ಬೆಂಗಳೂರು: ರಾಜ್ಯದಲ್ಲಿ ಎರಡು ಎಚ್ಎಂಪಿವಿ ಸೋಂಕು ಪ್ರಕರಣಗಳು (HMPV case in Bengaluru) ಪತ್ತೆಯಾದ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಸರ್ಕಾರ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚೀನಾ ದೇಶದಲ್ಲಿ ಎಚ್ಎಂಪಿವಿ ವೈರಸ್ ಕಾಣಿಸಿಕೊಂಡಿದ್ದು, ಕರ್ನಾಟಕದಲ್ಲಿ ಈ ವೈರಸ್ ಪತ್ತೆಯಾಗಿರುವ ಮಾಹಿತಿ ದೊರೆತಿದೆ. ಆದ್ದರಿಂದ ಈ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಆರೋಗ್ಯ ಸಚಿವರು ಈಗಾಗಲೇ ಸಭೆ ನಡೆಸುತ್ತಿದ್ದು, ವೈರಸ್ ತಡೆಗೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದರು.
ಸೋಂಕು ತಡೆ ಕ್ರಮವಾಗಿ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಪುನಃ ಪ್ರಾರಂಭಿಸುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಆರೋಗ್ಯ ಸಚಿವರು ಸಭೆ ನಡೆಸುತ್ತಿದ್ದು, ರಾಜ್ಯದಲ್ಲಿ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದರು.
ನಕ್ಸಲರು ಶರಣಾಗುವ ಸಾಧ್ಯತೆಯಿದೆ
ನಕ್ಸಲರ ಶರಣಾಗತಿಗೆ ಸರ್ಕಾರ ಸಿದ್ಧವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನಕ್ಸಲರು ಶರಣಾಗಲಿ ಎಂದು ಕರೆ ನೀಡಿದ್ದೇನೆ ಹಾಗೂ ನಕ್ಸಲರ ಮನಃಪರಿವರ್ತನೆಯಾಗಿ ಶರಣಾಗುವ ಸಾಧ್ಯತೆಯಿದೆ. ಸಮಾಜದ ಮುಖ್ಯವಾಹಿನಿಗೆ ಅವರನ್ನು ಕರೆತರುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ಕಮಿಷನ್ ಪ್ರಮಾಣ ಶೇ. 60 ಕ್ಕೆ ತಲುಪಿದೆ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹಿಂದಿನ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಕಮಿಷನ್ ಆರೋಪವನ್ನು ಗುತ್ತಿಗೆದಾರ ಸಂಘದ ಅಧ್ಯಕ್ಷರು ಕೆಂಪಯ್ಯನವರು ಮಾಡಿದ್ದರು. ಬಿಜೆಪಿಯವರು ಕಮಿಷನ್ ತೆಗೆದುಕೊಂಡಿರುವುದಾಗಿ ಕೆಂಪಯ್ಯನವರು ಆರೋಪಿಸಿದ್ದಾಗಿ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Stock Market: ಬೆಂಗಳೂರಿನಲ್ಲಿ ಚೀನಾ ವೈರಸ್- ಸೆನ್ಸೆಕ್ಸ್ 1,200 ಅಂಕ ಕುಸಿತ; ಪಿಎಸ್ಯು ಬ್ಯಾಂಕ್, ರಿಯಾಲ್ಟಿ, ತೈಲ ಷೇರು ಭಾರಿ ಪತನ
ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಎಚ್ಎಂಪಿವಿ ಸೋಂಕು ಪತ್ತೆ; ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ
ಬೆಂಗಳೂರು: ಚೀನಾದಲ್ಲಿ ಹರಡುತ್ತಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ (HMPV virus) ಸೋಂಕು ಭಾರತಕ್ಕೂ ಕಾಲಿಟ್ಟಿದೆ. ಕೋವಿಡ್ ಮಾದರಿಯಲ್ಲೇ ಹರಡುವ ಎಚ್ಎಂಪಿವಿ ಸೋಂಕು ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಪತ್ತೆಯಾಗಿದೆ. ನಗರದ ಇಬ್ಬರು ಮಕ್ಕಳಲ್ಲಿ ಶಂಕಿತ ಎಚ್ಎಂಪಿವಿ ವೈರಸ್ ಸೋಂಕು (HMPV case in Bengaluru) ಕಂಡುಬಂದಿದ್ದು, ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ದೃಢಪಡಿಸಿದೆ.
3 ತಿಂಗಳ ಶಿಶುವಿನಲ್ಲಿ ರೋಗಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಳಿಕ HMPV ವೈರಸ್ ಕಂಡುಬಂದಿದೆ. ಚಿಕಿತ್ಸೆ ನಂತರ ಮಗುವನ್ನು ಡಿಶ್ಚಾರ್ಜ್ ಮಾಡಲಾಗಿದೆ.
ಇನ್ನೊಂದೆಡೆ 8 ತಿಂಗಳ ಗಂಡು ಮಗುವಿನಲ್ಲಿ ಜ್ವರ ಹಾಗೂ ಉಸಿರಾಟದ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಹೆಬ್ಬಾಳ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಜನವರಿ 2 ರಂದು ದಾಖಲಿಸಲಾಗಿತ್ತು. ಈ ಮಗುವಿನಲ್ಲೂ ವೈರಸ್ ಸೋಂಕು ಪತ್ತೆಯಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಹಲವು ವೈರಸ್ಗಳಿದ್ದು, ಎಚ್ ಎಪಿವಿ ವೈರಸ್ ಎಷ್ಟರ ಮಟ್ಟಿಗಿದೆ ಎಂದು ಪರೀಕ್ಷೆ ಮಾಡಲಾಗುತ್ತಿದೆ. ಇದು ದೃಢಪಟ್ಟರೆ ಅದಕ್ಕೆ ಬೇಕಾದ ಆರೋಗ್ಯ ಕ್ರಮಗಳು, ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು , ಹಾಗೂ ಹೆಚ್ಚು ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಸೋಂಕು ತಡೆಗೆ ಮಾರ್ಗಸೂಚಿ ಪ್ರಕಟ
ಕೋವಿಡ್ ಮಾದರಿಯಲ್ಲೇ ಹರಡುವ ಎಚ್ಎಂಪಿವಿ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಎಚ್ಎಂಪಿವಿ ಹಾವಳಿ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯ ಸರಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಏನು ಮಾಡಬೇಕು?
- ನೀವು ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟಿಶ್ಯೂ ಪೇಪರ್ನಿಂದ ಮುಚ್ಚಿಕೊಳ್ಳಿ.
- ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರು ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್ನಿಂದ ತೊಳೆಯಿರಿ.
- ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದು ತಪ್ಪಿಸಿ
- ನಿಮಗೆ ಜ್ವರ, ಕೆಮ್ಮು ಮತ್ತು ಸೀನುವಿಕೆ ಇದ್ದಲ್ಲಿ ಸಾರ್ವಜನಿಕ ಸ್ಥಳಗಳಿಂದ ದೂರವಿರಿ.
- ಮನೆಯಲ್ಲಿಯೇ ಇರಿ ಮತ್ತು ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಇತರರೊಂದಿಗೆ ಸಂಪರ್ಕವನ್ನು ಮಿತಿಗೊಳಿಸಿ
- ಸಾಕಷ್ಟು ನೀರು ಕುಡಿಯಿರಿ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ
ಏನು ಮಾಡಬಾರದು?
- ಟಿಶ್ಯೂ ಪೇಪರ್ ಮತ್ತು ಕೈ ಕರ್ಚೀಫ್ ಮರುಬಳಕೆ
- ಸೋಂಕಿನ ಲಕ್ಷಣ ಇರುವ ಜನರೊಂದಿಗೆ ನಿಕಟ ಸಂಪರ್ಕ, ಟವೆಲ್, ಬಟ್ಟೆ ಇತ್ಯಾದಿಗಳನ್ನು ಹಂಚಿಕೊಳ್ಳುವುದು.
- ಕಣ್ಣು, ಮೂಗು ಮತ್ತು ಬಾಯಿಯನ್ನು ಆಗಾಗ್ಗೆ ಸ್ಪರ್ಶಿಸುವುದು
- ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು
- ವೈದ್ಯರನ್ನು ಸಂಪರ್ಕಿಸದೆ ಔಷಧಿ ತೆಗೆದುಕೊಳ್ಳುವುದು