Tuesday, 7th January 2025

HD Kumaraswamy: 60% ಕಮಿಷನ್ ಸುಲಿಗೆ ಆರೋಪ ಪುನರುಚ್ಚರಿಸಿದ ಎಚ್.ಡಿ. ಕುಮಾರಸ್ವಾಮಿ; ದಾಖಲೆ ಕೊಡಿ ಎಂದ ಸಿಎಂ ವಿರುದ್ಧ ಕೇಂದ್ರ ಸಚಿವರ ವಾಗ್ದಾಳಿ

HD Kumaraswamy

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ (State Congress Government) ಗುತ್ತಿಗೆದಾರರಿಂದ 60% ಕಮಿಷನ್ ಸುಲಿಗೆ ಮಾಡುತ್ತಿದೆ ಎಂದು ಮತ್ತೆ ಆರೋಪ ಮಾಡಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು, ದಾಖಲೆ ಕೊಡಿ ಎಂದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ʼಎಕ್ಸ್ʼ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವರು; 60% ಕಮೀಶನ್, ಆಧಾರವಿಲ್ಲದೆ ಆರೋಪದ ಮಾತೆಲ್ಲಿ ಬಂತು ಮಾನ್ಯ ಮುಖ್ಯಮಂತ್ರಿಗಳೇ? ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಪಕ್ಷದ ಪರವೇ ಇರುವ ಗುತ್ತಿಗೆದಾರರು, ತುಮಕೂರಿನ ನಿಮ್ಮ ಕಾಂಗ್ರೆಸ್ ಪಕ್ಷದ ಮುಖಂಡರೇ ಮಾಡಿರುವ ಆರೋಪವಿದು. ನಮ್ಮ ಪಕ್ಷದ ಸರ್ಕಾರಕ್ಕಿಂತ ಹಿಂದಿನ ಬಿಜೆಪಿ ಸರ್ಕಾರವೇ ವಾಸಿ ಇತ್ತು ಎಂದು ಅವರು ಅಲವತ್ತುಕೊಂಡಿದ್ದರು ನಿಮ್ಮ ಪಕ್ಷದ ಗುತ್ತಿಗೆದಾರರು. ಕಾಂಗ್ರೆಸ್ ಸರ್ಕಾರದಲ್ಲೂ 40% ಕಮಿಷನ್ ಸುಲಿಗೆ ಮಾಡಲಾಗುತ್ತಿದೆ ಎಂಬುದು ಅವರ ನೇರವಾಗಿ ಆರೋಪ ಎಂದು ಸಚಿವರು ಟಾಂಗ್ ನೀಡಿದ್ದಾರೆ.

ನಿಮ್ಮ ರಾಜಕೀಯ ಜೀವನದಲ್ಲಿ ಎಂದಾದರೂ ದಾಖಲೆ ಇಟ್ಟು ಆರೋಪ ಮಾಡಿದ್ದೀರಾ?

ಕಮಿಷನ್ ವ್ಯವಹಾರ ಇಲ್ಲ ಎಂದಾದರೆ, ‘ಯಾಕಪ್ಪಾ ಹಾಗೆ ಹೇಳಿದಿರಿ?’ ಎಂದು ಅವರನ್ನೇ ಕರೆದು ಕೇಳಬೇಕಿತ್ತು. ಕೇಳಲಿಲ್ಲ ಯಾಕೆ? ಪ್ರತಿ ಆರೋಪಕ್ಕೂ ಈಗ ದಾಖಲೆ ಕೇಳುವ ನೀವು, ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಮಾಡಿ, ಪುಟಗಟ್ಟಲೇ ಜಾಹೀರಾತು ಕೊಟ್ಟರಲ್ಲಾ, ಆಗ ಎಷ್ಟು ದಾಖಲೆ ನೀಡಿದ್ದೀರಿ? ನಿಮ್ಮ ರಾಜಕೀಯ ಜೀವನದಲ್ಲಿ ಎಂದಾದರೂ ದಾಖಲೆ ಇಟ್ಟು ಆರೋಪ ಮಾಡಿದ್ದೀರಾ? ಎಂದು ಕೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Job Guide: ರಕ್ಷಣಾ ಸಚಿವಾಲಯದಲ್ಲಿದೆ 113 ಹುದ್ದೆ; 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ

ದಾವಣಗೆರೆ ಗುತ್ತಿಗೆದಾರನೊಬ್ಬ ದಯಾಮರಣ ಕರುಣಿಸಿ ಎಂದು ನಿಮ್ಮ ಘನ ಸನ್ನಿಧಾನಕ್ಕೆ ಹಾಗೂ ಮಾನ್ಯ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅವರಿಗೆ ಬಾಕಿ ಹಣ ಕೊಡಿಸುತ್ತೀರೋ ಅಥವಾ ದಯಾಮರಣ ಕರುಣಿಸುತ್ತೀರೋ? ಕಮಿಷನ್ ದುರಾಸೆ ಬಿಟ್ಟು ಮೊದಲು ಆ ಗುತ್ತಿಗೆದಾರನನ್ನು ರಕ್ಷಿಸಿ ಎಂದು ಒತ್ತಾಯಿಸಿರುವ ಕೇಂದ್ರ ಸಚಿವರು, 60% ಕಮಿಷನ್! ಮುಖ್ಯಮಂತ್ರಿ ಹಿಟ್ ಅಂಡ್ ರನ್!! ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ವಾಗ್ದಾಳಿ ಮಾಡಿದ್ದಾರೆ.

Leave a Reply

Your email address will not be published. Required fields are marked *