ಮಂಡ್ಯ : ಈ ದೇಶದಲ್ಲಿ ತ್ರಿಭಾಷಾ ಸೂತ್ರ ಸಲ್ಲದು. ತ್ರಿಭಾಷಾ ಸೂತ್ರ ಹೇರುವುದನ್ನು ನಾನು ಖಂಡಿಸುತ್ತೇನೆ. ಮನುಷ್ಯ ಆಸಕ್ತಿಯಿಂದ ಎಷ್ಟು ಭಾಷೆಗಳನ್ನು ಬೇಕಾದರೂ ಕಲಿಯಲಿ. ಆದರೆ ಮಾತೃಭಾಷೆ ಮಕ್ಕಳ ಪ್ರಾಥಮಿಕ ಸಂವಹನವಾಗಬೇಕು. ಕನ್ನಡ ಉಳಿಯಬೇಕಾದರೆ ಮಾತೃ ಭಾಷೆ ಪ್ರಜ್ಞೆ ಮುಖ್ಯ ಎಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಗೊರು ಚನ್ನಬಸಪ್ಪ ಅಭಿಪ್ರಾಯಪಟ್ಟರು. ಸಮ್ಮೇಳನದ ಎರಡನೆಯ ದಿನವಾದ ಶನಿವಾರ ‘ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ’ ಗೋಷ್ಠಿಯಲ್ಲಿ (Kannada Sahitya Sammelana) ಸುರೇಶ್ ಗುಪ್ತಾ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಮತ್ತೋರ್ವ ಸಂವಾದಕರಾದ ಡಾ. ಬಸವರಾಜ್ ನೆಲ್ಲೀಪುರ ಅವರು ಬಹುಭಾಷಾ ಸಂಸ್ಕೃತಿಯ ಬಗ್ಗೆ ಸಮ್ಮೇಳನಾಧ್ಯಕ್ಷರಲ್ಲಿ ಪ್ರಶ್ನೆ ಕೇಳಿದರು. ಅವರ ಪ್ರಶ್ನೆಗೆ ವಿವರವಾಗಿ ಉತ್ತರಿಸಿದ ಗೊರುಚ, ಭಾರತ ಬಹು ಸಂಸ್ಕೃತಿ, ಬಹು ಭಾಷೆ ಮತ್ತು ಬಹು ಪದ್ಧತಿಗಳ ದೇಶ. ಇದೆಲ್ಲವನ್ನೂ ಉಳಿಸುವುದು ಈ ತಲೆಮಾರಿನ ಯುವಕರ ಕರ್ತವ್ಯವಾಗಿದೆ. ಈ ದೇಶದ ಸತ್ವ ಮತ್ತು ಸೊಗಡು ಹಾಳಾಗಲಿಕ್ಕೆ ಬಿಡಬಾರದು ಎಂದರು.
ಪ್ರಾಧಿಕಾರ ಮತ್ತು ಇನ್ನಿತರ ನಿರ್ದೇಶನಾಲಯ ಕಚೇರಿಗಳು ಬೆಂಗಳೂರಿಗೆ ಮಾತ್ರ ಯಾಕೆ? ಎಂದು ಕೇಳಿದಾಗ ನಾನು ಈ ವಿಷಯವನ್ನು ಸರ್ಕಾರದ ಮುಂದೆ ಸಾಕಷ್ಟು ಬಾರಿ ಪ್ರಸ್ತಾಪಿಸಿದ್ದೇನೆ. ಅಕಾಡೆಮಿ, ಪ್ರಾಧಿಕಾರ ಕಚೇರಿಗಳು ಆಯಾ ಜಿಲ್ಲೆಯಲ್ಲಿರಬೇಕು. ಆಗ ಅನುಕೂಲವಾಗುತ್ತದೆ. ಎಲ್ಲದಕ್ಕೂ ಬೆಂಗಳೂರಿಗೆ ಬರುವುದು ತಪ್ಪುತ್ತದೆ. ಇದನ್ನು ಸರ್ಕಾರ ಯಾವಾಗ ಜಾರಿಗೆ ತರುತ್ತದೆಯೋ ಗೊತ್ತಿಲ್ಲ ಎಂದರು.
ವಚನ ಸಾಹಿತ್ಯವು ಲೋಕದ ಸೋಜಿಗದ ಸಾಹಿತ್ಯ. ಅದು ಹನ್ನೆರಡನೆಯ ಶತಮಾನದ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆ. ಅದರಲ್ಲಿ ವೈಚಾರಿಕತೆ ಇದೆ. ಮೌಲ್ಯವಿದೆ. ಈಗಾಗಲೇ ವಚನಗಳು ಪ್ರಪಂಚದ 22-23 ಭಾಷೆಗಳಿಗೆ ಅನುವಾದವಾಗಿವೆ. ಮತ್ತಷ್ಟು ಕೆಲಸವಾಗಬೇಕು. ವಿಶ್ವವಿದ್ಯಾನಿಲಯಗಳಲ್ಲಿ ವಚನ ಸಾಹಿತ್ಯ ಪ್ರತ್ಯೇಕ ಪಠ್ಯವಾಗಬೇಕು ಎಂದು ಪಿ ನಾಗರಾಜ್ ಅವರು ಕೇಳಿದ ವಚನ ಸಾಹಿತ್ಯದ ಕುರಿತಾದ ಪ್ರಶ್ನೆಗೆ ಗೊರುಚ ಉತ್ತರಿಸಿದರು.
ಎಂ.ವೈ.ಶಿವರಾಂ ಅವರು ಜಾನಪದ ಸಂಸ್ಕೃತಿಯ ಮರು ಸ್ಥಾಪನೆ ಹೇಗೆ? ಎಂಬ ಪ್ರಶ್ನೆ ಕೇಳಿದರು. ಜಾನಪದ ಸಂಸ್ಕೃತಿ ಮರು ಸ್ಥಾಪನೆಯ ಅಗತ್ಯವಿಲ್ಲ. ಅದು ಆಗುವುದೂ ಇಲ್ಲ. ಜಾನಪದ ಸಂಸ್ಕೃತಿ ಸಂರಕ್ಷಣೆ ಆಗಬೇಕು. ಜಾನಪದ ಒಂದು ಜೀವನ ಸಂಸ್ಕೃತಿ ಎಂದು ಗೊರುಚ ಹೇಳಿದರು. ಈ ಮಧ್ಯೆ ಜಾನಪದ ಪರಿಷತ್, ಜಾನಪದ ಅಕಾಡೆಮಿ ಮತ್ತು ವಿಶ್ವವಿದ್ಯಾಲಯಗಳಿಂದ ತುರ್ತಾಗಿ ಆಗಬೇಕಾದ ಕೆಲಸಗಳ ಬಗ್ಗೆ ಪ್ರಸ್ತಾಪ ಮಾಡಿದರು.
ಸಾವಿನ ಬಗ್ಗೆ ನನಗೆ ಚಿಂತೆಯಿಲ್ಲ
ನಿಮ್ಮ ಆರೋಗ್ಯದ ಗುಟ್ಟೇನು? ಎಂದು ಸಂವಾದಕರೊಬ್ಬರು ಕೇಳಿದರು. ನಾನು ಮಿತಾಹಾರಿ ಇದೇ ನನ್ನ ಆರೋಗ್ಯದ ಗುಟ್ಟು. ನನಗೆ ಸಾವಿನ ಬಗ್ಗೆ ಚಿಂತೆಯಿಲ್ಲ ಹಾಗಾಗಿ ಆರೋಗ್ಯವಾಗಿದ್ದೇನೆ.ಜ್ಯೋತಿಷಿಯೊಬ್ಬರು ನೀವು ನೂರು ವರ್ಷ ಬದುಕುತ್ತೀರಿ ಎಂದಿದ್ದಾರೆ. ಅವರ ಮಾತನ್ನು ನಿಜ ಮಾಡಲು ದಿನಗಳನ್ನು ದೂಡುತ್ತಿದ್ದೇನೆ ಎನ್ನುತ್ತಾ ಗೊರುಚ ಮುಗುಳ್ನಕ್ಕರು. ಸಂವಾದದಲ್ಲಿ ಅನಸೂಯ, ಶಾಂತಲಾ ಧರ್ಮರಾಜ್, ಮಾರುತಿ ಶಿಡ್ಲಾಪುರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಸಂವಾದ ಗೋಷ್ಠಿಗೂ ಮುನ್ನ ಗೊರುಚ ಅವರ ಕುರಿತಾದ ಸಾಕ್ಷ್ಯ ಚಿತ್ರವನ್ನು ವೇದಿಕೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಸಮ್ಮೇಳನಾಧ್ಯಕ್ಷರೊಂದಿಗಿನ ಸಂವಾದದಲ್ಲೂ ಎಡವಟ್ಟು:
ಸಮ್ಮೇಳನಾಧ್ಯಕ್ಷರ ಜೊತೆಗಿನ ಸಂವಾದಕ್ಕೆ ಅದರದ್ದೇ ಆದ ಮಹತ್ವವಿದೆ. ಅದು ಈ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಸಂವಾದದಲ್ಲಿ ಚರ್ಚೆಯಾಗುವ ವಿಷಯಗಳು ದಾಖಲಾಗುತ್ತವೆ ಕೂಡ. ಆದರೆ ಈ ಬಾರಿಯ ಸಂವಾದವನ್ನು ತೀರಾ ಅವಸರವಾಗಿ ಮುಗಿಸಿದರು. ಗೋಷ್ಠಿ ಸರಿಯಾದ ಸಮಯಕ್ಕೆ ಪ್ರಾರಂಭವಾಗದ ಕಾರಣ ಮೂರ್ನಾಲ್ಕು ಪ್ರಶ್ನೆಗಳಿಗಷ್ಟೇ ಗೊರುಚ ಉತ್ತರಿಸಿದರು. ಸಂವಾದಕರು ಕೂಡ ನೇರವಾಗಿ ಪ್ರಶ್ನೆ ಕೇಳದೆ ಉದ್ದುದ್ದ ಭಾಷಣ ಮಾಡಿದರು. ಹಾಗಾಗಿ ಸಂವಾದದಲ್ಲಿ ಭಾಗವಹಿಸಿದ್ದ ಇತರ ನಾಲ್ವರು ಸಂವಾದಕರಿಗೆ ಪ್ರಶ್ನೆ ಕೇಳುವ ಅವಕಾಶವೇ ದೊರೆಯಲಿಲ್ಲ. ಅವರಿಗೆ ಲಿಖಿತ ರೂಪದಲ್ಲಿ ಉತ್ತರ ಕೊಡಲು ರಾಜ್ಯಾಧ್ಯಕ್ಷರಾದ ಮಹೇಶ ಜೋಶಿ ಗೊರುಚ ಅವರಿಗೆ ಸೂಚಿಸಿದರು. ಭಾಗವಹಿಸಿದ್ದ ಸಂವಾದಕರು ಪೆಚ್ಚು ಮೋರೆಯೊಂದಿಗೆ ವೇದಿಕೆಯಿಂದ ಕೆಳಗಿಳಿದರು.
ಈ ಸುದ್ದಿಯನ್ನೂ ಓದಿ | Kannada Sahitya Sammelana: ರಾಮ, ಕೃಷ್ಣ, ದ್ರೌಪದಿ; ಪುರಾಣದ ಪಾತ್ರಗಳ ಮರುಶೋಧ