Monday, 13th January 2025

HD Kumaraswamy: ಏಪ್ರಿಲ್‌ ಒಳಗೆ ಜೆಡಿಎಸ್‌ಗೆ ನೂತನ ರಾಜ್ಯಾಧ್ಯಕ್ಷ: ಎಚ್‌ಡಿ ಕುಮಾರಸ್ವಾಮಿ

HD Kumaraswamy

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷರ (JDS) ಆಯ್ಕೆಯನ್ನು ಮುಂದಿನ ಏಪ್ರಿಲ್ ತಿಂಗಳ ಒಳಗೆ ಚುನಾವಣೆ ಮೂಲಕ ನಡೆಸುವ ನಿರ್ಧಾರವನ್ನು ಜೆಡಿಎಸ್ ಕೈಗೊಂಡಿದೆ ಎಂದು ಕೇಂದ್ರ ಸಚಿವರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ತಿಳಿಸಿದರು. ಆದರೆ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಈ ಸಭೆಯಲ್ಲಿ ಚರ್ಚೆ ಆಗಿಲ್ಲ ಎಂದು ಸಚಿವರು ಹೇಳಿದರು.

ಜತೆಗೆ; ಪಕ್ಷದ ದ್ವೈವಾರ್ಷಿಕ ಸಾಂಸ್ಥಿಕ ಚುನಾವಣೆ, ಸದಸ್ಯತ್ವ ಅಭಿಯಾನವನ್ನು ಚುರುಕುಗೊಳಿಸುವುದು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ತಯಾರಿ ಹಾಗೂ ಪಕ್ಷ ಸಂಘಟನೆ ವಿಷಯಗಳ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು.

ಮುಖಂಡರ ಸಭೆಯ ನಂತರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು. ಮುಂದಿನ ಏಪ್ರಿಲ್ ಒಳಗೆ ರಾಜ್ಯದ ಘಟಕದ ಅಧ್ಯಕ್ಷ ಸ್ಥಾನವನ್ನು ಚುನಾವಣೆ ಮೂಲಕ ಆಯ್ಕೆ ಮಾಡುವ ತೀರ್ಮಾನ ಆಗಿದೆ. ಪಕ್ಷದ ಸಂಘಟನೆ ಬಗ್ಗೆ ಪಕ್ಷದ ನಾಯಕರಿಗೆ ಕಠಿಣವಾಗಿಯೇ ಹೇಳಿದ್ದೇನೆ. ಯಾರು ಪ್ರಾಮಾಣಿಕವಾಗಿ ಪಕ್ಷದ ಸಂಘಟನೆಗೆ ದುಡಿಯುತ್ತಾರೋ ಅಂಥವರಿಗೆ ಆದ್ಯತೆ ಕೊಡುತ್ತೇವೆ. ನಾನು ಕೂಡ ಪಕ್ಷ ಸಂಘಟನೆಯಲ್ಲಿ ನಿಯಮಿತವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಮೇಲೆ ರಾಜ್ಯದಲ್ಲಿ ನಾಯಕತ್ವ ಶೂನ್ಯ ಉಂಟಾಗಿದೆ ಎಂದು ಹೇಳಲಾಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು; ವಾರದಲ್ಲಿ ನಾಲ್ಕು ದಿನ ನವದೆಹಲಿಯ ಸಚಿವಾಲಯದಲ್ಲಿ ಕೆಲಸ ಮಾಡುತ್ತೇನೆ. ಒಂದು ಅಥವಾ ಎರಡು ದಿನ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದ ಕಾರ್ಖಾನೆಗಳಿಗೆ ಭೇಟಿ ಕೊಡುತ್ತೇನೆ. ಉಳಿದ ಸಮಯವನ್ನು ಪಕ್ಷದ ಕೆಲಸಕ್ಕೆ ಮಿಸಲಿಡುತ್ತೇನೆ. ಪಕ್ಷದ ಸಂಘಟನೆ, ಸಭೆ, ಪ್ರವಾಸ, ಮಂಡ್ಯ ಕ್ಷೇತ್ರಕ್ಕೆ ಭೇಟಿ ಇತ್ಯಾದಿಗಳ ಬಗ್ಗೆ ವೇಳಾಪಟ್ಟಿ ಸಿದ್ಧ ಮಾಡಿಕೊಂಡಿದ್ದೇನೆ. ಇನ್ನು ಮುಂದೆ ಅದರಂತೆಯೇ ಕೆಲಸ ಮಾಡುತ್ತೇನೆ ಎಂದು ಸಚಿವರು ಹೇಳಿದರು.

ಸಾರ್ವಜನಿಕ ಉದ್ಯಮಿಗಳು ಅಭದಾಯಕವಲ್ಲ ಎನ್ನುವ ಮಾತಿದೆ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಆ ಕಾರ್ಖಾನೆಗಳು ಲಾಭ ಮಾಡಬಲ್ಲವು ಎಂಬುದನ್ನು ತೋರಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.

ಕಾಂಗ್ರೆಸ್ ಪಕ್ಷ ಜೆಡಿಎಸ್ ಶಾಸಕರನ್ನು ಆಪರೇಷನ್ ಮಾಡುತ್ತಿದೆ, ಜೆಡಿಎಸ್ ನಲ್ಲಿ ಗಡಗಡ, ಸಂಕ್ರಾಂತಿ ನಂತರ ಜೆಡಿಎಸ್ ಇರುವುದೇ ಇಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಸಚಿವರೇ.. ಮೊದಲು ನಿಮ್ಮ ಪಕ್ಷದ ಕಥೆ ನೋಡಿಕೊಳ್ಳಿ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸನ್ನು ದೂರ ಇಟ್ಟು ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದೆ. ಇಂಡಿ ಕೂಟವನ್ನು ವಿಸರ್ಜನೆ ಮಾಡಿ ಎಂದು ಓಮರ್ ಅಬ್ದುಲ್ಲಾ ಹೇಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ನಾವು ಏಕಾಂಗಿಯಾಗಿ ಸ್ಥಳಿಯ ಸಂಸ್ಥೆಗಳ ಚುನಾವಣೆ ಎದುರಿಸುತ್ತೇವೆ ಎಂದು ಶಿವಸೇನೆ ಹೇಳುತ್ತಿದೆ. ಅಲ್ಲೆಲ್ಲಾ ಎಲ್ಲಿದೆ ಕಾಂಗ್ರೆಸ್? ನಿಮ್ಮ ಪಕ್ಷದ ಒಳಗೆ ಏನಾಗುತ್ತಿದೆ ಎನ್ನುವುದನ್ನು ಮೊದಲು ನೋಡಿಕೊಳ್ಳಿ. ಪಾಟೀಲರೇ.. ನಿಮ್ಮ ಪಕ್ಷದ ತಟ್ಟೆಯಲ್ಲಿಯೇ ಹೆಗ್ಗಣ ಸತ್ತು ಬಿದ್ದಿದೆ ಎಂದು ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು.

ನಮಗೆ, ನಮ್ಮ ಕುಟುಂಬಕ್ಕೆ ಸೋಲು ಗೆಲುವು ಹೊಸದೇನಲ್ಲ. ಸೋತಾಗ ಕುಗ್ಗಿಲ್ಲ, ಗೆದ್ದಾಗ ಹಿಗ್ಗಿಲ್ಲ ಎಂದ ಅವರು; ನಮ್ಮ ಪಕ್ಷ ಗಟ್ಟಿಯಾಗಿದೆ. ಅದನ್ನು ಸಹಿಸುವುದು ಕಾಂಗ್ರೆಸ್ ಪಕ್ಷಕ್ಕೆ ಆಗುತ್ತಿಲ್ಲ. ಅದಕ್ಕೆ ಇಷ್ಟೆಲ್ಲಾ ನಾಟಕ ಆಡುತ್ತಿದೆ. ಅದರ ಆಟ ನಡೆಯುವುದಿಲ್ಲ ಎಂದು ಸಚಿವರು ಎಚ್ಚರಿಕೆ ಕೊಟ್ಟರು.

ಇದನ್ನೂ ಓದಿ: HD Kumaraswamy: 60% ಕಮಿಷನ್ ಸುಲಿಗೆ ಆರೋಪ ಪುನರುಚ್ಚರಿಸಿದ ಎಚ್.ಡಿ. ಕುಮಾರಸ್ವಾಮಿ; ದಾಖಲೆ ಕೊಡಿ ಎಂದ ಸಿಎಂ ವಿರುದ್ಧ ಕೇಂದ್ರ ಸಚಿವರ ವಾಗ್ದಾಳಿ

Leave a Reply

Your email address will not be published. Required fields are marked *