ಚಾಮರಾಜನಗರ: ಇತ್ತೀಚೆಗೆ ಸಣ್ಣ ವಯಸ್ಸಿನವರಲ್ಲೂ ಹೃದಯಾಘಾತ ಪ್ರಕರಣಗಳು (Heart Attack) ಹೆಚ್ಚಾಗುತ್ತಿವೆ. ಸಾಮಾನ್ಯವಾಗಿ ತೂಕ ಹೆಚ್ಚಳ, ರಕ್ತದೊತ್ತಡದಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚು ಎಂದು ಹೇಳಲಾಗುತ್ತದೆ. ಆದರೆ, ಇದೀಗ ಚಾಮರಾಜನಗರದಲ್ಲಿ 3ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿರುವುದು ಕಂಡುಬಂದಿದೆ.
ಚಾಮರಾಜನಗರದ ಸೆಂಟ್ ಫ್ರಾನ್ಸಿಸ್ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ ಶಿಕ್ಷಕರಿಗೆ ನೋಟ್ಸ್ ತೋರಿಸಲೆಂದು ತೆರಳುತ್ತಿದ್ದಳು. ಈ ವೇಳೆ ತೇಜಸ್ವಿನಿ ಏಕಾಏಕಿ ಕುಸಿದು ಬಿದ್ದಿದ್ದಾಳೆ. ತಕ್ಷಣ ವಿದ್ಯಾರ್ಥಿನಿಯನ್ನು ಶಿಕ್ಷಕರು ಆಸ್ಪತ್ರೆಗೆ ಕರೆದೊಯ್ದಿದ್ದು, ದುರಾದೃಷ್ಟವಶಾತ್ ಆಸ್ಪತ್ರೆಗೆ ತರುವಷ್ಟರಲ್ಲಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.
ಈ ಸುದ್ದಿಯನ್ನೂ ಓದಿ | Viral News: ಹುಲಿ.. ಸಿಂಹಗಳೇ ತುಂಬಿರುವ ಕಾಡಿನಲ್ಲಿ ಕಳೆದುಹೋದ 8 ವರ್ಷದ ಬಾಲಕ- ಈತ ಬದುಳಿದ ಕಥೆಯೇ ರಣರೋಚಕ!
ಕೌಟುಂಬಿಕ ಕಲಹ; ಇಬ್ಬರು ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆ
ಬೆಂಗಳೂರು: ಇಬ್ಬರು ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೌಟುಂಬಿಕ ಕಲಹವೇ ಈ ಘಟನೆಗೆ (Self Harming) ಕಾರಣ ಎಂದು ತಿಳಿದುಬಂದಿದೆ.
ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪತಿ ಅನೂಪ್ ಕುಮಾರ್, ಪತ್ನಿ ರಾಖಿ, ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. 5 ವರ್ಷದ ಹೆಣ್ಣು ಮಗು, 2 ವರ್ಷದ ಗಂಡು ಮಗುವಿಗೆ ವಿಷವುಣಿಸಿ ನಂತರ ಇಬ್ಬರು ದಂಪತಿಗಳು ನೇಣಿಗೆ ಶರಣಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ.
ವಿಚಾರಣೆಗೆ ಕರೆದ ಎಎಸ್‌ಐ ಮೇಲೆ ನಡುರಸ್ತೆಯಲ್ಲೇ ಹಲ್ಲೆ ನಡೆಸಿದ ಆರೋಪಿ!
ಮಂಡ್ಯ: ವಿಚಾರಣೆಗೆ ಕರೆದ ಎಎಸ್‌ಐ ಮೇಲೆ ಆರೋಪಿಯೊಬ್ಬ ನಡುರಸ್ತೆಯಲ್ಲೇ ಹಲ್ಲೆಗೆ ಯತ್ನಿಸಿ ರಂಪಾಟ ನಡೆಸಿದ ಘಟನೆ (Mandya News) ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ. ನಾಗಮಂಗಲ ಗ್ರಾಮಾಂತರ ಎಎಸ್‌ಐ ರಾಜು ಮೇಲೆ ಮಜ್ಜನಕೊಪ್ಪಲು ಪೂಜಾರಿ ಕೃಷ್ಣ ಹಲ್ಲೆಗೆ ಯತ್ನಿಸಿ ದರ್ಪ ತೋರಿದ್ದು, ಆತನನ್ನು ಬಂಧಿಸಲಾಗಿದೆ.
ಆರೋಪಿ ಕೃಷ್ಣನ ವಿರುದ್ಧ ಆತನ ತಾಯಿ ಠಾಣೆಗೆ ದೂರು ನೀಡಿದ್ದರು. ಹಣಕ್ಕೆ ಬೇಡಿಕೆ ಇಟ್ಟು ನಿತ್ಯ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ಸಲ್ಲಿಸಲಾಗಿತ್ತು. ದೂರಿನ ಹಿನ್ನೆಲೆ ಕೃಷ್ಣನನ್ನು ಠಾಣೆಗೆ ಕರೆತರಲು ಎಎಸ್‌ಐ ರಾಜು ತೆರಳಿದ್ದರು. ನಾಗಮಂಗಲದ ಕೋರ್ಟ್ ಬಳಿ ನಿಂತಿದ್ದ ಕೃಷ್ಣನನ್ನು ಎಎಸ್‌ಐ ರಾಜು ಠಾಣೆಗೆ ಕರೆದಿದ್ದರು.
ಠಾಣೆಗೆ ಬರಲು ಒಪ್ಪದಿದ್ದಾಗ ಕೃಷ್ಣನ ಕಾಲರ್ ಹಿಡಿದು ಬಲವಂತವಾಗಿ ಆಟೋಗೆ ಹತ್ತಿಸಲು ಎಎಸ್‌ಐ ಯತ್ನಿಸಿದ್ದಾರೆ. ಈ ವೇಳೆ ಎಎಸ್‌ಐ ರಾಜುವನ್ನು ಕೃಷ್ಣ ತಳ್ಳಿದ್ದಾನೆ. ತಳ್ಳಾಡಿದಾಗ ರಾಜು ಕೆಳಗೆ ಬಿದ್ದಿದ್ದಾರೆ. ಬಳಿಕ ಕೃಷ್ಣನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಎಲ್ಲಾ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಈ ಸುದ್ದಿಯನ್ನೂ ಓದಿ | HMPV case in Bengaluru: ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಎಚ್‌ಎಂಪಿವಿ ಸೋಂಕು ಪತ್ತೆ; ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ