Monday, 6th January 2025

Kannada Sahitya Sammelana: ದೃಷ್ಟಿ ಚೇತನರ ವಿಶೇಷ ಕವಿಗೋಷ್ಠಿಗೆ ಸಾಕ್ಷಿಯಾದ ಕನ್ನಡ ಸಾಹಿತ್ಯ ಸಮ್ಮೇಳನ

Kannada Sahitya Sammelana (1)

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (Kannada Sahitya Sammelana) ಇದೇ ಮೊದಲ ಬಾರಿಗೆ ‘ದೃಷ್ಟಿ ಚೇತನರ ವಿಶೇಷ ಕವಿಗೋಷ್ಠಿʼ ಆಯೋಜಿಸಿರುವುದು ವಿಶೇಷವಾಗಿತ್ತು.

ಕವಿತೆಯಂಥಾ ಸೃಜನಶೀಲ ರಚನೆಯ ಹಿಂದಿನ ಅವರ ಶ್ರಮ ನಮ್ಮ ಊಹೆಗೂ ನಿಲುಕದ್ದು. ಆದರೆ ಈ ಬಾರಿ ದೃಷ್ಟಿಚೇತನರಿಗೆ ವಿಶೇಷವಾಗಿ ವೇದಿಕೆ ‌ಕಲ್ಪಿಸಲಾಗಿತ್ತು. ಗೋಷ್ಠಿಯಲ್ಲಿ ಮೊದಲ ಕವಿಗೋಷ್ಠಿಯೇ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ ನಡೆಯಿತು. ಮೊದಲಿನಿಂದಲೂ ಯಾವ ಯಾವ ಗೋಷ್ಠಿಗಳು ಇರಬೇಕು ಎಂಬ ಚರ್ಚೆಗಳು, ಸಲಹೆಗಳು, ಚಿಂತಕರು, ವಿಚಾರವಂತರು, ಸಾಹಿತಿಗಳಿಂದ ಕೇಳಿ ಬರುತ್ತಲೇ ಇತ್ತು. ಅದರಲ್ಲಿ ವಿಕಲ ಹಾಗೂ ದೃಷ್ಟಿಚೇತನರ ಗೋಷ್ಠಿಯೂ ಒಂದಾಗಿತ್ತು. ಅದರಂತೆ ಸಾಹಿತ್ಯ ಪರಿಷತ್ತು ದೃಷ್ಟಿಚೇತನರ ವಿಶೇಷ ಕವಿಗೋಷ್ಠಿಗೆ ಅವಕಾಶ ನೀಡಿರುವುದು ಸಾಕಷ್ಟು ದೃಷ್ಟಿಚೇತನ ಕವಿಗಳಿಗೆ ಸ್ಫೂರ್ತಿ ತುಂಬಿದಂತಾಯಿತು.

ಈ ಸುದ್ದಿಯನ್ನೂ ಓದಿ | Kannada Sahitya Sammelana: ಗೂಗಲ್‌, ಕೃತಕ ಬುದ್ಧಿಮತ್ತೆಗೂ ಕನ್ನಡ ಕಲಿಸಿ: ಗೊ.ರು. ಚನ್ನಬಸಪ್ಪ ಕರೆ

ಕವಿಗೋಷ್ಠಿಗೆ ಭಾಗವಹಿಸುವ ಪ್ರತಿಯೊಬ್ಬ ಕವಿಗೂ ಕವಿತೆ ಮಂಡಿಸಲು ತಲಾ 3 ನಿಮಿಷ ಕಾಲಾವಕಾಶ ನೀಡಲಾಗಿತ್ತು. ದೃಷ್ಟಿಚೇತನರ ವಿಶೇಷ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪ್ರಾಧ್ಯಾಪಕ ಡಾ.ಶಿವ ರಾಜ ಶಾಸ್ತ್ರೀ ಹೇರೂರ ವಹಿಸಿದ್ದರು. ಸಾಹಿತಿ ಮುದಿಗೆರೆ ರಮೇಶ್‌ಕುಮಾರ್‌ ಆಶಯ ನುಡಿಗಳನ್ನಾಡಿದರು.

ದೃಷ್ಟಿಚೇತನ ಕವಿಗಳಾದ ಬಾಪುಖಾಡೆ, ಹೇಮಂತಕುಮಾರ್‌, ರಮಾ ಫಣಿಭಟ್‌ ಗೋಪಿ, ಶಿವಸ್ವಾಮಿ ಚೀನಕೇರ, ಡಾ.ಕೃಷ್ಣ ಹೊಂಬಳ, ಸಿ. ಹರೀಶ್‌, ಜಯನಂದಾ ಟೋಪುಗೋಳು, ಸೋಮಶೇಖರ್‌ ಬಳೆಗಾರ್‌, ಟಿ.ಎಂ.ತೋಟಯ್ಯ, ಡಾ.ಆನಂದ್‌ ಇಂದೂರಾ ಭಾಗವಹಿಸಿದರು. ದೃಷ್ಟಿಚೇತನ ಕವಿಗಳು ಬರುವುದೇ ಅಪರೂಪವಾಗಿರುವ ಇಂಥ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನದಂಥ ದೊಡ್ಡ ವೇದಿಕೆಯಲ್ಲಿ ದೃಷ್ಟಿಚೇತನ ಕವಿಗಳಿಗೂ ಅವಕಾಶ ಕಲ್ಪಿಸಿರುವುದು ಸಾರ್ವಜನಿಕ ವಲಯದಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಈ ಸುದ್ದಿಯನ್ನೂ ಓದಿ | Kannada Sahitya Sammelana: ಹಿಂದಿ ಹೇರಿಕೆ ನಿಲ್ಲಿಸಿ, ನ್ಯಾಯವಾಗಿ ತೆರಿಗೆ ಪಾಲು ಕೊಡಿ: ಗುಡುಗಿದ ಗೊರುಚ

ಅಂಧರ ಕೃತಿಗಳ ಬಗ್ಗೆ ಯೋಚಿಸಿ

ಇತಿಹಾಸದಲ್ಲೆ ಮೊದಲ ಬಾರಿಗೆ ವಿಶೇಷ ಕವಿಗೋಷ್ಠಿಗೆ ಅವಕಾಶ ಸಾರ್ಥಕದ ಭಾವ ಎಂದು ತಿಳಿಸಿದ ಸಾಹಿತಿ ಮುದಿಗೆರೆ ರಮೇಶ್‌ಕುಮಾರ್‌ ಅವರು, ದೃಷ್ಟಿ ಚೇತನರ ಬದುಕೆ ಸವಾಲು. ನಮ್ಮ ಬರವಣಿಗೆ ಅನೇಕ ಸವಾಲುಗಳಿಗೆ ಸಿಲುಕಿದೆ. ಮೂವತ್ತಕ್ಕೂ ಹೆಚ್ಚು ದೃಷ್ಟಿಚೇತನರು ಪುಸ್ತಕಗಳನ್ನು ಬರೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ಕೃತಿಗಳನ್ನು ಚಿಂತನೆಗೆ ಒಳಪಡಿಸಬೇಕು. ಓದುಗ ವಲಯಕ್ಕೆ ತಲುಪಿಸುವ ಕಾರ್ಯ ಮಾಡಬೇಕಿದೆ ಎಂದು ಅವರು ತಿಳಿಸಿದರು.