ಶಿವಮೊಗ್ಗ: ಬೆಂಗಳೂರಿನಲ್ಲಿ ಇಬ್ಬರು ಮಕ್ಕಳಲ್ಲಿ ಎಚ್ಎಂಪಿವಿ ಸೋಂಕು ಪತ್ತೆಯಾದ ಬೆನ್ನಲ್ಲೇ ಶಿವಮೊಗ್ಗದಲ್ಲೂ ಐವರು ಮಕ್ಕಳಲ್ಲಿ ಸೋಂಕು ದೃಢಪಟ್ಟಿರುವುದು ತಿಳಿದುಬಂದಿದೆ. ಖಾಸಗಿ ಮಕ್ಕಳ ಆಸ್ಪತ್ರೆಯಲ್ಲಿ ಐವರು ಮಕ್ಕಳಲ್ಲಿ ಎಚ್ಎಂಪಿವಿ ಸೋಂಕು (HMPV Cases) ಕಂಡುಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಶಿವಮೊಗ್ಗದ ಸರ್ಜಿ ಮಕ್ಕಳ ಆಸ್ಪತ್ರೆಯಲ್ಲಿ ಎಚ್ಎಂಪಿ ವೈರಸ್ ಸೋಂಕು ದೃಢಪಟ್ಟ ಬಗ್ಗೆ ವೈದ್ಯ ಧನಂಜಯ್ ಸರ್ಜಿ ಮಾಹಿತಿ ನೀಡಿದ್ದಾರೆ. ಆರು ತಿಂಗಳಿನಿಂದ ಎರಡು ವರ್ಷದೊಳಗಿನ ಮೂವರು ಮಕ್ಕಳಲ್ಲಿ ಸೋಂಕು ದೃಢಪಟ್ಟಿತ್ತು. ಮಕ್ಕಳಲ್ಲಿ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಕೊರೊನಾ ಶಂಕೆ ಹಿನ್ನೆಲೆ ಸ್ವಾಬ್ ತೆಗೆದು ಟೆಸ್ಟ್ ಮಾಡಿಸಲಾಗಿತ್ತು. ನಂತರ ಲ್ಯಾಬ್ ವರದಿಯಲ್ಲಿ ಹ್ಯೂಮನ್ ಮೆಟಾನ್ಯುಮೊವೈರಸ್ ಎನ್ನುವುದು ದೃಢಪಟ್ಟಿತ್ತು. ಉಸಿರಾಟದ ಸೋಂಕಿನ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಿ ಮಕ್ಕಳಿಗೆ ಗುಣಪಡಿಸಲಾಗಿದೆ ಎಂದು ಡಾ. ಧನಂಜಯ್ ಸರ್ಜಿ ಮಾಹಿತಿ ನೀಡಿದ್ದಾರೆ. ಅಕ್ಟೋಬರ್ ನವೆಂಬರ್ ತಿಂಗಳಿನಿಂದಲೇ ಈ ಸೋಂಕು ಆರಂಭವಾಗಿದೆ. 2 ವರ್ಷ, 11 ತಿಂಗಳು, 4 ವರ್ಷ , 1 ವರ್ಷ ಹಾಗೂ 6 ತಿಂಗಳಿನ ಮಗು ಸೇರಿ ಒಟ್ಟು ಐದು ಮಕ್ಕಳಲ್ಲಿ ಎಚ್ಎಂಪಿ ವೈರಸ್ ಪತ್ತೆಯಾಗಿದ್ದು ಎಲ್ಲರೂ ಗುಣಮುಖರಾಗಿದ್ದಾರೆ ಎಂದಿದ್ದಾರೆ.
ಎಚ್‌ಎಂಪಿವಿ ವೈರಸ್ ಆತಂಕ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ಕರ್ನಾಟಕ ಆರೋಗ್ಯ ಇಲಾಖೆಗಳು ಈಗಾಗಲೇ ಮಾರ್ಗಸೂಚಿ ಪ್ರಕಟಿಸಿವೆ. ಜನಸಂದಣಿ ಪ್ರದೇಶಗಳಿಂದ ದೂರವಿರಿ, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲು, ಕೈಗಳನ್ನು ಸೋಪಿನಿಂದ ಅಥವಾ ಸ್ಯಾನಿಟೈಸರ್‌ನಿಂದ ತೊಳೆಯಲು ಸೂಚಿಸಲಾಗಿದೆ. ಕೆಮ್ಮುವಾಗ ಮೂಗು, ಬಾಯಿ ಮುಚ್ಚಿಕೊಳ್ಳಬೇಕು, ಯಾವುದೇ ರೋಗಲಕ್ಷಣಗಳು ಕಂಡು ಬಂದರೆ ತಕ್ಷಣವೇ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲು ಸೂಚಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | HMP Virus : ನಾಗ್ಪುರದಲ್ಲೂ HMP ವೈರಸ್ ಪತ್ತೆ; ಒಟ್ಟು ಸೋಂಕಿತರ ಸಂಖ್ಯೆ 7ಕ್ಕೇರಿಕೆ
ಸೋಂಕು ತಡೆಗೆ ಮಾರ್ಗಸೂಚಿ ಪ್ರಕಟ
ಕೋವಿಡ್ ಮಾದರಿಯಲ್ಲೇ ಹರಡುವ ಎಚ್‌ಎಂಪಿವಿ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.
ಏನು ಮಾಡಬೇಕು?
- ನೀವು ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟಿಶ್ಯೂ ಪೇಪರ್‌ನಿಂದ ಮುಚ್ಚಿಕೊಳ್ಳಿ.
- ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರು ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್‌ನಿಂದ ತೊಳೆಯಿರಿ.
- ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದು ತಪ್ಪಿಸಿ
- ನಿಮಗೆ ಜ್ವರ, ಕೆಮ್ಮು ಮತ್ತು ಸೀನುವಿಕೆ ಇದ್ದಲ್ಲಿ ಸಾರ್ವಜನಿಕ ಸ್ಥಳಗಳಿಂದ ದೂರವಿರಿ.
- ಮನೆಯಲ್ಲಿಯೇ ಇರಿ ಮತ್ತು ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಇತರರೊಂದಿಗೆ ಸಂಪರ್ಕವನ್ನು ಮಿತಿಗೊಳಿಸಿ
- ಸಾಕಷ್ಟು ನೀರು ಕುಡಿಯಿರಿ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ
ಏನು ಮಾಡಬಾರದು?
- ಟಿಶ್ಯೂ ಪೇಪರ್ ಮತ್ತು ಕೈ ಕರ್ಚೀಫ್ ಮರುಬಳಕೆ ಮಾಡಬಾರದು.
- ಸೋಂಕಿನ ಲಕ್ಷಣ ಇರುವ ಜನರೊಂದಿಗೆ ನಿಕಟ ಸಂಪರ್ಕ, ಟವೆಲ್, ಬಟ್ಟೆ ಇತ್ಯಾದಿಗಳನ್ನು ಹಂಚಿಕೊಳ್ಳಬಾರದು.
- ಕಣ್ಣು, ಮೂಗು ಮತ್ತು ಬಾಯಿಯನ್ನು ಆಗಾಗ್ಗೆ ಸ್ಪರ್ಶಿಸಬಾರದು
- ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು.
- ವೈದ್ಯರನ್ನು ಸಂಪರ್ಕಿಸದೆ ಔಷಧಿ ತೆಗೆದುಕೊಳ್ಳಬಾರದು