ಶಿವಮೊಗ್ಗ: ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಂದ್ ಮಾಡಲಾಗಿದ್ದ ಜೋಗ ಜಲಪಾತ (Jog Falls) ವೀಕ್ಷಣೆಗೆ ನೂತನ ವರ್ಷಾಚರಣೆ (New Year Celebration) ಸಂದರ್ಭದಲ್ಲಿ ಅವಕಾಶ ನೀಡಲಾಗಿದೆ. ಇನ್ನೊಂದೆಡೆ ನಂದಿ ಬೆಟ್ಟದಲ್ಲಿ (Nandi hills) ಯಾವುದೇ ಹೊಸ ವರ್ಷಾಚರಣೆ ಹಾಗೂ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿರುವ ಕಾರಣ ಜನವರಿ 1ರಿಂದ ಮಾರ್ಚ್ 15 ರವರೆಗೆ ಜೋಗ ಜಲಪಾತಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಇದೀಗ ಹೊಸ ವರ್ಷಾಚರಣೆ ಪ್ರಯುಕ್ತ ಜಿಲ್ಲಾಡಳಿತ ಪ್ರವಾಸಿಗರಿಗೆ ಸಿಹಿ ಸುದ್ದಿ ನೀಡಿದೆ. ಜೋಗ ನಿರ್ವಹಣಾ ಪ್ರಾಧಿಕಾರದ ಮುಖ್ಯ ದ್ವಾರವನ್ನು ಹೊರತುಪಡಿಸಿ ಉಳಿದೆಲ್ಲ ಪರ್ಯಾಯ ಸ್ಥಳಗಳಿಂದ ಪ್ರವಾಸಿಗರಿಗೆ ಜೋಗ ಜಲಪಾತ ವೀಕ್ಷಿಸಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.
ಯಾವ ಪ್ರದೇಶಗಳಿಂದೆಲ್ಲ ಜೋಗ ನೋಡಬಹುದು?
ಪ್ರವಾಸಿಗರು ವ್ಯೂ ಪಾಯಿಂಟ್, ಯಾತ್ರಿ ನಿವಾಸ, ರಾಣಿ ಫಾಲ್ಸ್, ಮುಂಬೈ ಬಂಗಲೆ ಮೊದಲಾದೆಡೆಯಿಂದ ಜಲಪಾತವನ್ನು ವೀಕ್ಷಿಸಬಹುದು ಎಂದು ಜಿಲ್ಲಾಡಳಿತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಜೋಗಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿತ್ತು. ಆದರೆ, ಈ ವರ್ಷ ಪ್ರವೇಶ ನಿಷೇಧಿಸುವ ಮುನ್ನವೇ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಜೋಗ ವೀಕ್ಷಣೆಯ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಜಂಟಿ ಕಾರ್ಯದರ್ಶಿ ಧರ್ಮಪ್ಪ ತಿಳಿಸಿದ್ದಾರೆ.
ನಂದಿ ಬೆಟ್ಟ ಬಂದ್
ನಂದಿ ಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಂಪೂರ್ಣ ನಿಷೇಧ ಹೇರಿ ಆದೇಶ ಹೊರಡಿಸಿದೆ. ಡಿಸೆಂಬರ್ 31 ಸಂಜೆ 6 ಗಂಟೆಯಿಂದ 2025 ಜನವರಿ1ರಂದು ಬೆಳಿಗ್ಗೆ 7 ಗಂಟೆವರೆಗೂ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿದ್ದು, ಜೊತೆಗೆ ಅತಿಥಿ ಗೃಹಗಳಿಗೆ ಪ್ರವೇಶ ಕೂಡ ನಿರ್ಬಂಧಿಸಿದೆ.