ಮಂಡ್ಯ: ತಮ್ಮಿಂದಲೇ ಬೆಂಗಳೂರಿನ ಉದ್ಧಾರ ಆಗುತ್ತಿದೆ ಎನ್ನುವ ಅನ್ಯರಾಜ್ಯದ ದುರಹಂಕಾರಿಗಳನ್ನು ನಿಯಂತ್ರಿಸಿ ಎಂದು ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗೊ.ರು ಚನ್ನಬಸಪ್ಪ ಅವರು ಸರ್ಕಾರವನ್ನು ಹಾಗೂ ಕನ್ನಡ ಹೋರಾಟಗಾರರನ್ನು (Kannada Sahitya Sammelana) ವಿನಂತಿಸಿದರು.
87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಮಾತನಾಡಿದ ಅವರು, ಬೆಂಗಳೂರು ನಗರ ತನ್ನ ಹವಾಮಾನ, ಸಹಿಷ್ಣುತೆ ಮತ್ತು ಸೌಂದರ್ಯದಿಂದ ಜಾಗತಿಕ ಉದ್ಯಮಗಳನ್ನು ಸೆಳೆದು, ಅವುಗಳು ಸಂತೋಷದಿಂದ ಬಂದು ಇಲ್ಲಿ ನೆಲೆಯೂರಿ ಬೆಂಗಳೂರು ‘ಐಟಿ ಬಿಟಿ ಸಿಟಿ’ ಎಂದು ಪ್ರಖ್ಯಾತವಾಗಿದೆ. ಯಾವ ರಾಜ್ಯದ, ಯಾವ ಭಾಷೆಯ ಜನರಾದರೂ ಭಾರತದಲ್ಲಿ ಎಲ್ಲಿ ಬೇಕಾದರೂ ನೆಲೆಸಬಹುದಾದ ಅವಕಾಶ ಇದೆಯಾದರೂ ಕಾಲೂರುವ, ನೆಲೆಯೂರುವ ನೆಲದ ಬಗ್ಗೆ, ಅಲ್ಲಿನ ಭಾಷೆಯ ಬಗ್ಗೆ ವಲಸಿಗರು ಗೌರವ ಹೊಂದಿರಬೇಕು. ಬೆಂಗಳೂರು ಮತ್ತು ಇತರ ನಮ್ಮ ನಗರಗಳಿಗೆ ಕೆಲಸಕ್ಕಾಗಿ ಬಂದಿರುವ ಹೊರ ರಾಜ್ಯಗಳ ಜನರು ಮೊದಲು ಕನ್ನಡ ಭಾಷೆಯನ್ನು ಕಲಿತು ಅದರಲ್ಲೇ ಸಂವಹನ ಮಾಡುವುದು ಅವರಿಗೆ ಒಳ್ಳೆಯದು ಎಂದವರು ನುಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈಗ ಕನ್ನಡ ಕಲಿಸುವ ಕಾಯಕವನ್ನು ಇನ್ನಷ್ಟು ಉತ್ಸಾಹದಿಂದ ಮುಂದುವರಿಸಿದೆ. ಉದ್ಯಮ ವಲಯಗಳು ಮತ್ತು ಇನ್ನಿತರ ಕಡೆಗಳಲ್ಲಿ ಸರಳ ಕನ್ನಡ ಕಲಿಕಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಬೇರೆ ಭಾಷೆಯ ಜನರು ಇದರ ಸದುಪಯೋಗ ಪಡೆಯಬೇಕು. ಹೊರರಾಜ್ಯಗಳಿಂದ ತಾವು ಬೆಂಗಳೂರಿಗೆ ಉದ್ಯೋಗಕ್ಕಾಗಿ ಬಂದಿರುವುದರಿಂದ ಈ ನಗರದ ಉದ್ಧಾರ ಆಗುತ್ತಿದೆ, ಇಲ್ಲಿನ ವ್ಯಾಪಾರ ಹೆಚ್ಚುತ್ತಿದೆ, ಇಲ್ಲಿನ ನಿವೇಶನಗಳು, ಬಡಾವಣೆಗಳಿಗೆ ಬೆಲೆ ಏರುತ್ತಿದೆ ಮುಂತಾದ ದುರಹಂಕಾರದ ಪ್ರದರ್ಶನ ಹೊರನಾಡಿಗರಿಂದ ಅಲ್ಲಲ್ಲಿ ವ್ಯಕ್ತವಾಗಿದೆ. ಇದನ್ನು ಸರ್ಕಾರ ಮತ್ತು ಕನ್ನಡಿಗರು ನಿಯಂತ್ರಿಸಬೇಕು ಎಂದರು.
ಕನ್ನಡನಾಡಿನಲ್ಲಿ ತಮಗೆ ಸಾಂವಿಧಾನಿಕವಾಗಿ ಲಭ್ಯವಾಗುವ ಎಲ್ಲ ಸೌಲಭ್ಯಗಳನ್ನು ಪಡೆದು, ಪ್ರಭಾವ ಬಳಸಿ ಎಲ್ಲ ರಿಯಾಯಿತಿಗಳನ್ನು ಪಡೆದು ಇಲ್ಲಿ ಔದ್ಯಮಿಕವಾಗಿ ನೆಲೆಯೂರಿ ಲಾಭದಾಯಕವಾಗಿ ಬೆಳೆಯುವ ಉದ್ಯಮಗಳು ಕನ್ನಡಿಗರಾದ ವಿದ್ಯಾವಂತ ಅಭ್ಯರ್ಥಿಗಳಿಗೆ ನಿರ್ದಿಷ್ಟ ಪ್ರಮಾಣದ ಉದ್ಯೋಗ ನೀಡುವುದು ಅವುಗಳ ಋಣಸಂದಾಯದ ಮಾರ್ಗವೆಂದು ಭಾವಿಸಬೇಕು. ಇದು ಅವುಗಳ ನೈತಿಕ ಜವಾಬ್ದಾರಿ ಕೂಡ. ಆದರೆ ಇದನ್ನು ತಪ್ಪಿಸಲು ಹಲವಾರು ದಾರಿಗಳನ್ನು ಹುಡುಕುವ ಉದ್ಯಮಗಳನ್ನು ಕರ್ನಾಟಕ ಸರ್ಕಾರ ತನ್ನ ಷರತ್ತುಗಳು ನಿಯಮಗಳಿಂದ ಪ್ರತಿಬಂಧಿಸಿದರೆ ತಪ್ಪೇನಿಲ್ಲ. ಕನ್ನಡದ ನೆಲ ಜಲ ನೈಸರ್ಗಿಕ ಸಂಪನ್ಮೂಲಗಳನ್ನು ಒದಗಿಸುವ ಮೊದಲು ಸರ್ಕಾರ ಇದಕ್ಕೆ ಮುಚ್ಚಳಿಕೆಯನ್ನು ಬರೆಸಿಕೊಂಡರೂ ತಪ್ಪಿಲ್ಲ. ಈ ಕುರಿತು ಹಲವು ವರ್ಷಗಳಿಂದ ಚರ್ಚೆ ನಡೆದಿದೆಯಾದರೂ ನಿರ್ದಿಷ್ಟ ಕ್ರಮ ಅತ್ಯಗತ್ಯ ಎಂದು ಕನ್ನಡಿಗರು ಹಕ್ಕೊತ್ತಾಯ ಮಂಡಿಸಬೇಕು ಎಂದು ಕಿವಿಮಾತು ಹೇಳಿದರು.
ಈ ಸುದ್ದಿಯನ್ನೂ ಓದಿ | Kannada Sahitya Sammelana: ಹಿಂದಿ ಹೇರಿಕೆ ನಿಲ್ಲಿಸಿ, ನ್ಯಾಯವಾಗಿ ತೆರಿಗೆ ಪಾಲು ಕೊಡಿ: ಗುಡುಗಿದ ಗೊರುಚ