Sunday, 15th December 2024

ನೊಂದವರಿಗೆ ನೆರವು ನೀಡುವುದು ನನ್ನ ಕರ್ತವ್ಯ

ವಿಶ್ವವಾಣಿ ಕ್ಲಬ್‌ ಹೌಸ್‌ (ಸಂವಾದ ೧೩)

ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ ಕಾರ್ಯಕ್ರಮದಲ್ಲಿ ರವಿ ಡಿ.ಚನ್ನಣ್ಣನವರ್ ಮಾತು

ಪೊಲೀಸರು ಪ್ರತಿಯೊಬ್ಬರ ಜತೆ ಗೌರವದಿಂದ ನಡೆದುಕೊಳ್ಳಬೇಕು

ಬೆಂಗಳೂರು: ಅಽಕಾರ ಬೇಕಿರುವುದು ಸಮಾಜದಲ್ಲಿ ಕೆಟ್ಟ ಕೆಲಸಗಳ ತಡೆಗೆ ಹಾಗೂ ಕಾಯಿದೆಗಳನ್ನು ಚಾಚೂ ತಪ್ಪದೆ ಪಾಲನೆ ಮಾಡಲು. ನೊಂದವರಿಗೆ
ನೆರವು ನೀಡುವುದು ನನ್ನ ಕರ್ತವ್ಯ ಎಂದು ಹಿರಿಯ ಪೊಲೀಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ತಿಳಿಸಿದರು.

‘ವಿಶ್ವವಾಣಿ’ ಕ್ಲಬ್‌ಹೌಸ್ ಸಂವಾದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪೊಲೀಸರು ಪ್ರತಿಯೊಬ್ಬರ ಜತೆಯೂ ಗೌರವದಿಂದ ನಡೆದುಕೊಳ್ಳಬೇಕು. ಪೊಲೀಸರೆಂದರೆ ಭಯವಲ್ಲ, ಭರವಸೆ ಎಂಬ ತತ್ವ ನಮ್ಮದು. ಜನಸಾಮಾನ್ಯರಿಗೆ ಪೊಲೀಸ್ ಇಲಾಖೆ ಕುರಿತು ತಿಳಿಸಲು ನಾನು ಎಫ್ಐಆರ್, ಚಾರ್ಜ್‌ಶೀಟ್, ಮೊಕದ್ದಮೆ ಕುರಿತು ಪುಸ್ತಕ ಬರೆದ್ದಿದ್ದೇನೆ. ಗ್ರಾಮೀಣ ಭಾಗದ ಜನರಿಗೆ ಕಾನೂನು ಗೊತ್ತಿರದಿದ್ದರೂ ಅಧಿಕಾರಿಯ ಕಾರ್ಯ ವೈಖರಿ ಬಗ್ಗೆ ತಿಳಿದುಕೊಳ್ಳುತ್ತಾರೆ. ಅಽಕಾರಿ ಸರಿಯಾಗಿದ್ದರೆ ಜನರಲ್ಲಿ ಒಳ್ಳೆಯ ವಿಶ್ವಾಸ ಮೂಡಲಿದೆ ಎಂದರು.

ಸಾಧನೆ ಮಾಡಿದ ವ್ಯಕ್ತಿಯು ದಂತ ಕಥೆ ಸೃಷ್ಟಿ ಮಾಡುತ್ತಾನೆ. ನಾನು ಸಾಧಾರಣ ಮನುಷ್ಯ. ಸಮಾಜದಲ್ಲಿ ನಾನು ಸಿಂಗಂ ಅಥವಾ ಚಿಂಗಂ ಅಲ್ಲ. ಅಸಾಧಾರಣ ವ್ಯಕ್ತಿ ಅಲ್ಲ. ಪೇದೆಯೂ ಬಹುದೊಡ್ಡ ಸಾಧನೆ ಮಾಡಿರುವ ಸಾಕಷ್ಟು ಉದಾಹರಣೆ ಇವೆ. ನನ್ನ ಬದುಕು ತೆರೆದ ಪುಸ್ತಕ ಇದ್ದ ಹಾಗೆ. ಗ್ರಾಮೀಣ ಭಾಗದಿಂದ ಬಂದವರು, ಅಕ್ಷರ ಜ್ಞಾನ ಇರುವವರು ನನ್ನ ಇತಿಹಾಸ ತಿಳಿದುಕೊಂಡಿದ್ದಾರೆ.

ನಾನು ಅರಣ್ಯವನ್ನೇ ನಂಬಿ ಬದುಕುವ ಕುಟುಂಬದಿಂದ ಬಂದವನು. ಶಾಲೆಯಲ್ಲಿ ಓದುವಾಗ ‘ದುಡ್ಡೆದೊಡ್ಡಪ್ಪ, ವಿದ್ಯೆ ಅದರಪ್ಪ’ ಎಂಬ ನಾಣ್ಣುಡಿ ಪ್ರಭಾವ ಬೀರಿತು. ನನ್ನ ಹತ್ತಿರ ಹಣವಿರಲಿಲ್ಲ, ಅಕ್ಷರ ಅರಿಸಿ ಹೊರಟ ಹುಡುಗ ಎಂದು ಯಶಸ್ಸಿನ ಹಾದಿ ಕುರಿತು ಮಾಹಿತಿ ತಿಳಿಸಿದರು. ನಾನು ಬದುಕಿನ ಒಡೆಯ. ತನ್ನನ್ನು
ತಾನು ಇತರರಿಗಿಂತ ಕೀಳು ಎಂಬ ಭಾವನೆ ಬಿಡಬೇಕು. ಮಾಹಿತಿ ಕಲೆ ಹಾಕುವುದು ಮುಖ್ಯ. ನಾವು ಮಾಡುವ ಕೆಲಸದಲ್ಲಿ ಯಶಸ್ಸು ಸಾಧಿಸಲು ಶ್ರಮಿಸಬೇಕು. ಬದುಕಿನ ಮೇಲೆ ಭರವಸೆ ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ ಎಂದು ಯುವ ಸಮೂಹಕ್ಕೆ ಸಂದೇಶ ನೀಡಿದರು.

ನಾವು ಸೂಪರ್ ಹೀರೊಗಳಲ್ಲ: ಸಿನಿಮಾಗಳಲ್ಲಿ ಅತಿರೇಕ, ಅತಿ ವಿಡಂಬನೆಯ ಅಂಶಗಳು ಇರುತ್ತವೆ. ಪೊಲೀಸರು ಕೂಡ ಜನಸಾಮಾನ್ಯರು, ಚರ್ಮಧಾರಿಗಳು. ಸಮವಸ ಧರಿಸಿದ ನಾಗರಿಕರು ಅಷ್ಟೆ. ವ್ಯಕ್ತಿ ಅಪರಾಧ ಮಾಡುತ್ತಿರುವ ವ್ಯಕ್ತಿಯನ್ನು ಗಡಿಪಾರು ಮಾಡುವ ಅವಕಾಶ ಸಾಮಾನ್ಯರಿಗಿದೆ. ಸಿನಿಮಾಗಳನ್ನು ನೋಡಿ ಉದ್ರೇಕಕಾರಿ ಅಂಶಗಳನ್ನು ಅಳವಡಿಸಿಕೊಳ್ಳಬಾರದು ಎಂದು ಸಲಹೆ ನೀಡಿದರು.

ದಮನಿತರ ರಕ್ಷಣೆ ಹೊಣೆ ನಮ್ಮದು
ಅಧಿಕಾರಿ ಹೇಗಿರಬೇಕು ಎಂಬುದಕ್ಕೆ ರವಿ ಅವರು ಮಾದರಿ. ಕಾಯಿದೆ ಯಾರಿಗೆ ಗೊತ್ತಿಲ್ಲವೊ ಅದನ್ನು ತಿಳಿಸುವ ಕೆಲಸ ಮಾಡುತ್ತಿದ್ದಾರೆ. ದಕ್ಷ ಅಧಿಕಾರಿ ಕೆಲವು
ಬದಲಾವಣೆ ತರಲು ಸಾಧ್ಯ. ದಮನಿತ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕಾನೂನು ಪರಿಪಾಲನೆ ಆಗುತ್ತಿಲ್ಲ. ಇಂತಹ ವಿಷ ವರ್ತುಲದಿಂದ ಹೊರ ಬರಲು ನಿಮ್ಮಂಥವರಿಂದ ಸಾಧ್ಯ ಎಂದು ಮಾಜಿ ಸಚಿವೆ ಜಯಮಾಲಾ ಅವರ ಮಾತಿಗೆ ಸ್ಪಂದಿಸಿದ ರವಿ ಡಿ.ಚನ್ನಣ್ಣನವರ್, ಪೊಲೀಸ್ ಇಲಾಖೆಯಲ್ಲಿ ಪ್ರತಿ ವರ್ಷ ೧.೮೦ ಲಕ್ಷ ಅಪರಾಧಗಳು ಆಗುತ್ತವೆ. ಹೆಣ್ಣು ಮಕ್ಕಳ ಮೇಲೆ ಚಿರಪರಿಚಿತರಿಂದ ಆಗುವ ದೌರ್ಜನ್ಯ ಹೆಚ್ಚು. ಕಾನೂನು ಜಾರಿ ಮಾಡುವ ಅಧಿಕಾರಿಯಲ್ಲಿ  ಸಂವೇದನಾಶೀಲತೆ ಇರಬೇಕು. ಕೆಲವೇ ಕೆಲ ಅಽಕಾರಿಗಳಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಕಾಯಿದೆ ಪಾಲನೆ ಮಾಡಿದರೆ ಹೆಣ್ಣು ಮಕ್ಕಳು ರಕ್ಷಣೆ ಸಾಧ್ಯ. ಪೊಲೀಸ್ ಇಲಾಖೆ ವ್ಯವಸ್ಥೆ ಸರಿಯಿಲ್ಲದಿದ್ದರೆ ಸಮಾಜ ತಿದ್ದಲು ಅಸಾಧ್ಯ ಎಂದು ಹೇಳಿದರು.

ಫಸ್ಟ್ ಲವ್ ಸ್ಟೋರಿ
ನನ್ನ ಮೊದಲ ಪ್ರೇಮಕಥೆ ನನ್ನ ಬದುಕಿನ ಪ್ರೀತಿ ಗದಗದ ರಾಮಕೃಷ್ಣ ವಿವೇಕಾನಂದ ಆಶ್ರಮದೊಂದಿಗೆ. ಆಶ್ರಮದ ಗುರುಗಳಾದ ನಿರ್ಭಯಾನಂದ ಸ್ವಾಮೀಜಿಗಳು ನನಗೆ ಆದರ್ಶರಾಗಿದ್ದರು. ಹಾಗೆಯೇ ಎರಡನೇ ಪ್ರೇಮ ಕಥೆಯೂ ಆರಂಭವಾಗಿತ್ತು. ಆಗ ಈ ಪ್ರೇಮಕ್ಕೆ ಗುರುಗಳ ಒಪ್ಪಿಗೆ ಪಡೆದೆ. ನನ್ನ ಹೆಂಡತಿಗೆ ದೊಡ್ಡ ಪ್ರೇಮಪತ್ರ ಬರೆದೆ. ಮದುವೆಗೆ ಸಹಕಾರ ಪಡೆದೆ. ಪೊಲೀಸ್ ಅಧಿಕಾರಿ ಯಶಸ್ಸಿಗೆ ಹೆಂಡತಿ ಸಹಕಾರ ಮುಖ್ಯ ಎಂದರು.

ವಿಶ್ವವಾಣಿಯಲ್ಲಿ ರವಿ ಡಿ.ಚನ್ನಣ್ಣನವರ್ ಅಂಕಣ
ಬರವಣಿಗೆ ಬಗ್ಗೆ ಕೇಳುಗರ ಪ್ರಶ್ನೆಗೆ ಉತ್ತರಿಸಿದ ಅವರು, ಬರವಣಿಗೆ ನನ್ನ ಪ್ರವೃತ್ತಿ. ಇದಕ್ಕಾಗಿ ಅನೇಕ ಸಿದ್ಧತೆ ಮಾಡಿಕೊಂಡಿದ್ದೇನೆ. ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಅನೇಕ ಅಂಕಣಗಳು ನನಗೆ ಸ್ಫೂರ್ತಿ ತುಂಬಿವೆ. ಹೀಗಾಗಿ, ವಿಶ್ವವಾಣಿಯಲ್ಲಿ ನನ್ನ ಅಂಕಣವನ್ನು ಶೀಘ್ರವೇ ನಿರೀಕ್ಷಿಸಬಹುದು ಎಂದರು.

***

ಮಾತಿಗೆ ಬೆಲೆ ಇದ್ದಾಗ ಮಾತನಾಡಬೇಕು, ಪೂರ್ವಗ್ರಹ ಪೀಡಿತರಿದ್ದಾಗ ಮೌನವಾಗಬೇಕು.

ನಾವು ಸೋಲೋದು ನಮ್ಮ ಆಲೋಚನೆಗಳಿಂದ.

ನನ್ನ ಜೀವನದ ಭೂತ, ಭವಿಷ್ಯ, ವರ್ತಮಾನವೆಲ್ಲವೂ ವಿವೇಕಾನಂದ, ಮಾತೆ ಶಾರದಾದೇವಿ, ವಿವೇಕಾನಂದರಿಂದ ತುಂಬಿದೆ.

ಇಂದಿಗೂ ನಿರ್ಭಯಾನಂದ ಸ್ವಾಮೀಜಿ ಅವರು ಕರೆದರೆ ಈಗಲೂ ನಾನು ಕಾರ್ ಡ್ರೈವರ್ ಆಗಲು ಸಿದ್ಧ.

ಚಂದ್ರಶೇಖರ್ ಆಜಾದ್, ಮದಕರಿ ನಾಯಕ ನನ್ನ ರೋಲ್ ಮಾಡಲ್.

ನನ್ನ ಬಗ್ಗೆ ಸಿನಿಮಾ ತೆಗೆದರೆ, ನಾನೇ ಹೀರೊ, ನನ್ನ ಬದುಕಿಗೆ ನಾನೇ ಹೀರೊ.

ಪ್ರಯತ್ನಗಳನ್ನು ಮೀರಿ ಬೆಳೆಯುವುದು ನನ್ನ ಆಲೋಚನೆ, ದಿಟ್ಟತನ.

ಕಾಯಕವೇ ಕೈಲಾಸ ಎಂಬ ತತ್ವ ನಂಬಿದ್ದ ನಾನು, ಯಾವ ಕೆಲಸಕ್ಕೂ ಹಿಂಜರಿಯಲಿಲ್ಲ.