ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ (Hubballi news) ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು (Gas Cylinder Blast) ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದ ಬೆನ್ನಲ್ಲೇ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಹುಬ್ಬಳ್ಳಿಯ ಸಾಯಿ ನಗರದ ಈಶ್ವರ ದೇವಾಲಯದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಅಯ್ಯಪ್ಪ ಮಾಲಾಧಾರಿಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿತ್ತು. ಘಟನೆಯಲ್ಲಿ 9 ಮಂದಿ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. ಈ ಪೈಕಿ ನಿಜಲಿಂಗಪ್ಪ ಬೇಪುರಿ (58) ಹಾಗೂ ಸಂಜಯ್ ಸವದತ್ತಿ (18) ಚಿಕಿತ್ಸೆ ಫಲಿಸದೇ ನಿನ್ನೆ ಸಾವನ್ನಪ್ಪಿದ್ದರು. ಇದೀಗ ರಾಜು ಕೃಷ್ಣ ಮುಗೇರಿ ಎಂಬಾತ ಮೃತಪಟ್ಟಿದ್ದಾರೆ. ಈತ ವಿದ್ಯಾನಗರ ಕಟ್ಟಿಮನಿ ಸ್ಕೂಲ್‌ನ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಈಶ್ವರ ದೇವಸ್ಥಾನದಲ್ಲಿ ರಾತ್ರಿ ಮಲಗಿದ್ದಾಗ ಗ್ಯಾಸ್ ಸೋರಿಕೆಯಾಗಿ ದೀಪದ ಬೆಂಕಿ ತಗುಲಿ ಸಿಲಿಂಡರ್ ಸ್ಪೋಟಗೊಂಡಿತ್ತು. ಗಾಯಾಳು ಅಯ್ಯಪ್ಪ ಭಕ್ತರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೂವರು ಸಾವನ್ನಪ್ಪಿದ್ದಾರೆ.
ಪರಿಹಾರ ಘೋಷಣೆ
ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ನಿನ್ನೆ ಇಬ್ಬರು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದರು. ಮೃತ ನಿಜಲಿಂಗಪ್ಪ ಹಾಗೂ ಸಂಜಯ್ ಕುಟುಂಬದವರು ಇದನ್ನು ಪಡೆಯಲಿದ್ದಾರೆ. ಬೆಂಗಳೂರು ಮತ್ತಿತರ ಕಡೆಗಳಿಂದ ಉನ್ನತ ಚಿಕಿತ್ಸೆಗಾಗಿ ತಜ್ಞ ವೈದ್ಯರನ್ನು ಕರೆಸಲಾಗಿದ್ದು, ಉಳಿದ ಏಳು ಮಂದಿಗೆ ಚಿಕಿತ್ಸೆ ಮುಂದುವರಿಸಿದ್ದರು. ಇನ್ನುಳಿದ ಆರು ಮಂದಿಗೆ ಚಿಕಿತ್ಸೆ ಮುಂದುವರಿದಿದೆ.
ಇದನ್ನೂ ಓದಿ: Cylinder Blast: ಸಿಲಿಂಡರ್ ಸ್ಫೋಟದಲ್ಲಿ ಮೃತಪಟ್ಟ ಅಯ್ಯಪ್ಪ ಮಾಲಾಧಾರಿಗಳಿಗೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ