Friday, 20th December 2024

Kannada Sahitya Sammelana: ಸಾಹಿತ್ಯ ಸಮ್ಮೇಳನ ಮೆರವಣಿಗೆ ಉದ್ಘಾಟನೆಗೆ ಪ್ರಮೋದಾದೇವಿ ಒಡೆಯರ್‌ ಗೈರು

Kannada Sahitya Sammelana

ಮಂಡ್ಯ: ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ದೊರೆತಿದೆ. ಆದರೆ, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ (Kannada Sahitya Sammelana) ಅವರು ಆಹ್ವಾನ ಪತ್ರಿಕೆಯಲ್ಲಿದ್ದಂತೆ ಮೆರವಣಿಗೆಗೆ ಚಾಲನೆ ನೀಡಲು ಹಾಜರಾಗಲಿಲ್ಲ.

ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರು ಚಾಲನೆ ನೀಡಬೇಕಾಗಿತ್ತು. ಆದರೆ ಅವರು ಗೈರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಚಾಲನೆ ನೀಡಿದರು. ಪ್ರಮೋದಾದೇವಿ ಅವರನ್ನು ʼಶ್ರೀಮನ್ಮಹಾರಾಣಿ, ಮೈಸೂರು ಅರಮನೆʼ ಎಂದು ಸಮ್ಮೇಳನದ ಆಹ್ವಾನಪತ್ರಿಕೆಯಲ್ಲಿ ಉಲ್ಲೇಖಿಸಲಾಗಿತ್ತು. ಇದು ಸಂವಿಧಾನದ, ಪ್ರಜಾತಂತ್ರದ ಉಲ್ಲಂಘನೆ ಎಂದು ಕೆಲವರು ಕೋರ್ಟ್‌ಗೆ ಹೋಗಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಸಮ್ಮೇಳನದ ವೇದಿಕೆ ಆವರಣದಲ್ಲಿ ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಎನ್.ಚಲುವರಾಯಸ್ವಾಮಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರೆ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಪರಿಷತ್ತಿನ ಧ್ವಜ ಹಾಗೂ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕರಾದ ಮೀರಾ ಶಿವಲಿಂಗಯ್ಯ ನಾಡ ಧ್ವಜಾರೋಹಣ ಮಾಡಿದರು.

ಸಮ್ಮೇಳನದ ಸರ್ವಾಧ್ಯಕ್ಷರಾದ ಗೊ.ರು. ಚನ್ನಬಸಪ್ಪ, ಚೆಸ್ಕಾಂ ಅಧ್ಯಕ್ಷರಾದ ರಮೇಶ್ ಬಂಡಿ ಸಿದ್ದೇಗೌಡ , ಎಂಎಲ್‌ಸಿ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿ | Kannada sahitya sammelana: ಕನ್ನಡವೇ ಕಲಿಕೆಯ ಮಾಧ್ಯಮವಾಗಲಿ; ರಾಜ್ಯ ಸರ್ಕಾರಕ್ಕೆ ಸಮ್ಮೇಳನಾಧ್ಯಕ್ಷ ಗೊರುಚ 21 ಹಕ್ಕೊತ್ತಾಯ

ಸಾಹಿತ್ಯದಿಂದ ಸರ್ವೋದಯವಾಗಲಿ: ನಿರ್ಮಲಾನಂದನಾಥ ಸ್ವಾಮೀಜಿ

ಮಂಡ್ಯ: ಜಗತ್ತಿನ ಶ್ರೇಷ್ಠ ಸಾಹಿತ್ಯವೆಲ್ಲ ನಮ್ಮ ಭಾಷೆಗೆ ಬರಲಿ, ನಮ್ಮ ಭಾಷೆಯ ಶ್ರೇಷ್ಠ ಸಾಹಿತ್ಯವೆಲ್ಲ ಇತರ ಭಾಷೆಗಳಿಗೂ ಹೋಗಲಿ ಎಂದು ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನುಡಿದರು. ಮಂಡ್ಯದಲ್ಲಿ ಇಂದು ಆರಂಭಗೊಂಡ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (Kannada Sahitya Sammelana) ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕವಿ ಕುವೆಂಪು ಅವರ ಮಾತನ್ನು ನೆನಪಿಸಿಕೊಳ್ಳೋಣ. ಇದು ಕನ್ನಡದ ಜಾತ್ರೆ, ಕನ್ನಡದ ನುಡಿಯ ಯಾತ್ರೆ. ಮನೆಗೊಂದು ಹಬ್ಬ, ಊರಿಗೊಂದು ಹಬ್ಬ, ನಾಡಿಗೊಂದು ಹಬ್ಬ. ಇದು ಕೊಳೆಯನ್ನು ತೊಳೆಯಲು, ಅರಿವನ್ನು ಮೂಡಿಸಲು. ಬಾರಿಸು ಕನ್ನಡ ಡಿಂಡಿಮವ. ನಮ್ಮಲ್ಲಿ ಹಲವು ನ್ಯೂನತೆಗಳಿವೆ. ಕ್ಲೇಷಗಳು, ದ್ವೇಷಗಳಿವೆ. ಎಲ್ಲವನ್ನು ಹೋಗಲಾಡಿಸಲು ಇಂಥ ಹಬ್ಬಗಳು ಆವಾಗಾವಗ ಬರುತ್ತಿರಬೇಕು ಎಂದರು.

ಸೋಮಾರಿಗಳಾಗಿ ಇರುವವರನ್ನು ಎಬ್ಬಿಸಲು- ಸತ್ತಂತಿಹರನು ಬಡಿದೆಚ್ಚರಿಸು. ಕಚ್ಚಾಡುವವರನು ಕೂಡಿಸಿ ಒಲಿಸು. ಒಟ್ಟಿಗೆ ಬಾಳುವ ತೆರದಲಿ ಹರಸು ಎಂದಿದ್ದಾರೆ ಕುವೆಂಪು. ಮಂಗಳಕರವಾದದ್ದನ್ನು ಪುನರುಜ್ಜೀವಗೊಳಸಿಬೇಕು, ಕೆಟ್ಟದ್ದನ್ನು ಅಳಿಸಬೇಕು. ಕವಿಗಳ, ಸಂತರ ಆದರ್ಶದಿಂದ ನಾಡಿನಲ್ಲಿ ಸರ್ವೋದಯವಾಗಲಿ. ನಮ್ಮ ಕವಿಗಳನ್ನು ನೆನಪಿಸುವ ಕಾರ್ಯಕ್ರಮವಿದು ಎಂದರು.

ಇಂದಿನ ಸಾಹಿತ್ಯ ಭಾಷೆ ಮೂಲಕ ಗಟ್ಟಿ ಮಾಡಿಕೊಳ್ಳುವ, ಭವಿಷ್ಯಕ್ಕೆ ಸೋಪಾನ ರೂಪಿಸಿಕೊಳ್ಳುವ, ಹಿಂದಿನ ಕವಿಗಳನ್ನು ನೆನಪು ಮಾಡಿಕೊಳ್ಳುವ ತ್ರಿವೇಣಿ ಸಂಗಮ ಕಾರ್ಯಕ್ರಮವಿದು. ಜಗತ್ತಿನ ಶ್ರೇಷ್ಠ ಸಾಹಿತ್ಯ ನಮ್ಮ ಭಾಷೆಗೆ ಬರಲಿ. ನಮ್ಮ ಶ್ರೇಷ್ಠ ಸಾಹಿತ್ಯ ನಮ್ಮೆಡೆಗೆ ಬರಲಿ. ಆಗ ನಾವು ಜಗತ್ತಿನ ಎಲ್ಲವನ್ನು ತಿಳಿಯಲು ಸಾಧ್ಯ. ಮಂಡ್ಯದ ನಾಡಿನಲ್ಲಿ ಕನ್ನಡಮ್ಮನ ತೇರು ಸಾಗಲಿ ಎಂದು ಅವರು ನುಡಿದರು.

ಈ ಸುದ್ದಿಯನ್ನೂ ಓದಿ | Kannada sahitya sammelana: ಕನ್ನಡವೇ ಕಲಿಕೆಯ ಮಾಧ್ಯಮವಾಗಲಿ; ರಾಜ್ಯ ಸರ್ಕಾರಕ್ಕೆ ಸಮ್ಮೇಳನಾಧ್ಯಕ್ಷ ಗೊರುಚ 21 ಹಕ್ಕೊತ್ತಾಯ