Saturday, 21st December 2024

Kannada Sahitya Sammelana: ಅವ್ಯವಸ್ಥೆಗಳು ಸರಿಯಾಗಲಿಲ್ಲ, ಸಮಾನಾಂತರಕ್ಕೆ ಜನ ಬರಲಿಲ್ಲ

ಮಂಡ್ಯ: ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (Kannada Sahitya Sammelana) ಶುಕ್ರವಾರ ಉಂಟಾಗಿದ್ದ ಅವ್ಯವಸ್ಥೆಗಳು ಶನಿವಾರ ಬಂದರೂ ಸರಿಯಾಗಲಿಲ್ಲ. ಹಲವು ಮಾಧ್ಯಮಗಳು ಇವುಗಳ ಬಗ್ಗೆ ಬರೆದಿದ್ದರೂ ಯಾರೂ ಆ ಕಡೆ ಗಮನ ಹರಿಸಿದಂತೆ ತೋರಲಿಲ್ಲ.

ಮೊದಲನೆಯದಾಗಿ, ಸಮಾನಾಂತರ ವೇದಿಕೆಗಳು ಎಲ್ಲಿದೆ ಎಂದು ಹುಡುಕಾಡುತ್ತ ಜನರು ಹಾಗೂ ಅಲ್ಲಿನ ಗೋಷ್ಠಿಗಳಲ್ಲಿ ಭಾಷಣ ಮಾಡಬೇಕಿದ್ದವರೂ ಪರದಾಡಿದರು. ಈ ವೇದಿಕೆಗಳು ಪ್ರಧಾನ ವೇದಿಕೆಯಿಂದ ಹಿಂದುಗಡೆ, ಮರೆಯಾಗಿದ್ದವು. ಅಲ್ಲಿಗೆ ಹೋಗಲು ದಾರಿ ತೋರಿಸುವ ಯಾವುದೇ ಫಲಕಗಳು ಇರಲಿಲ್ಲ. ಗೋಷ್ಠಿಯೊಂದರ ಸಂಪನ್ಮೂಲ ವ್ಯಕ್ತಿಯಾಗಿದ್ದ ಹಿರಿಯ ಪತ್ರಕರ್ತ ಜಿ.ಎನ್‌ ಮೋಹನ್‌ ಅವರೂ ವೇದಿಕೆ ಎಲ್ಲಿದೆ ಎಂದು ತಿಳಿಯದೆ ಪರದಾಡಿದರು. ಕನಿಷ್ಠ ಪಕ್ಷ ಬೋರ್ಡ್‌ ಅಳವಡಿಸಬೇಕಿತ್ತು ಎಂಬುದು ಹಲವರ ಬೇಡಿಕೆಯಾಗಿತ್ತು.

ಮೊಬೈಲ್‌ ನೆಟ್‌ವೆರ್ಕ್‌ ಸಮಸ್ಯೆ ಶನಿವಾರವೂ ಕೈಕೊಟ್ಟಿತು. ಪುಸ್ತಕ ಮಳಿಗೆಗಳಲ್ಲಿ ಸಾಕಷ್ಟು ವ್ಯಾಪಾರ ನಡೆದಿತ್ತಾದರೂ ಯುಪಿಐ ಪಾವತಿಗೆ ನೆಟ್‌ವರ್ಕ್‌ ಸಮಸ್ಯೆ ಕಾಡಿದ್ದರಿಂದ ಹಿನ್ನಡೆ ಉಂಟಾಯಿತು. ಎರಡನೇ ದಿನ ಸಾಕಷ್ಟು ಜನ ಸಮ್ಮೇಳನಾಂಗಣಕ್ಕೆ ಬಂದಿದ್ದರಿಂದ ಹೀಗಾಯಿತು. ಹೀಗಾಗದಂತೆ ಹೆಚ್ಚುವರಿ ಟವರ್‌ಗಳನ್ನು ಅಳವಡಿಸಲಾಗಿದೆ ಎಂದು ಪರಿಷತ್‌ ಅಧ್ಯಕ್ಷ ಮಹೇಶ್ ಜೋಶಿ ಹೇಳಿದ್ದರು. ಆದರೆ ಅದು ಕಾರ್ಯಗತವಾಗಿರಲಿಲ್ಲ. ಇನ್ನು ಶೌಚಾಲಯದ ಸಮಸ್ಯೆ ಹಾಗೇ ಮುಂದುವರಿಯಿತು. ನೀರು ಸಾಕಷ್ಟು ಒದಗಣೆ ಆಯಿತಾದರೂ, ಮತ್ತಷ್ಟು ಜನ ಬರುತ್ತಲೇ ಇದ್ದುದರಿಂದ ಸ್ವಚ್ಛತೆ ಸಮಸ್ಯೆ ಕಾಡಿತು. ಮುಖ್ಯವಾಗಿ ಮಹಿಳೆಯರು ಈ ಸಮಸ್ಯೆಯ ತೀವ್ರ ಸಂಕಷ್ಟಕ್ಕೆ ಈಡಾದರು.

ಪುಸ್ತಕ ಮಳಿಗೆಗಳಲ್ಲಿ ಮೂರು ಬ್ಲಾಕ್‌ಗಳಿದ್ದವು- ಎ, ಬಿ ಹಾಗೂ ಸಿ. ಇವುಗಳಲ್ಲಿ ಎದುರಿಗೆ ಇದ್ದ ಎ ಬ್ಲಾಕ್‌ನಲ್ಲಿ ಕಾಲಿಡಲಾಗದಷ್ಟು ಜನ ತುಂಬಿಕೊಂಡರು. ನಂತರದ ಬಿ ಹಾಗೂ ಸಿ ಬ್ಲಾಕ್‌ಗಳಿಗೆ ಹೋಗುವ ಜನ ಕಡಿಮೆಯಾಗಿದ್ದರು.

ಈ ಸುದ್ದಿಯನ್ನೂ ಓದಿ | Kannada Sahitya Sammelana: ಸಾಹಿತಿಗಳು ರಾಜಕಾರಣವನ್ನು ಅಸ್ಪೃಶ್ಯತೆಯಿಂದ ಕಾಣುತ್ತಿರುವುದು ದುರ್ದೈವ: ಎಚ್.ಕೆ.ಪಾಟೀಲ್

ಬೆಳಗ್ಗೆ ಖಾಲಿ, ರಾತ್ರಿ ಜಾಲಿ ಜಾಲಿ
ಕನ್ನಡ ಸಾಹಿತ್ಯ ಸಮ್ಮೇಳನ ಎಂದರೆ ಪುಸ್ತಕದ್ದೆ‌ ಕಾರುಬಾರು ಎಂಬುದು ನೆಪಕ್ಕಷ್ಟೆ. ಅದರಲ್ಲೂ ಗೋಷ್ಠಿಗಳಿಗಂತೂ ಜನ ಆಸಕ್ತಿ ತೋರಲಿಲ್ಲ. ಶುಕ್ರವಾರ ರಾತ್ರಿ ನಡೆದ ಸಂಗೀತ ಕಾರ್ಯಕ್ರಮಕ್ಕೆ ಮಾತ್ರ ಇಡೀ ವೇದಿಕೆ ಹೌಸ್ ಪುಲ್. ಸಮ್ಮೇಳನದಲ್ಲಿ ಅರ್ಥಪೂರ್ಣ ಗೋಷ್ಠಿಗಳಿದ್ದರೂ ಕೇಳುವವರೇ ಇಲ್ಲವಾಗಿತ್ತು. ಖಾಲಿ ಖುರ್ಚಿಗಳಿಗೆ ಗೋಷ್ಠಿ ಮಾಡುವಂತಿತ್ತು. ಮಧ್ಯಾಹ್ನದ ಬಳಿಕ ಜನ ಸಮಾಧಾನಕ್ಕೆ ಬಂದರೂ ಬೆಳಗ್ಗಿನ ಗೋಷ್ಠಿಗಳಿಗೆ ಜನರೆ ಇರಲಿಲ್ಲ. ರಾತ್ರಿ ನಡೆದ ಸಂಗೀತ ಕಾರ್ಯಕ್ರಮಕ್ಕೆ ಮಾತ್ರ ಜನಸ್ತೋಮವೇ ಬಂದಿತ್ತು. ಅಲ್ಲದೆ ಹಾಡುಗಾರರಾದ ಸಾಧುಕೋಕಿಲ ಹಾಗೂ ರಾಜೇಶ್ ಕೃಷ್ಣನ್ ಅವರು ಹಾಡುಗಳನ್ನು ಕೇಳಲು ಜನ ಬಂದಿದ್ದರು. ಇದರಿಂದ ಜನ ಸಾಹಿತ್ಯಕ್ಕೆ ಕಡಿಮೆ ಆಸಕ್ತಿ ತೋರಿರುವುದು ಸಾಬೀತಾಗಿದೆ.

ದಲಿತ ಸಾಹಿತ್ಯ ನೆಲೆಗಳು ಕುರಿತ ಗೋಷ್ಠಿ ನಡುವೆ ಕೆಲವರಿಂದ ಪ್ರತಿಭಟನೆ
ಇತ್ತೀಚಿನ ದಿನಗಳಲ್ಲಿ ಹಿಂದಿ ಭಾಷೆ ಕನ್ನಡ ಮೇಲೆ ಸವಾರಿ ಮಾಡುತ್ತಿದೆ. ಪರಿಣಾಮ, ಕನ್ನಡ ಭಾಷೆಯ ಕಡೆಗಣನೆ ಹೆಚ್ಚಾಗುತ್ತಿದೆ. ಈ ಸಾಹಿತ್ಯ ಸಮ್ಮೇಳನದಲ್ಲಿ ಈ ಕುರಿತು ಖಡಕ್ ನಿರ್ಧಾರ ತಳೆಯಲೇಬೇಕು ಎಂದು ಕೆಲವರು ಒತ್ತಾಯಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ವೇದಿಕೆಯ ನಿರ್ವಹಣಾಕಾರರು ಎಲ್ಲರನ್ನೂ ಸಮಾಧಾನಗೊಳಿಸಿ ಗೋಷ್ಠಿ ಮುಂದುವರೆಯಲು ಅನುವು ಮಾಡಿಕೊಟ್ಟರು.