ಹೊಸದಿಲ್ಲಿ: ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಎಚ್‌ಎಂಪಿವಿ ವೈರಸ್ (HMPV Virus) ಇದೀಗ ನಿಧಾನವಾಗಿ ದೇಶಾದ್ಯಂತ ಹರಡುತ್ತಿದೆ. ಬೆಂಗಳೂರಿನಲ್ಲಿ 2 ಪ್ರಕರಣ ಪತ್ತೆಯಾದ ಬೆನ್ನಿಗೆ ವೈರಸ್ ಗುಜರಾತ್‌ನಲ್ಲಿಯೂ ಕಾಣಿಸಿಕೊಂಡಿತ್ತು. ಇದೀಗ ಚೆನ್ನೈಯಲ್ಲಿ 2 ಮತ್ತು ಕೋಲ್ಕತಾದಲ್ಲಿ 1 ಕೇಸ್ ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 6ಕ್ಕೆ ಏರಿದೆ.
ಚೆನ್ನೈಯಲ್ಲಿ ಇಬ್ಬರು ಮಕ್ಕಳಲ್ಲಿ ಎಚ್‌ಎಂಪಿವಿ ವೈರಸ್ ಕಂಡು ಬಂದಿದ್ದು, ಇವರು ಸೋಂಕಿನ ಸಾಮಾನ್ಯ ಲಕ್ಷಣಗಳಾದ ಜ್ವರ, ನೆಗಡಿ ಮತ್ತು ಕಫದಿಂದ ಬಳಲುತ್ತಿದ್ದಾರೆ. ಈ ಮಕ್ಕಳ ಆರೋಗ್ಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಎಚ್ಚೆತ್ತುಕೊಂಡಿರುವ ರಾಜ್ಯ ಆರೋಗ್ಯ ಇಲಾಖೆ ಸೋಂಕು ಹರಡಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಚೆನ್ನೈಯ ಚೆಟ್‌ಪೇಟೆಯ ಖಾಸಗಿ ಆಸ್ಪತೆಯಲ್ಲಿ ತಮಿಳುನಾಡಿನ ಮೊದಲ ಪ್ರಕರಣ ಕಂಡು ಬಂದಿದೆ. ಜ್ವರ, ನೆಗಡಿ ಮತ್ತು ಕಫದಿಂದ ಬಳಲುತ್ತಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಪರೀಕ್ಷೆ ನಡೆಸಿದಾಗ ಎಚ್‌ಎಂಪಿವಿ ವೈರಸ್ ತಗುಲಿರುವುದು ದೃಢಪಟ್ಟಿದೆ.
ಇನ್ನೊಂದು ಪ್ರಕರಣ ಚೆನ್ನೈಯ 27 ಕಿ.ಮೀ. ದೂರದ ಗಿಂಡಿಯಲ್ಲಿ ಪತ್ತೆಯಾಗಿದೆ. ಇದೇ ರೋಗ ಲಕ್ಷಣದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಮಗುವಿನಲ್ಲಿ ಸೋಂಕು ಪತ್ತೆಯಾಗಿದೆ. ಇಬ್ಬರೂ ಮಕ್ಕಳಲ್ಲಿ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡು ಬರುವ ನೆಗಡಿ, ಜ್ವರದ ಲಕ್ಷಣ ಕಾಣಿಸಿಕೊಂಡಿದೆ.
ಇನ್ನು ಕೋಲ್ಕತಾದ 5 ತಿಂಗಳ ಮಗುವಿನಲ್ಲಿ ಎಚ್‌ಎಂಪಿವಿ ವೈರಸ್ ದೃಢವಾಗಿದೆ. ಈ ಮಗು ತನ್ನ ಹೆತ್ತವರೊಂದಿಗೆ ಮುಂಬೈಯಿಂದ ಕೋಲ್ಕತಾಗೆ ಪ್ರಯಾಣ ಬೆಳೆಸಿದ ಬಳಿಕ ಸೋಂಕು ಪತ್ತೆಯಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದ ಮಗು ಗುಣಮುಖವಾಗಿ ಇದೀಗ ಡಿಸ್‌ಚಾರ್ಚ್ ಆಗಿದೆ. ʼʼಸೋಂಕಿನ ಲಕ್ಷಣ ಹೊಂದಿರುವ ಎಲ್ಲ ಮಕ್ಕಳು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ ನಿರಂತರವಾಗಿ ನಿಗಾ ವಹಿಸುತ್ತಿದ್ದಾರೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹೊಸ ಕಾಯಿಲೆಯ ರೋಗ ಲಕ್ಷಣಗಳೇನು?
ಎಚ್ಎಂಪಿವಿ ವೈರಸ್‌ನ ರೋಗ ಲಕ್ಷಣಗಳು ಹೀಗಿವೆ- ಉಬ್ಬಸ, ಮೂಗು ಕಟ್ಟಿಕೊಳ್ಳುವುದು, ಕೆಮ್ಮು, ಜ್ವರ, ಉಸಿರಾಟದ ತೊಂದರೆ ಎದುರಾಗಬಹುದು ಮತ್ತು ಇದು ಗಂಭೀರವಾದರೆ ನ್ಯೂಮೋನಿಯಾಗೆ ತಿರುಗುವ ಸಾಧ್ಯತೆಯಿದೆ. ಅಸ್ತಮಾ ಮುಂತಾದ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುವವರಿಗೆ ಹೆಚ್ಚಿನ ಸಮಸ್ಯೆ ಆಗಬಹುದು. ರೋಗಕ್ಕೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ದೊರೆಯದೇ ಹೋದರೆ ಪ್ರಾಣಕ್ಕೂ ಎರವಾಗಬಹುದು. ಇದರ ತೀವ್ರತೆಯ ಆಧಾರದ ಮೇಲೆ ಇದು ಎಷ್ಟು ದಿನದ ವರೆಗೆ ಇರುತ್ತೆ ಎನ್ನುವುದು ನಿರ್ಧಾರವಾಗುತ್ತದೆ.
2020ರಲ್ಲಿ ಜಗತ್ತನ್ನೇ ನಡುಗಿಸಿದ್ದ ಕೊರೊನಾ ವೈರಸ್ ಮಾದರಿಯ ಲಕ್ಷಣಗಳನ್ನೇ ಈ ವೈರಸ್ ಕೂಡ ಹೊಂದಿದ್ದು, ಪ್ರಮುಖವಾಗಿ ಮಕ್ಕಳಿಗೆ ಮತ್ತು ರೋಗ ನಿರೋಧಕ ಶಕ್ತಿ ಕಮ್ಮಿ ಇರುವವರಿಗೆ ವೇಗವಾಗಿ ಹರಡುತ್ತದೆ. ಕೋವಿಡ್ ವೈರಸ್ ರೀತಿಯಲ್ಲೇ ಇದು ಕೂಡ ಶ್ವಾಸಕೋಶಕ್ಕೆ ಸಂಬಂಧಿಸಿ ಸಮಸ್ಯೆ ಉಂಟುಮಾಡುತ್ತೆ. ವಿಶೇಷವಾಗಿ ಮಕ್ಕಳಿಗೆ ಅದರಲ್ಲೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ವೈರಸ್ ಬೇಗ ಹರಡುವ ಸಾಧ್ಯತೆ ಇದೆ. ವಯಸ್ಕರು ಮತ್ತು ರೋಗ ನಿರೋಧಕ ಶಕ್ತಿ ಕಮ್ಮಿ ಇರುವವರಿಗೆ ಇದು ವೇಗವಾಗಿ ಹರಡಬಹುದು.
ಈ ಸುದ್ದಿಯನ್ನೂ ಓದಿ: HMPV ವೈರಾಣು ಸೋಂಕು; ಭಾರತದಲ್ಲಿ ಆತಂಕ ಬೇಡ; ಆರೋಗ್ಯ ಸಂಸ್ಥೆ