Saturday, 14th December 2024

Honey Trap: ಜೈಲು ಕೈದಿಗಳಿಂದ ಕೈದಿಗಳಿಗೇ ಹನಿ ಟ್ರ್ಯಾಪ್, ಬ್ಲ್ಯಾಕ್‌ಮೇಲ್!‌

honey trap

ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿನ (Kalaburagi news, kalaburagi Jail) ಇಬ್ಬರು ಕೈದಿಗಳು, ಇತರ ಕೈದಿಗಳನ್ನು ಹನಿಟ್ರ್ಯಾಪ್‌ನಲ್ಲಿ (Honey Trap) ಕೆಡವಿ, ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ (Blackmail) ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಜೈಲಿನಿಂದಲೇ ವಿಡಿಯೊ ಕಾಲ್‌ (Video Call) ಮಾಡಿಸಿ ಹನಿಟ್ರ್ಯಾಪ್‌ ಮಾಡುತ್ತಿರುವುದು ಗೊತ್ತಾಗಿದೆ.

ಹೀಗಾಗಿ, ಜೈಲು ಸಿಬ್ಬಂದಿಯ ಕೈವಾಡವೂ ಇದರಲ್ಲಿದೆ ಎಂದು ಆರೋಪಿಸಲಾಗಿದೆ. ಜೈಲು ಸಿಬ್ಬಂದಿಯನ್ನೂ ಇವರು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ಭಯೋತ್ಪಾದನೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಗಳಾಗಿರುವ ಜುಲ್ಫಿಕರ್ ಹಾಗೂ ಶಿವಮೊಗ್ಗದ ರೌಡಿ ಶೀಟರ್ ಬಚ್ಚನ್ ಮೇಲೆ ಈ ಬೆದರಿಕೆ ಆರೋಪ ಬಂದಿದೆ.

ಕೈದಿಗಳನ್ನು ಹನಿಟ್ರ್ಯಾಪ್‌ ಮಾಡುವುದಲ್ಲದೆ, ಕೈದಿಗಳಿಂದ ಲಂಚ ತೆಗೆದುಕೊಂಡ ಕೆಲವು ಜೈಲು ಸಿಬ್ಬಂದಿಯ ದೃಶ್ಯಗಳನ್ನೂ ವಿಡಿಯೊ ಮಾಡಿಕೊಂಡು ಅವರಿಗೂ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತ ಜೈಲಿನ ಕೈದಿಯೊಬ್ಬನ ಫೋನ್‌ ಕರೆಯ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಕೊಲೆ ಪ್ರಕರಣದ ಸಜಾ ಕೈದಿ ಸಾಗರ ಶಿವಪ್ಪ ತನ್ನ ಸ್ನೇಹಿತ ಅಯ್ಯಪ್ಪನ ಜತೆಗೆ ಪೋನ್‌ನಲ್ಲಿ ಮಾತನಾಡಿದ 4.50 ನಿಮಿಷಗಳ ಆಡಿಯೊದಿಂದ ಈ ವಿಷಯ ತಿಳಿದುಬಂದಿದೆ. ʼ‘ಬಚ್ಚನ್ ಮತ್ತು ಜುಲ್ಫಿಕರ್ ಬಳಿ ನಾಲ್ಕೈ ದು ಮೊಬೈಲ್‌ಗಳಿವೆ. ಮೊನ್ನೆ ನನ್ನನ್ನು ಅವರ ಸೆಲ್‌ಗೆ ಕರೆಸಿಕೊಂಡು, ಆಂಟಿ ಜತೆಗೆ ವಿಡಿಯೊ ಕಾಲ್‌ನಲ್ಲಿ ಮಾತಾಡುವಂತೆ ಮೊಬೈಲ್ ಕೊಟ್ಟರು. ಇಬ್ಬರನ್ನೂ ಬೆತ್ತಲೆ ಮಾಡಿಸಿದ್ದರು. ನನ್ನ ಗಮನಕ್ಕೆ ಬಾರದಂತೆ ಮೊಬೈಲ್ ಸ್ಕ್ರೀನ್ ರೆಕಾರ್ಡಿಂಗ್ ಸಹ ಮಾಡಿಕೊಂಡಿಡಿದ್ದರು. ಈಗ ಅಶ್ಲೀಲ ವಿಡಿಯೊ ಮುಂದಿಟ್ಟುಕೊಂಡು ₹ 50 ಸಾವಿರಕ್ಕೆ ಡಿಮ್ಯಾಂಡ್‌ ಮಾಡಿದ್ದಾರೆ. ವಿಡಿಯೊಕಾಲ್ ಪ್ರಕರಣದಲ್ಲಿ ನಾನು ಕೊಟ್ಟ ಹೇಳಿಕೆಯನ್ನೂ ಹಿಂಪಡೆಯಬೇಕು. ಇಲ್ಲದಿದ್ದರೆ ಅಶ್ಲೀಲ ವಿಡಿಯೊವನ್ನು ಹೈಕೋರ್ಟ್‌, ಮಾಧ್ಯಮದವರಿಗೆ ಕೊಡುವ ಬೆದರಿಕೆ ಹಾಕುತ್ತಿದ್ದಾರೆ” ಎಂದು ವಿಡಿಯೋದಲ್ಲಿ ಶಿವಪ್ಪ ಹೇಳಿದ್ದಾನೆ.

ʼ’ಜೈಲಿನ 60-70 ಸಿಬ್ಬಂದಿ ಕೈದಿಗಳಿಂದ ಹಣ ಪಡೆದಿರುವ ದೃಶ್ಯಗಳ ವಿಡಿಯೊ ಮಾಡಿಕೊಂಡಿದ್ದಾರೆ. ತಮ್ಮ ಕೃತ್ಯಕ್ಕೆ ಅಡ್ಡಿಪಡಿಸಿದರೆ ಆ ವಿಡಿಯೊಗಳನ್ನು ಹರಿಬಿಡುವುದಾಗಿ ಅವರಿಗೂ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಸಿಬ್ಬಂದಿ ಸಹ ಅವರಿಗೆ ಸಾಥ್ ಕೊಡುತ್ತಿದ್ದಾರೆ. ಜುಲ್ಫಿಕರ್‌ಗೆ ಪಾಕಿಸ್ತಾನದ ಉಗ್ರರ ಜತೆಗೆ ನಂಟಿದ್ದು, ಮುಸ್ಲಿಂ ಆಗುವಂತೆ ಜೈಲಿನಲ್ಲಿ ಇದ್ದವರಿಗೆ ಪ್ರಚೋದಿಸುತ್ತಾನೆ. ಸಕಲ ರೀತಿಯ ಸೌಕರ್ಯ ಪಡೆದಿದ್ದಾನೆ’ ಎಂದು ಶಿವಪ್ಪ ಫೋನ್ ಸಂಭಾಷಣೆಯಲ್ಲಿ ಆರೋಪಿಸಿದ್ದಾನೆ.

ಪೋನ್ ಕಾಲ್ ಸಂಭಾಷಣೆಯ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ ಎಂದು ಕಾರಾಗೃಹದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Honey Trap: ಷಡಕ್ಷರಿ ಮಠದ ಸ್ವಾಮೀಜಿಗೆ ಹನಿಟ್ರ್ಯಾಪ್‌, ಮೂವರು ಆರೋಪಿಗಳ ಸೆರೆ