Friday, 22nd November 2024

Kadalekai Parishe:‌ ಈ ಬಾರಿ ಸುಂಕ ರಹಿತ ಕಡಲೆಕಾಯಿ ಪರಿಷೆ : ವ್ಯಾಪಾರಿಗಳು ದಿಲ್‌ ಖುಷ್

kadalekai parishe 2024

ಬೆಂಗಳೂರು : ಮಹಾ ನಗರಿ ಬೆಂಗಳೂರಿನ (Bengaluru news) ಪ್ರಖ್ಯಾತ ಬಸವನಗುಡಿ ಕಡಲೆಕಾಯಿ ಪರಿಷೆ (Basavanagudi Kadalekai Parishe) ದಿನಾಂಕವನ್ನು ಮುಜರಾಯಿ ಇಲಾಖೆ (Muzrai department) ಘೋಷಣೆ ಮಾಡಿದೆ. ಜೊತೆಗೆ ಇಲಾಖೆಯು ಈ ಬಾರಿ ವ್ಯಾಪಾರಿಗಳ ಬಾಯಿ ಸಿಹಿ ಮಾಡುವ ನಿರ್ಧಾರಕ್ಕೆ ಬಂದಿದೆ. ಬಸವನಗುಡಿ ಕಡಲೆಕಾಯಿ ಪರಿಷೆಯು ಪ್ರತಿ ವರ್ಷವೂ ಕಾರ್ತಿಕ ಮಾಸದ ಕಡೆಯ ಸೋಮವಾರ ನಡೆಯುತ್ತದೆ. ಅದರಂತೆ ಈ ಬಾರಿ ಮುಜರಾಯಿ ಇಲಾಖೆ ನವೆಂಬರ್‌ 25 ಮತ್ತು 26 ರಂದು ಎರಡು ದಿನಗಳ ಕಾಲ ಅದ್ದೂರಿಯಾಗಿ ಕಡಲೆಕಾಯಿ ಪರಿಷೆಯನ್ನು ನಡೆಸಲು ನಿರ್ಧರಿಸಿದೆ.

ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ನಡೆದ ಧಾರ್ಮಿಕ ದತ್ತಿ ಪರಿಷತ್‌ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದಲ್ಲದೇ,ಎರಡು ದಿನಗಳ ಕಾಲ ನಡೆಯಲಿರುವ ಪರಿಷೆಗೆ ವ್ಯಾಪಾರಿಗಳಿಂದ ಸುಂಕ ವಸೂಲಾತಿಗೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ. ಈ ಬಾರಿಯ ಪರಿಷೆ ಸುಂಕ ರಹಿತವಾಗಿ ನಡೆಯಲಿದೆ. ಅಷ್ಟೇ ಅಲ್ಲದೆ,ಈ ಬಾರಿ ಯಾವುದೇ ರೀತಿಯ ಟೆಂಡರ್‌ ಪ್ರಕ್ರಿಯೆ ಇರುವುದಿಲ್ಲ ಎಂದು ಸಚಿವರು ಆದೇಶಿಸಿದ್ದಾರೆ. ಸದ್ಯಕ್ಕೆ ಕಡಲೆಕಾಯಿ ವ್ಯಾಪಾರಿಗಳು ಸಂಭ್ರಮದಲ್ಲಿದ್ದಾರೆ.

ಮಲ್ಲೇಶ್ವರಂ ಕಡಲೆಕಾಯಿ ಪರಿಷೆ

ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ನವೆಂಬರ್‌ 15 ರಿಂದ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ಈ ಬಾರಿಯ ಪರಿಷೆಯನ್ನು ಪ್ಲಾಸ್ಟಿಕ್‌ ಮುಕ್ತವಾಗಿ ಮಾಡಲು ನಿರ್ಧರಿಸಲಾಗಿದೆ. ಪರಿಷೆಗೆ ಬರುವ ಗ್ರಾಹಕರು ಮತ್ತು ವ್ಯಾಪಾರಸ್ಥರೆಲ್ಲರೂ ಪ್ಲಾಸ್ಟಿಕ್‌ ಚೀಲದ ಬದಲು ಕಡ್ಡಾಯವಾಗಿ ಬಟ್ಟೆ ಚೀಲವನ್ನು ಉಪಯೋಗಿಸಬೇಕೆಂಬ ನಿಯಮವನ್ನು ಜಾರಿ ಮಾಡಲಾಗುತ್ತದೆ. ಪರಿಷೆಯಲ್ಲಿ ಹತ್ತಾರು ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ಈ ಬಾರಿಯ ಪರಿಷೆಗೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಮೂರು ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ಸಾಧ್ಯತೆಯಿದೆ.

ಹೇಗಿರಲಿದೆ ಪರಿಷೆ?

ಕಡಿಮೆ ಬೆಲೆಗೆ ಸಿಗುವ ಬಡವರ ಬಾದಾಮಿಯಾದ ಕಡಲೆಕಾಯಿಯನ್ನು ನಿಧಾನವಾಗಿ ಮೆಲ್ಲುತ್ತಾ, ಇಳಿ ಸಂಜೆಯ ಕೊರೆಯುವ ಚಳಿಯಲ್ಲಿ ಗೆಳೆಯರ ಹೆಗಲ ಮೇಲೆ ಕೈಯಿರಿಸಿ ನಡೆಯುತ್ತಾ, ಗಂಟೆಗಟ್ಟಲೆ ಹರಟುತ್ತಾ ಹೊತ್ತು ಕಳೆಯುವುದು ಮಜಾವಾಗಿರುತ್ತದೆ. ಅಪ್ಪ-ಅಮ್ಮನ ಕೈ ಬಿಡಿಸಿಕೊಂಡು ಓಡುವ ಪುಟಾಣಿ ಮಕ್ಕಳು, ಬೈಕ್‌ ಮೇಲೆ ತನ್ನ ಗೆಳೆಯನನ್ನು ಬಿಗಿಯಾಗಿ ತಬ್ಬಿ ಹಿಡಿದು ಕೂರುವ ಹುಡುಗಿ, ಬೆರಗುಗಣ್ಣುಗಳಿಂದ ಪರಿಷೆಯನ್ನು ನೋಡುವ ನವ ದಂಪತಿಗಳು, ಕಿಕ್ಕಿರಿದು ಸೇರುವ ಜನರನ್ನು ಕಂಡು ಸುಸ್ತು ಬೀಳುವ ವಯೋ ವೃದ್ಧರು ಹೀಗೆ ಎಲ್ಲರಿಂದಲೂ ಕಡಲೆಕಾಯಿ ಪರಿಷೆ ಕಳೆಕಟ್ಟುತ್ತದೆ.

ರಾಮಕೃಷ್ಣ ಆಶ್ರಮದಿಂದ ಪ್ರಾರಂಭವಾಗಿ ಕಾಮತ್‌ ಬ್ಯೂಗಲ್‌ ರಾಕ್‌ ಹೊಟೇಲ್‌ ತನಕವೂ ಕಡಲೆಕಾಯಿ ರಸ್ತೆ ಅಂಚಿನಲ್ಲಿ ರಾಶಿರಾಶಿಯಾಗಿ ಹರಡಿಕೊಂಡಿರುತ್ತದೆ. ಬಸವನಗುಡಿಯಲ್ಲಿ ಅಲೆಯುತ್ತಾ ಹಸಿ,ಹುರಿದ ಮತ್ತು ಬೇಯಿಸಿದ ಕಡಲೆಕಾಯಿಯ ರುಚಿಯನ್ನು ಸವಿಯಬಹುದು. ಗ್ರಾಹಕ ಮತ್ತು ವ್ಯಾಪರಸ್ಥರ ನಡುವಿನ ಸಂಬಂಧ ಈ ಜಾತ್ರೆಯಿಂದ ಗಟ್ಟಿಗೊಳ್ಳುತ್ತದೆ. ವಿಶೇಷವೆಂದರೆ ಬೆಂಗಳೂರಿನ ಸುತ್ತಮುತ್ತಲಿನ ಕಡಲೆಕಾಯಿ ಬೆಳೆಗಾರರು ತಮ್ಮ ಬೆಳೆಯನ್ನು ಭಕ್ತಿಯಿಂದ ಬಸವಣ್ಣನಿಗೆ ಅರ್ಪಿಸಿ ಶ್ರಮದ ಬೆಳೆಗೆ ಪ್ರತಿಫಲ ಪಡೆಯಲು ರಸ್ತೆ ಅಂಚಲ್ಲಿ ಕಡಲೆಕಾಯಿ ರಾಶಿ ಸುರಿದುಕೊಂಡು ಗ್ರಾಹಕರನ್ನು ಎದುರು ನೋಡುತ್ತಾರೆ. ಮೊದಲು ಕಡಲೆಕಾಯಿ ಖರೀದಿಸುವ ಗ್ರಾಹಕನೇ ಅವರ ಪಾಲಿಗೆ ದೇವರು. ಮೊದಲ ಬೋಣಿಯನ್ನು ಕಣ್ಣಿಗೊತ್ತಿಕೊಂಡು ಮುಗುಳ್ನಗುತ್ತಾರೆ.

ಮಾಗಡಿ, ಚಿಂತಾಮಣಿ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಕುಣಿಗಲ್‌, ಮೈಸೂರು, ಮಂಡ್ಯ ಹೀಗೆ ರಾಜ್ಯದ ನಾನಾ ಭಾಗಗಳಿಂದ ರೈತರು ಮತ್ತು ವ್ಯಾಪಾರಿಗಳು ಕಡಲೆಕಾಯಿ ಮೂಟೆಗಳನ್ನು ಹೊತ್ತುಕೊಂಡು ಬರುತ್ತಾರೆ. ಪಕ್ಕದ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ರೈತರು,ವ್ಯಾಪಾರಿಗಳು ಕೂಡ ಪರಿಷೆಯಲ್ಲಿ ಪಾಲ್ಗೊಳ್ಳುತ್ತಾರೆ. ನಮ್ಮ ಪಾಲಿಗೆ ಕಡಲೆಕಾಯಿ ಪರಿಷೆ ಸಂಭ್ರಮ. ರೈತರ ಪಾಲಿಗೆ ವರ್ಷದ ಕೂಳು!

ಇದನ್ನೂ ಓದಿ: ಮನೆಗಳ ಸುತ್ತಲೂ ಮರಗಳ ಪರಿಷೆ