ಬೆಂಗಳೂರು: ಬೆಂಗಳೂರಿನ (bengaluru news) ಐಐಎಸ್‌ಸಿ (IISC) ಕ್ಯಾಂಪಸ್‌ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಹಿಂದಿ ವಿದ್ಯಾರ್ಥಿಗಳು ವಿರೋಧ ತೋರಿಸಿದ ಘಟನೆ ನಡೆದಿದೆ. ಕನ್ನಡಾಭಿಮಾನಿಗಳು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ.
ಕನ್ನಡ ರಾಜ್ಯೋತ್ಸವವನ್ನು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ನಲ್ಲಿ ಹಲವು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ಇದೇ ಮೊದಲ ಬಾರಿ ಈ ರೀತಿ ಹಿಂದಿ ವಿದ್ಯಾರ್ಥಿಗಳು ತಗಾದೆ ತೆಗೆದಿದ್ದಾರೆ. ಅದ್ಧೂರಿ ಕನ್ನಡ ರಾಜ್ಯೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಈ ಸಂದರ್ಭದಲ್ಲಿ ಕೆಲವು ಹಿಂದಿ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆ ಸಂದರ್ಭದಲ್ಲಿ ಕನ್ನಡ ವಿದ್ಯಾರ್ಥಿಗಳು ಹಾಗೂ ಹಿಂದಿ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಬಿಗಡಾಯಿಸಿದೆ.
ಕನ್ನಡ ರಾಜ್ಯೋತ್ಸವದ ಮೆರವಣಿಗೆ ನಡೆಸುವುದಕ್ಕೆ ಕೆಲವು ಹಿಂದಿ ಯುವಕರು ಅಡ್ಡಪಡಿಸಿದ್ದಾರೆ. ಮೆರವಣಿಗೆ ಪ್ರಾರಂಭವಾಗುತ್ತಿದ್ದಂತೆಯೇ ಕೆಲವು ಹಿಂದಿ ವಿದ್ಯಾರ್ಥಿಗಳಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ.
ಈ ಘಟನೆಯ ಬಗ್ಗೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಸಹ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು ಆಕ್ರೋಶ ಹೊರ ಹಾಕಿದ್ದಾರೆ. “ಇವರ ದುರಹಂಕಾರ ಅತಿಯಾಯಿತು. ಬೆಂಗಳೂರು ಪೊಲೀಸರು ಕೂಡಲೇ ಇವರನ್ನು ಗುರುತಿಸಿ ಇವರ ಮೇಲೆ ಕ್ರಮ ಆಗಲೇಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಪೊಲೀಸರ ಮಧ್ಯಪ್ರವೇಶ: ಈ ವಿಚಾರವಾಗಿ ಗದ್ದಲ ಪ್ರಾರಂಭವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಸದಾಶಿವನಗರ ಪೊಲೀಸರು ಮಧ್ಯಪ್ರವೇಶಿಸಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ಮೇಲೆ ಕನ್ನಡ ರಾಜ್ಯೋತ್ಸವ ಮೆರವಣಿಗೆಗೆ ಅವಕಾಶ ನೀಡಿದ್ದು, ಪೊಲೀಸರು ಭೇಟಿ ನೀಡಿದ ಮೇಲೆ ಪರಿಸ್ಥಿತಿ ತಿಳಿಯಾಗಿದೆ.
ರಾಜ್ಯೋತ್ಸವ ಆಚರಣೆಗೆ ಅಡ್ಡಿಪಡಿಸಿದ ಘಟನೆಗೆ ಸಂಬಂಧಿಸಿದಂತೆ ಹಿಂದಿ ವಿದ್ಯಾರ್ಥಿಗಳ ಮೇಲೆ ಯಾವುದೇ ದೂರು ದಾಖಲಾಗಿಲ್ಲ. ಸದಾಶಿವನಗರ ಪೊಲೀಸರು ವಿಯಾರ್ಥಿಗಳಿಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ. ಈ ರೀತಿ ವರ್ತಿಸುವ ನಾಡದ್ರೋಹಿಗಳನ್ನು ಬಂಧಿಸಿ ಗಡಿಪಾರು ಮಾಡಿ ಎಂದು ಕನ್ನಡಿಗರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.