ಬೆಂಗಳೂರು: ಶ್ರೀ ಚಾಮುಂಡೇಶ್ವರಿ ಪಿಕ್ಚರ್ಸ್ ಲಾಂಛನದಲ್ಲಿ ನಾಗರತ್ನಮ್ಮ ಅವರು ನಿರ್ಮಿಸಿರುವ, ಮೈಸೂರು ರಾಜು ನಿರ್ದೇಶನದ ʼಕುಚುಕುʼ ಚಿತ್ರದ (Kannada New Movie) ಟೀಸರ್ ಹಾಗೂ ಹಾಡುಗಳು ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಎಂ.ಎನ್. ಕುಮಾರ್, ನಿರ್ಮಾಪಕ ಎಂ.ಡಿ. ಪಾರ್ಥಸಾರಥಿ, ನೃತ್ಯ ನಿರ್ದೇಶಕ ಜಗ್ಗು ಮಾಸ್ಟರ್ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸ್ನೇಹದ ಮಹತ್ವ ಸಾರುವ ಈ ಚಿತ್ರ ಫೆಬ್ರವರಿ 14 ರ ಪ್ರೇಮಿಗಳ ದಿನದಂದು ಬಿಡುಗಡೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿರುವ ಶಿವಾಜಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಟೀಸರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಾನು 26 ವರ್ಷಗಳಿಂದ ಡ್ಯಾನ್ಸರ್ ಹಾಗೂ ಡ್ಯಾನ್ಸ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಹಿಂದೆ ʼನೃತ್ಯಂʼ ಚಿತ್ರ ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರ. ಸ್ನೇಹದ ಮಹತ್ವ ಸಾರುವ ಕಥಾಹಂದರದ ಜತೆಗೆ ಸೆಂಟಿಮೆಂಟ್ ಸನ್ನಿವೇಶಗಳು ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಲಿದೆ. ಮೈಸೂರು ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ ಎಂದು ತಿಳಿಸಿದರು.
ಇದು ನನ್ನ ಅಭಿನಯದ ಮೂರನೇ ಚಿತ್ರ. ಹೆಸರೆ ತಿಳಿಸುವಂತೆ ಸ್ನೇಹಿತರ ಕುರಿತಾದ ಚಿತ್ರದಲ್ಲಿ ನಾನು ಒಬ್ಬ ಸ್ನೇಹಿತ ಎಂದು ನಾಯಕ ಅರ್ಜುನ್ ಚೋಹಾನ್ ತಿಳಿಸಿದರು.
ಗುಲ್ಬರ್ಗ ಮೂಲದವನಾದ ನಾನು ಮೂಲತಃ ರಂಗಭೂಮಿ ಕಲಾವಿದ. ಈ ಚಿತ್ರದಲ್ಲಿ ನಾನು ಹಾಗೂ ಅರ್ಜುನ್ ʼಕುಚುಕುʼಗಳಾಗಿ ನಟಿಸಿದ್ದೇವೆ ಎನ್ನುತ್ತಾರೆ ಮತ್ತೊಬ್ಬ ನಾಯಕ ಬಸವರಾಜ್ ಕುಮಾರ್.
ಈ ಚಿತ್ರದಲ್ಲಿರುವ ಬಹುತೇಕರು ಮೈಸೂರಿನವರು. ನಾನು ಕೂಡ ಮೈಸೂರಿನವನು. ಈ ಚಿತ್ರದಲ್ಲಿ ವಿಲನ್ ಪಾತ್ರ ನಿರ್ವಹಿಸಿದ್ದೇನೆ. ಈ ಚಿತ್ರದಲ್ಲಿ ಅಭಿನಯಿಸಿದ ನಂತರ. KD ಸಿನಿಮಾ ಹಾಗೂ ಆರ್ ಚಂದ್ರು ಅವರ ಫಾದರ್ ಸಿನಿಮಾ ಮತ್ತು ಕುಂಟೆಬಿಲ್ಲೆ, A1 ಸಿನಿಮಾ, ಮಂಡಲ್ ಪಂಚಾಯಿತಿ ಮುಂತಾದ ಚಿತ್ರಗಳಲ್ಲಿ ನನಗೆ ನಟಿಸಲು ಅವಕಾಶ ಸಿಕ್ಕಿದೆ ಎಂದರು ನಟ ವಿಲನ್ ಶಿವಾಜಿ.
ಈ ಸುದ್ದಿಯನ್ನೂ ಓದಿ | Job Guide: ರಕ್ಷಣಾ ಸಚಿವಾಲಯದಲ್ಲಿದೆ 113 ಹುದ್ದೆ; 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ
ಸಿನಿಮಾ ಮೇಲಿನ ಪ್ರೀತಿಯಿಂದ ಕಷ್ಟಪಟ್ಟು ಈ ಚಿತ್ರ ನಿರ್ಮಾಣ ಮಾಡಿರುವುದಾಗಿ ನಿರ್ಮಾಪಕಿ ನಾಗರತ್ನಮ್ಮ ಹೇಳಿದರು. ಚಿತ್ರದಲ್ಲಿ ಐದು ಸುಮಧುರ ಹಾಡುಗಳಿರುವುದಾಗಿ ಸಂಗೀತ ನಿರ್ದೇಶಕ ಎ.ಟಿ.ರವೀಶ್ ತಿಳಿಸಿದರು. ತಮ್ಮ ಪಾತ್ರದ ಕುರಿತು ನಾಯಕಿ ಪ್ರಿಯದರ್ಶಿನಿ ಮಾತನಾಡಿದರು.