Thursday, 24th October 2024

Hasanamba Jatre: ಅ.24ರಿಂದ ಹಾಸನಾಂಬ ಜಾತ್ರೆ; ದೇಗುಲಕ್ಕೆ ದೇವಿಯ ಒಡವೆಗಳು ರವಾನೆ

hasanamba temple

ಹಾಸನ: ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬ ಜಾತ್ರಾ ಮಹೋತ್ಸವ (Hasanamba Jatre) ಅ.24 ರಿಂದ ನ.3 ರವರೆಗೆ ನಡೆಯುವ ಹಿನ್ನೆಲೆಯಲ್ಲಿ ದೇವಾಲಯಕ್ಕೆ ದೇವಿಯ ಒಡವೆಗಳನ್ನು ರವಾನೆ ಮಾಡಲಾಗಿದೆ. ಹಾಸನದ ಜಿಲ್ಲಾ ಖಜಾನೆಯಿಂದ ದೇವಿಯ ಒಡವೆಗಳನ್ನು ತೆಗೆದುಕೊಂಡು ಹೋಗಲಾಗಿದ್ದು, ಅವುಗಳಿಗೆ ಪ್ರಧಾನ ಅರ್ಚಕ ನಾಗರಾಜ್ ಅವರು ಪೂಜೆ ಸಲ್ಲಿಸಿದ್ದಾರೆ.

ಮಂಗಳವಾದ್ಯಗಳೊಂದಿಗೆ ಬೆಳ್ಳಿ ರಥದಲ್ಲಿ ಒಡವೆಗಳನ್ನು ದೇವಾಲಯಕ್ಕೆ ರವಾನೆ ಮಾಡಲಾಯಿತು. ಸಾಲಗಾಮೆ ರಸ್ತೆಯಲ್ಲಿರುವ ಜಿಲ್ಲಾ ಖಜಾನೆಯಿಂದ ಬಿಗಿ ಭದ್ರತೆಯಲ್ಲಿ ತಹಸೀಲ್ದಾರ್, ಪೊಲೀಸರ ಸಮ್ಮುಖದಲ್ಲಿ ಹಾಸನಾಂಬ ದೇವಾಲಯಕ್ಕೆ ಒಡವೆಗಳನ್ನು ಹಸ್ತಾಂತರ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ | KMF Milestone: ಕೆಎಂಎಫ್‌ನಿಂದ ಮತ್ತೊಂದು ಮೈಲಿಗಲ್ಲು; ದಿನಕ್ಕೆ 2.5ಕೋಟಿ ಲೀ. ಹಾಲು ಉತ್ಪಾದನೆ

ಆಶ್ವಯುಜ ಮಾಸದ ಹುಣ್ಣಿಮೆ ನಂತರ ಬರುವ ಮೊದಲ ಗುರುವಾರ ( ಈ ಬಾರಿ ಅ.24) ಹಾಸನಾಂಬ ದೇಗುಲ ತೆಗೆಯಲಾಗುತ್ತದೆ. ಬಲಿಪಾಡ್ಯಮಿಯ ಮಾರನೇ ದಿನ ದೇಗುಲದ ಬಾಗಿಲು ಮುಚ್ಚುವುದು ಸಂಪ್ರದಾಯವಾಗಿದೆ. ಜಾತ್ರಾ ಮಹೋತ್ಸವಕ್ಕೆ ಜಿಲ್ಲಾಡಳಿತದಿಂದ ಭರದ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿ ಹಾಸನಾಂಬ ವೆಬ್‌ಸೈಟ್ ಸಹ ಅರಂಭಿಸಲಾಗಿದೆ.

ಇನ್ನು ಹಾಸನಾಂಬ ಮತ್ತು ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವವನ್ನು ಊರಿನ ಹಬ್ಬದಂತೆ ಆಚರಿಸಲು ಹಾಗೂ ಬರುವ ಭಕ್ತರಿಗೆ ಸಮಸ್ಯೆಯಾಗದಂತೆ ವಹಿಸಿರುವ ಜವಾಬ್ದಾರಿಯನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಸೂಚನೆ ನೀಡಿದ್ದಾರೆ. ಈ ಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಅವರಿಗೆ ಆಹ್ವಾನ ನೀಡಲಾಗಿದೆ. ಈ ವರ್ಷ 9 ದಿನ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, 20 ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆ ಇದೆ.

ಈ ಸುದ್ದಿಯನ್ನೂ ಓದಿ | Virat Kohli: ಇಸ್ಕಾನ್​ ಮಂದಿರದ ಸಂಕೀರ್ತನೆಯಲ್ಲಿ ಪಾಲ್ಗೊಂಡ ಕೊಹ್ಲಿ-ಅನುಷ್ಕಾ; ವಿಡಿಯೊ ವೈರಲ್

ಜಾತ್ರೆ ಹಿನ್ನೆಲೆ ನಗರದಾದ್ಯಂತ ಅಲಂಕಾರದ ಕಾರ್ಯಗಳು ಭರದಿಂದ ನಡೆಯುತ್ತಿವೆ. ವಿದ್ಯುತ್‌ ಅವಘಡಗಳು ತಪ್ಪಿಸಲು ಕೆಪಿಟಿಸಿಎಲ್, ಸೆಸ್ಕಾಂ ಸಿಬ್ಬಂದಿ ನಿಗಾ ವಹಿಸಿದ್ದು, ಎಲ್ಲ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಇನ್ನು ರಸ್ತೆಗಳ ಡಾಂಬರೀಕರಣ ಮಾಡಲಾಗಿದ್ದು, ದೇವಸ್ಥಾನದ ಒಳ ಭಾಗದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಸರದಿ ಸಾಲಿನಲ್ಲಿ ಬರುವ ಭಕ್ತರಿಗೆ ಸಮಸ್ಯೆ ಆಗದಂತೆ ಕುಡಿಯುವ ನೀರು, ಶೌಚಾಲಯ, ಮಜ್ಜಿಗೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.