ಬೆಂಗಳೂರು: ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಶ್ರೀಮಂತಿಕೆಯನ್ನು ಬೆಳ್ಳಿತೆರೆಗೆ ತರುವ ಉದ್ದೇಶದಿಂದ, ಕರಿಗಿರಿ ಫಿಲ್ಮ್ಸ್ ʼಹರಿದಾಸರ ದಿನಚರಿʼ ಚಿತ್ರವನ್ನು (Haridasara Dinachari Movie) ನಿರ್ಮಿಸಿದೆ. ಸುಮಾರು ಒಂದೂವರೆ ಗಂಟೆಗಳಲ್ಲಿ ಶ್ರೀ ಪುರಂದರ ದಾಸರ ಒಂದು ದಿನದ ಜೀವನ ಯಾನವನ್ನು ಸಾಂಕೇತಿಕವಾಗಿ ತೆರೆದಿಡುವ ಮೂಲಕ ಸಮಗ್ರ ಭಾರತೀಯ ಆಧ್ಯಾತ್ಮಿಕ ಪ್ರಪಂಚದ ಚಟುವಟಿಕೆಗೆ ಕನ್ನಡಿ ಹಿಡಿಯುವ ಹರಿದಾಸರ ದಿನಚರಿ ಚಿತ್ರಕ್ಕೆ ಸೆನ್ಸಾರ್ ಯು ಸರ್ಟಿಫಿಕೇಟ್ ನೀಡಿದೆ. ಈ ಚಿತ್ರ 15ನೇ ಶತಮಾನದ ದಾಸ ಶ್ರೇಷ್ಠ ಶ್ರೀ ಪುರಂದರ ದಾಸರ ದೈನಂದಿನ ಜೀವನದ ಮನೋಹರ ದೃಶ್ಯಗಳನ್ನು ಒಳಗೊಂಡಿದೆ.
ʼಹರಿದಾಸರ ದಿನಚರಿʼ ಜೀವನಚರಿತ್ರೆಯ ಚಿತ್ರವಲ್ಲ. ಇದು ಪ್ರೇಕ್ಷಕರನ್ನು ಆಳವಾದ ಭಕ್ತಿ ಮತ್ತು ಕಲಾತ್ಮಕ ಅಭಿವ್ಯಕ್ತಿಯ ಯುಗಕ್ಕೆ ಕರೆದೊಯ್ಯುವ ಒಂದು ಅನುಭವ. ಪಾಂಡವಪುರ ಸಮೀಪದ ಕಾವೇರಿ ನದಿಯ ತೀರ ಕಲ್ಲು ಮಂಟಪಗಳು ಪ್ರಾಚೀನ ಶಿಲಾ ವೈಭವದ ದೇವಸ್ಥಾನಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದ್ದು, ಇಂತಹ ಚಿತ್ರಗಳು ಕೇವಲ ಚಿತ್ರಮಂದಿರಗಳಲ್ಲಿ ಮಾತ್ರವಲ್ಲ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಕೂಡ ಪ್ರದರ್ಶಿತವಾಗಬೇಕು ಎಂದು ಸೆನ್ಸಾರ್ ಮಂಡಳಿ ಸದಸ್ಯರು ಅಭಿಪ್ರಾಯಿಸಿದ್ದಾರೆ.
ʼಹರಿದಾಸರ ದಿನಚರಿʼ ಚಿತ್ರದ ಕುರಿತು ವಿವಿಧ ಕ್ಷೇತ್ರದ ಗಣ್ಯರಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಚಿತ್ರದ ತುಣುಕುಗಳನ್ನು ವೀಕ್ಷಿಸಿದ ಬಳಿಕ ನಿರ್ದೇಶಕ ಗಿರೀಶ್ ಚಿತ್ರೀಕರಣದ ಹಲವು ಘಟ್ಟಗಳನ್ನು ವಿವರಿಸಿದರು. ಡಾ. ವಿದ್ಯಾಭೂಷಣ, ಡಾ ವೀಣಾ ಬನ್ನಂಜೆ, ನಿರುಪಮಾ ರಾಜೇಂದ್ರ, ಡಾ ಜಯಂತ ವ್ಯಾಸನಕೆರೆ ಹಾಗೂ ಇತರರು ಉಪಸ್ಥಿತರಿದ್ದರು.
ಅದ್ಭುತ ದೃಶ್ಯಗಳು ಮತ್ತು ಆತ್ಮಸ್ಪರ್ಶಿ ನಿರೂಪಣೆಯ ಮೂಲಕ, ಚಿತ್ರವು ಪುರಂದರ ದಾಸರು ತಮ್ಮ ದಿನಚರಿಯಲ್ಲಿ ಮುನ್ನಡೆಯುವುದನ್ನು, ಅವರ ಪ್ರಸಿದ್ಧ ʼಜಗದೋದ್ಧಾರನ ಆಡಿಸಿದಳೆ ಯಶೋದೆʼ ಹಾಡನ್ನು ರಚಿಸುವುದನ್ನು ಮತ್ತು ತಮ್ಮ ದೈನಂದಿನ ಆಚರಣೆಗಳಲ್ಲಿ ತೊಡಗುವುದನ್ನು ಅನುಸರಿಸುತ್ತದೆ ಎಂದು ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಗಿರೀಶ್ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | KPSC Recruitment 2024: 750 ಭೂ ಮಾಪಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದ KPSC; ಹೀಗೆ ಅಪ್ಲೈ ಮಾಡಿ
ʼಹರಿದಾಸರ ದಿನಚರಿʼ ಚಿತ್ರದ ಟ್ರೈಲರ್ ಉಡುಪಿಯ ಶ್ರೀ ಕೃಷ್ಣ ಸನ್ನಿಧಿಯಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಉಭಯಶ್ರೀಪಾದರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ಬಿಡುಗಡೆ ಆಗಿತ್ತು.
ನಿರ್ದೇಶಕ ಗಿರೀಶ್ ನಾಗರಾಜ್ ಅವರು ಚಿತ್ರದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದು, ʼಹರಿದಾಸರ ದಿನಚರಿ’ ಮಹಾನ್ ಸಂತ-ಕವಿ ಶ್ರೀ ಪುರಂದರ ದಾಸರ ಜೀವನದ ಒಂದು ದಿನದ ಸಾರವನ್ನು ಸೆರೆಹಿಡಿಯುವ ಒಂದು ಪ್ರಯತ್ನ. ಕಲೆ ಮತ್ತು ಆಧ್ಯಾತ್ಮಿಕತೆಯನ್ನು ಮೆಚ್ಚುವ ಪ್ರೇಕ್ಷಕರೊಂದಿಗೆ ಇದು ಆಳವಾಗಿ ಪ್ರತಿಧ್ವನಿಸುತ್ತದೆ ಎಂದು ನಾವು ನಂಬುತ್ತೇವೆ ಅನ್ನುತ್ತಾರೆ. ಕನ್ನಡದ ಖ್ಯಾತ ದಾಸ ಸಾಹಿತ್ಯದ ಗಾಯಕ ಡಾ. ವಿದ್ಯಾಭೂಷಣರು ಶ್ರೀ ಪುರಂದರ ದಾಸರಾಗಿ ಅತ್ಯುತ್ತಮ ಮತ್ತು ಸ್ಪೂರ್ತಿದಾಯಕ ಅಭಿನಯವನ್ನು ನೀಡಿದ್ದಾರೆ, ಸಂತರ ವಿನಯ, ಕರುಣೆ ಮತ್ತು ಭಕ್ತಿಯನ್ನು ಪರದೆಯ ಮೇಲೆ ಜೀವಂತಗೊಳಿಸಿದ್ದಾರೆ ಎಂದು ಗಿರೀಶ್ ತಿಳಿಸಿದ್ದಾರೆ.
ಈ ಚಿತ್ರವು ಹದಿನೈದನೇ ಶತಮಾನದ ಸಂತ-ಸಂಯೋಜಕ ಪುರಂದರದಾಸರ ದೈನಂದಿನ ಜೀವನದ ಸೌಂದರ್ಯವನ್ನು ಚಿತ್ರಿಸುತ್ತದೆ. ಪುರಂದರದಾಸರು ತಮ್ಮ ಗುರುಗಳಾದಶ್ರೀ ವ್ಯಾಸತೀರ್ಥರ ದರ್ಶನಕ್ಕೆಂದು ಚನ್ನಪಟ್ಟಣ ಸಮೀಪದ ಅಬ್ಬೂರು ಗ್ರಾಮಕ್ಕೆ ಭೇಟಿ ನೀಡುತ್ತಾರೆ. ದೊಡ್ಡ ಮಳೂರಿನ ಅಪ್ರಮೇಯ ಸ್ವಾಮಿ ದೇವಾಲಯದಲ್ಲಿ ನವನೀತ ಅಂಬೇಗಾಲು ಕೃಷ್ಣನ ಸುಂದರವಾದ ವಿಗ್ರಹದ ದರ್ಶನ ಪಡೆದು ʼಜಗದೋದ್ಧಾರನ ಆಡಿಸಿದಳೆಶೋದೆʼ ಪದ್ಯವನ್ನು ರಚಿಸಿದ ಐತಿಹಾಸಿಕ ಘಟನೆಯ ಮೂಲ ಚಿತ್ರಣದ ಜತೆಗೆ ಅವರ ಆ ನಿತ್ಯ ದಿನದ ಚಟುವಟಿಕೆಗಳ ದರ್ಶನವನ್ನು ಈ ಚಲನ ಚಿತ್ರ ಒಳಗೊಂಡಿದೆ. ಈ ಚಿತ್ರದಲ್ಲಿ ದಾಸರ ಈ ವಿಶೇಷ ದಿನವನ್ನು ಮುಂಜಾನೆಯ ಪ್ರಾರ್ಥನಾ ಕರ್ಮಗಳಿಂದ ಪ್ರಾರಂಭಿಸಿ, ರಾತ್ರಿ ಶಯನದ ವರೆಗಿನ ಚಿತ್ರಣ ನೀಡಲಾಗುತ್ತದೆ ಹಾಗೂ ಅವರ ಸೊಗಡಿನ ಉಗಾಭೋಗಗಳನ್ನು ಕಥೆಗೆ ಪೂರಕವಾಗಿ ಹೆಣೆಯಲಾಗಿದೆ.
ಡಾ. ವಿದ್ಯಾಭೂಷಣ ಶ್ರೀ ಪುರಂದರ ದಾಸರಾಗಿ ಅಭಿನಯಿಸಿದ್ದು, ಇತರ ಪಾತ್ರಗಳಲ್ಲಿ ಘನಶ್ಯಾಮ್ ಕೆ.ವಿ, ಗೋಕುಲ್ ಅಯ್ಯರ್, ವಾಸುದೇವ ಮೂರ್ತಿ ಕೆ.ಎನ್, ಚಲಪತಿ, ಪ್ರಸನ್ನ ವೆಂಕಟೇಶ ಮೂರ್ತಿ, ಪದ್ಮಕಲಾ ಡಾ. ಜಿ.ಎಲ್. ಹೆಗ್ಡೆ ಮುಂತಾದವರಿದ್ದಾರೆ. ಶ್ರೀ ಪುರಂದರ ದಾಸರ ಕೃತಿಗಳ ಸಾಹಿತ್ಯವನ್ನು ಸಮಯೋಚಿತವಾಗಿ ಬಳಸಲಾಗಿದ್ದು, ಛಾಯಾಗ್ರಹಣ ಎಂ. ಹರಿದಾಸ್ ಅವರದು. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಗಿರೀಶ್ ನಾಗರಾಜ ನಿರ್ವಹಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Credit Card: ಕ್ರೆಡಿಟ್ ಕಾರ್ಡ್ ಪಡೆಯುವ ಮೊದಲು ಈ ಸಂಗತಿ ತಿಳಿದಿರಲಿ!
ಸಂಗೀತ ಹಾಗೂ ಗಾಯನ ಡಾ. ವಿದ್ಯಾಭೂಷಣರದು. ಹಿನ್ನೆಲೆ ಸಂಗೀತ ರೊಣದ ಬಕ್ಕೇಶ್, ಸಂಕಲನ ಸುಹಾಸ್ ಜಯ್, ಶಿವರಾಮಯ್ಯ ನಿರ್ವಹಿಸಿದ್ದಾರೆ ಎಂದು ನಿರ್ದೇಶಕ ಗಿರೀಶ್ ತಿಳಿಸಿದ್ದಾರೆ.