Wednesday, 1st January 2025

ಡಿಸಿಎಂ ಆಗಿ ಬಂದಿಲ್ಲ, ಕಿರ್ಮಾನಿ ಅಭಿಮಾನಿಯಾಗಿ ಬಂದಿದ್ದೇನೆ; ಡಿ.ಕೆ. ಶಿವಕುಮಾರ್

ಬೆಂಗಳೂರು: ಭಾರತ ದಿಗ್ಗಜ ವಿಕೆಟ್‌ಕೀಪರ್–ಬ್ಯಾಟರ್ ಸೈಯದ್ ಕಿರ್ಮಾನಿ(Syed Kirmani’s autobiography) ಅವರ ಆತ್ಮಚರಿತ್ರೆಯಾದ ‘ಸ್ಟಂಪ್ಡ್‌ –ಲೈಫ್ ಬಿಹ್ಯಾಂಡ್ ಅ್ಯಂಡ್ ಬಿಯಾಂಡ್ ದ 22 ಯಾರ್ಡ್ಸ್‌’ ಪುಸ್ತಕ ಇಂದು ಲೋಕಾರ್ಪಣೆಗೊಂಡಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನಾನು ಡಿಸಿಎಂ ಆಗಿ ಬಂದಿಲ್ಲ, ಕಿರ್ಮಾನಿ ಅವರ ಅಭಿಮಾನಿಯಾಗಿ ಬಂದಿದ್ದೇನೆ ಎಂದು ಹೇಳಿದರು. ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಪುಸ್ತಕ ಬಿಡುಗಡೆ ಮಾಡಿದರು. ಬಿ.ಎಸ್. ಚಂದ್ರಶೇಖರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವಿವಿಎಸ್‌ ಲಕ್ಷ್ಮಣ್‌ ಸೇರಿದಂತೆ ಗಣ್ಯ ಕ್ರಿಕೆಟಿಗರು ಹಾಜರಿದ್ದರು.

ಕಿರ್ಮಾನಿ ಅವರು 75ನೇ ವಸಂತಕ್ಕೆ ಕಾಲಿಟ್ಟ ದಿನವೇ ಅವರ ಆತ್ಮಚರಿತ್ರೆ ಬಿಡುಗಡೆ ಮಾಡಿದ್ದು ಅವರ ಪಾಲಿಗೆ ಸ್ಮರಣೀಯ ದಿನವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಪಿ2 ಹಾಲ್‌ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. 1983ರ ಕ್ರಿಕೆಟ್ ವಿಶ್ವಕಪ್ ಜಯಿಸಿದ ಭಾರತ ತಂಡದಲ್ಲಿ ವಿಕೆಟ್ ಕೀಪರ್ ಆಗಿದ್ದ ಬೆಂಗಳೂರಿನ ಕಿರ್ಮಾನಿ ಅವರ ಹೆಸರಿನಲ್ಲಿ ಹಲವು ದಾಖಲೆಗಳು ಇವೆ.

ಕಿರ್ಮಾನಿ ಪುಸ್ತಕಕ್ಕೆ ಸುನಿಲ್ ಗಾವಸ್ಕರ್ ಮುನ್ನುಡಿ ಬರೆದಿದ್ದಾರೆ. ಯುವಪೀಳಿಗೆಗೆ ನನ್ನ ಅನುಭವಗಳನ್ನು ಈ ಪುಸ್ತಕದ ಮೂಲಕ ಪರಿಚಯಿಸುವ ಪ್ರಯತ್ನ ಮಾಡಿರುವೆ. ಈ ಕೃತಿ ರಚನೆಯಲ್ಲಿ ಪತ್ರಕರ್ತ ದಕ್ಷೇಶ್ ಪಾಠಕ್ ಮತ್ತು ಸಂಶೋಧಕರೂ ಆಗಿರುವ ದೇಬಶೀಷ್ ಸೇನ್ ಗುಪ್ತಾ ಅವರು ಸಹಲೇಖಕರಾಗಿ ನನಗೆ ಸಹಾಯ ಮಾಡಿದ್ದಾರೆ ಎಂದು ಕಿರ್ಮಾನಿ ತಿಳಿಸಿದರು.

ಕಿರ್ಮಾನಿ ಕ್ರಿಕೆಟ್‌ ಸಾಧನೆ

80ರ ದಶಕದಲ್ಲಿ ಭಾರತೀಯ ಕ್ರಿಕೆಟ್‌ ತಂಡದಲ್ಲಿ ಕೀಪಿಂಗ್‌ ಮೂಲಕ ಭಾರೀ ಸದ್ದು ಮಾಡಿದ್ದಿ ಕರ್ನಾಟಕದ ಸೈಯದ್ ಕಿರ್ಮಾನಿ ಅವರು ಭಾರತ ಪರ 88 ಪಂದ್ಯಗಳನ್ನು ಆಡಿ 2759 ರನ್‌ ಬಾರಿಸಿದ್ದಾರೆ. ಈ ವೇಳೆ 2 ಶತಕ ಸಿಡಿಸಿದ್ದಾರೆ. 49 ಏಕದಿನ ಪಂದ್ಯಗಳಿಂದ 373 ರನ್‌ ಗಳಿಸಿದ್ದಾರೆ. 1976ರಲ್ಲಿ ಈಡನ್‌ ಪಾರ್ಕ್‌ನಲ್ಲಿ ನಡೆದಿ ನ್ಯೂಜಿಲ್ಯಾಂಡ್‌ ವಿರುದ್ಧದ ಟೆಸ್ಟ್‌ ಪಂದ್ಯವನ್ನಾಡುವ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ವಿಕೆಟ್‌ ಹಿಂದೆ 198 ವಿಕೆಟ್‌ ಬಲಿ ಪಡೆದಿದ್ದಾರೆ. ಇದರಲ್ಲಿ 160 ಕ್ಯಾಚ್‌ ಮತ್ತು 38 ಸ್ಟಂಪ್ಡ್‌ ಒಳಗೊಂಡಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 275 ಪಂದ್ಯವನ್ನಾಡಿ 9620 ರನ್‌ ಕಲೆಹಾಕಿದ್ದಾರೆ. 13 ಶತಕ ಮತ್ತು 38 ಅರ್ಧಶತಕ ಸಿಡಿಸಿದ್ದಾರೆ.