಡಿಂಡಿಮ; ಕರುನಾಡಿನ ಸಾಧಕರಿಗೆ ಅದ್ಧೂರಿ ಪ್ರಶಸ್ತಿ ಪ್ರದಾನ