Monday, 25th November 2024

Kannada Rajyotsava: ರಂಗೋಲಿ ಮೆಟ್ರೊ ಕಲಾ ಕೇಂದ್ರದಲ್ಲಿ ʼಕರ್ನಾಟಕ ಕಲಾ ಸಂಭ್ರಮʼ

Kannada Rajyotsava

ಬೆಂಗಳೂರು: ಕನ್ನಡ ರಾಜ್ಯೋತ್ಸವದ (Kannada Rajyotsava) ಅಂಗವಾಗಿ ಯುವಕ ಸಂಘದ ಆರ್ಟ್ ಮ್ಯಾಟರ್ಸ್, ಫ್ರೀ ಸ್ಪೇಸ್ ಮತ್ತು ರಂಗೋಲಿ ಮೆಟ್ರೋ ಸಹಯೋಗದಲ್ಲಿ ʼಕರ್ನಾಟಕ ಕಲಾ ಸಂಭ್ರಮ; 7ನೇ ಆವೃತ್ತಿ ಕಾರ್ಯಕ್ರಮ ರಂಗೋಲಿ ಮೆಟ್ರೋ ಕಲಾ ಕೇಂದ್ರದಲ್ಲಿ ಜರುಗಿತು. ಈ ಕಾರ್ಯಕ್ರಮವು ಕನ್ನಡ ನಾಡಿನ ಸಂಸ್ಕೃತಿಯನ್ನು ಜೀವಂತವಾಗಿರಿಸುವಲ್ಲಿ ಒಂದು ಮಹತ್ವದ ಪಾತ್ರವನ್ನು ವಹಿಸಿತು.

ಖ್ಯಾತ ಭರತನಾಟ್ಯ ಕಲಾವಿದೆ ವಿ. ಪದ್ಮಿನಿ ಉಪಾಧ್ಯಾ ಮತ್ತು ಜನಪದ ಉಪನ್ಯಾಸಕ ಡಾ. ಕುರುಬ ಬಸವರಾಜ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಇವರ ಸಮ್ಮುಖದಲ್ಲಿ ಕಲಾವಿದರು ಮತ್ತು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ತುಂಬಿತು. ಕಾರ್ಯಕ್ರಮದ ಸಂಚಾಲಕ ಶಿವಪ್ರಸಾದ್ ಮತ್ತು ಆಕಾಶ್ ಉಪಸ್ಥಿತರಿದ್ದರು.

ಯುವ ಪ್ರತಿಭೆಗಳ ಪ್ರದರ್ಶನ

ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ನೇರ ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಪಿಓಪಿ ಕಾರ್ವಿಂಗ್ ಸ್ಪರ್ಧೆ, ಜನಪದ ಸಮೂಹ ಗೀತೆ, ಜನಪದ ಸಮೂಹ ನೃತ್ಯ, ಶೋಭಾಯಾತ್ರೆ ಉಡುಗೆ ತೊಡುಗೆ ಸ್ಪರ್ಧೆಗಳು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾದವು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿ ಎಲ್ಲರ ಮನ ಸೆಳೆದರು. ಮಹಾತ್ಮಾ ಗಾಂಧಿ ರಸ್ತೆ ಮತ್ತು ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ನಡೆದ ಶೋಭಾಯಾತ್ರೆಯು ಜನಸಾಗರವನ್ನು ಸೆಳೆದು ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಪಸರಿಸಿದರು.

ಈ ಸುದ್ದಿಯನ್ನೂ ಓದಿ | Bengaluru Power Cut: ನ.26, 27ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇಲ್ಲ

ವಿಜೇತರಿಗೆ ಪ್ರಶಸ್ತಿ

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಜೀಜಾ ಹರಿಸಿಂಗ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಎಲ್ಲಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಅಭಿನಂದಿಸಿದರು. ಈ ಮೂಲಕ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಯಿತು.