ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆ, ಮಂಡ್ಯ: ತಾಯಿಯ ಮನಸ್ಸು ವಿಚಲಿತವಾಗಿದೆ, ಆಕೆಯ ತಲೆ ಕಡಿ ಎಂದು ತಂದೆ ಹೇಳಿದ ಮಾತನ್ನು ಪ್ರಶ್ನಿಸದೆ, ರೇಣುಕೆಯ ಮಾತನ್ನೂ ಕೇಳದೆ ಆಕೆಯ ತಲೆಕಡಿದ ಪರಶುರಾಮ ಸಂಸ್ಕೃತಿಯೇ ಮರ್ಯಾದಾ ಹತ್ಯೆಯ ಸಂಸ್ಕೃತಿಯಾಗಿದೆ ಎಂದು ವಿಮರ್ಶಕಿ ಡಾ.ತಾರಿಣಿ ಶುಭದಾಯಿನಿ ನುಡಿದರು. ಅವರು ಸಾಹಿತ್ಯ ಸಮ್ಮೇಳನದ (Kannada Sahitya Sammelana) ಮೂರನೇ ದಿನವಾದ ಭಾನುವಾರ ನಡೆದ ʼಸ್ತ್ರೀ ಎಂದರೆ ಅಷ್ಟೇ ಸಾಕೆ?ʼ ಗೋಷ್ಠಿಯಲ್ಲಿ ʼವಿವಾಹ ಮತ್ತು ಮರ್ಯಾದಾ ಹತ್ಯೆʼ ವಿಚಾರದ ಕುರಿತು ಮಾತನಾಡಿದರು.
ಪರಶುರಾಮ ಸಂಸ್ಕೃತಿ ಇಂದು ಪುರುಷ ಪ್ರಾಧಾನ್ಯವನ್ನು ಮುನ್ನೆಲೆಗೆ ತಂದಿದ್ದು, ಜಗತ್ತಿನ ಎಲ್ಲ ಕಡೆಗಳಲ್ಲೂ ಹೆಚ್ಚಿದೆ. ಪಿತೃಪ್ರಧಾನ ಸಂಸ್ಕೃತಿ ಇಂದು ಪರ್ಯಾಯ ಅಧಿಕಾರ ಕೇಂದ್ರವಾಗಿದೆ. ಆಧುನಿಕತೆಗೆ ತೆರೆದುಕೊಂಡಂತೆ ಹೆಣ್ಣುಮಕ್ಕಳು ಅನ್ಯರ ಜೊತೆಗೆ ಮದುವೆ ಮಾಡಿಕೊಳ್ಳಬಹುದು ಎಂಬ ಆತಂಕ ಸಮುದಾಯಗಳನ್ನು ಕಂಗೆಡಿಸುತ್ತಿದೆ. ಇದಕ್ಕೆ ಮರ್ಯಾದಾ ಹತ್ಯೆಯ ಮೂಲಕ ʼಶುದ್ಧೀಕರಣʼ ಮಾಡಿಕೊಳ್ಳುತ್ತಿವೆ. ಪಿತೃ ಪ್ರಧಾನ ಸಮಾಜಗಳಲ್ಲಿ ಮರ್ಯಾದಾ ಹತ್ಯೆ ಎಂಬುದು ಹೆಣ್ಣಿಗೇ ಸೀಮಿತವಾಗಿದೆ. ಹೆಣ್ಣು ತನ್ನ ಇಚ್ಛೆಯನ್ನು ಈಡೇರಿಸಿಕೊಂಡಾಗ ಅದನ್ನು ವಿರೋಧಿಸುವ ಶಕ್ತಿಗಳು ಹೆಣ್ಣಿನ ಮೇಲಿನ ತನ್ನ ಅಧಿಕಾರವನ್ನು ಸ್ಥಾಪಿಸಿಕೊಳ್ಳಲು ಮರ್ಯಾದಾ ಹತ್ಯೆಯನ್ನು ಬಳಸುತ್ತಿವೆ.
ಸ್ತ್ರೀ ಸ್ವಾತಂತ್ರ್ಯದ ಮೊದಲ ಚಳವಳಿಗಳು ಸಮಾನತೆಯನ್ನು ಪ್ರತಿಪಾದಿಸಿದ್ದವು. ಆದರೆ ಇಂದು ಸಮಾನತೆಯ ಹಕ್ಕಿಗಿಂತಲೂ ಸ್ತ್ರೀ ಬದುಕುವ ಹಕ್ಕನ್ನು ಮೊದಲು ಪಡೆದುಕೊಳ್ಳಬೇಕಾಗಿದೆ. ಮರ್ಯಾದಾ ಹತ್ಯೆಗಳ ಮೂಲಕ ಆಕೆಯ ಅಸ್ತಿತ್ವಕ್ಕೇ ಧಕ್ಕೆ ಬಂದಿದೆ. ಸಾಂವಿಧಾನಿಕ ಮೌಲ್ಯಗಳ ಆಚರಣೆ ಹೆಚ್ಚಾಗಬೇಕು, ಪ್ರಜಾಸತ್ತಾತ್ಮಕ ಸಮಾಜವನ್ನು ಮುನ್ನೆಲೆಗೆ ತರಬೇಕು ಎಂದರು.
ಶಿಕ್ಷಣ, ತಂತ್ರಜ್ಞಾನ, ಆಧುನಿಕತೆ ಹೆಚ್ಚಾದಷ್ಟೂ ಹೆಣ್ಣಿನ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಸ್ತ್ರೀಯರಲ್ಲಿ ಮೂರಕ್ಕೆ ಒಬ್ಬರು ಒಂದಲ್ಲ ಒಂದು ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದಾರೆ. ಹೆಣ್ಣನ್ನು ಭೋಗದ ವಸ್ತುವಾಗಿ ನೋಡುವ ರೂಢಿ ಸಿನಿಮಾ, ಮಾಧ್ಯಮಗಳ ಮೂಲಕ ಹೆಚ್ಚುತ್ತಿದೆ. ಹೆಣ್ಣು ದಿಟ್ಟವಾಗಿ ಇದನ್ನು ಎದುರಿಸುವ ಅಭ್ಯಾಸ ಮಾಡಿಕೊಳ್ಳಬೇಕಿದೆ ಎಂದು ಗೋಷ್ಠಿಯ ಆಶಯ ನುಡಿಗಳನ್ನು ಆಡಿದ ಹೇಮಾ ಪಟ್ಟಣಶೆಟ್ಟಿ ನುಡಿದರು.
ಎಕ್ಸ್‌ವೈ ಕ್ರೋಮೋಸೋಮ್‌ಗಳು ಸೇರಿ ಗಂಡು ಮಗು ಹುಟ್ಟುತ್ತದೆ, ವೈ ಕ್ರೋಮೋಸೋಮ್ ಗಂಡಿನಿಂದಲೇ ಬರಬೇಕು ಎಂಬ ಸರಳ ವೈಜ್ಞಾನಿಕ ಸತ್ಯವನ್ನು ಅರ್ಥ ಮಾಡಿಕೊಳ್ಳದೆ ಹೆಣ್ಣು ಮಗುವಿನ ಹುಟ್ಟಿಗಾಗಿ ಹೆಣ್ಣನ್ನೇ ದೂರುತ್ತಾರೆ. ಆಧುನಿಕ ತಂತ್ರಜ್ಞಾನ ಕೂಡ ಭ್ರೂಣಹತ್ಯೆಗೆ ಕೊಡುಗೆ ನೀಡುತ್ತಿದೆ. ಕಟ್ಟುನಿಟ್ಟಾದ ಕಾನೂನು ಕೂಡ ಇದನ್ನು ಕಡಿಮೆ ಮಾಡಲು ಸಾಧ್ಯವಾಗದೆ ಹೋಗಿದೆ. ಮಂಡ್ಯದ ನೆಲದಲ್ಲೇ ನಡೆದ ಹೆಣ್ಣು ಭ್ರೂಣ ಹತ್ಯೆಯ ಹಗರಣವೇ ಇದಕ್ಕೆ ಉದಾಹರಣೆ ಎಂದು ʼಭ್ರೂಣಹತ್ಯೆʼಯ ಬಗ್ಗೆ ಸುಮತಿ ಜೆ. ನುಡಿದರು. ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗುವುದರಿಂದ ಅಪಹರಣ, ಲೈಂಗಿಕದೌರ್ಜನ್ಯ, ಬಾಲ್ಯವಿವಾಹ ಇತ್ಯಾದಿಗಳು ಹೆಚ್ಚಬಹುದು ಎಂದು ಅವರು ಎಚ್ಚರಿಸಿದರು.
ವರ್ತಮಾನದ ಎಲ್ಲ ಕ್ಷೇತ್ರಗಳಲ್ಲಿ ಹೆಣ್ಣಿನ ತಲ್ಲಣಗಳು ಮುಂದುವರಿದಿವೆ. ಸಿನಿಮಾ ಕಿರುತೆರೆಗಳಲ್ಲಿ ಹೆಣ್ಣನ್ನು ಶೋಷಿಸುವ ವಿಧಾನಗಳು ಹೆಚ್ಚಿವೆ. ಹೆಣ್ಣಾಳಿಗೂ ಗಂಡಾಳಿಗೂ ಕೂಲಿಯಲ್ಲಿ ತಾರತಮ್ಯ ಇದೆ. ಇದೇ ತಾರತಮ್ಯ ಐಟಿಯಲ್ಲಿ ಕೂಡ ಮುಂದುವರಿದಿದೆ. ಮಾತೃತ್ವ ರಜೆ ಕೊಡಬೇಕಾಗುತ್ತದೆ ಎಂಬ ಕಾರಣಕ್ಕಾಗಿಯೇ ಹೆಣ್ಣನ್ನು ನೇಮಕ ಮಾಡಿಕೊಳ್ಳುತ್ತಲೇ ಇಲ್ಲ ಎಂದು ʼವರ್ತಮಾನದ ತಲ್ಲಣಗಳುʼ ಕುರಿತು ಮಾತನಾಡಿದ ಶುಭಶ್ರೀ ಪ್ರಸಾದ್ ಹೇಳಿದರು.
ರಾಜಕೀಯದಲ್ಲಿ ನೆಪಮಾತ್ರಕ್ಕೆ ಸ್ಥಾನಮಾನವನ್ನು ಹೆಣ್ಣಿಗೆ ನೀಡಲಾಗುತ್ತಿದೆ. ವಹಿವಾಟುಗಳನ್ನು ಪತಿ ಅಥವಾ ಮಗ ನೋಡಿಕೊಳ್ಳುತ್ತಿರುತ್ತಾರೆ. ಹೆಣ್ಣು ರಬ್ಬರ್ ಸ್ಟಾಂಪ್ ಆಗಿದ್ದಾಳೆ. ಇನ್ನು ಧಾರ್ಮಿಕ ಕ್ಷೇತ್ರದಲ್ಲಿ ಹುಟ್ಟುಮುಟ್ಟುಗಳ ನೆಪದಲ್ಲಿ ಹೆಣ್ಣನ್ನು ದೂರವಿಡಲಾಗುತ್ತಿದೆ. ಹಿಜಾಬ್ ಹಾಕಿಕೊಂಡರೆ ಒಂದು ರೀತಿ, ಹಾಕಿಕೊಳ್ಳದೆ ಇದ್ದರೆ ಒಂದು ರೀತಿ ಕಟ್ಟುಪಾಡು ಮಾಡಿಕೊಂಡು ಶಿಕ್ಷಣ ಸಂಸ್ಥೆಗಳಲ್ಲಿ ಶೋಷಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣಿನ ದೇಹದ ಚಿತ್ರಗಳನ್ನು ಬಳಸಿಕೊಂಡು ಶೋಷಿಸುವುದು ಹೆಚ್ಚುತ್ತಿದೆ ಎಂದು ಅವರು ಬೇಸರಿಸಿದರು.
ಹೆಣ್ಣುಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ಭ್ರೂಣಹತ್ಯೆ ಸ್ತ್ರೀ ಸ್ವಾತಂತ್ರ್ಯ ಕುರಿತು ಮಾತಾಡಿದರೆ ಪುರುಷದ್ವೇಷಿ ಎಂದು ಅರ್ಥಮಾಡಿಕೊಳ್ಳಬಾರದು. ಇಂಥ ಸ್ತ್ರೀಯರಿಗೆ ಪುರುಷರು ಒತ್ತಾಸೆಯಾಗಿ ನಿಲ್ಲಬೇಕು. ಆಗ ನಮ್ಮ ಹೋರಾಟಕ್ಕೆ ಇನ್ನಷ್ಟು ಬಲ ತುಂಬುತ್ತದೆ ಎಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ನುಡಿದರು. ಹೆಣ್ಣುಮಕ್ಕಳು ಶೋಷಣೆಯನ್ನು ವಿರೋಧಿಸುವಾಗ ವಜ್ರದಷ್ಟು ಕಠಿಣವಾಗಿರಬೇಕು, ಹಾಗಿರುವ ಕಾನೂನನ್ನು ಸಂಪೂರ್ಣವಾಗಿ ತಿಳಿದುಕೊಂಡರೆ ದೌರ್ಜನ್ಯಗಳನ್ನು ಖಂಡಿತವಾಗಿಯೂ ಕಡಿಮೆ ಮಾಡಬಹುದು ಎಂದರು.
ಈ ಸುದ್ದಿಯನ್ನೂ ಓದಿ | Kannada Sahitya Sammelana: ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ; ಕಸಾಪ ಸಭೆಯಲ್ಲಿ ತೀರ್ಮಾನ