ಪ್ರಧಾನ ವೇದಿಕೆ (ಮಂಡ್ಯ): ಬೇರೆ ಭಾಷೆ ಹೇರುವಿಕೆಯಿಂದ ನಮ್ಮ ಭಾಷೆ ಮೇಲಾಗುತ್ತಿರುವ ಪರಿಣಾಮ ಕುರಿತು ನಾವೆಲ್ಲರೂ ಚಿಂತಿಸಬೇಕಾಗಿದೆ. ನಮ್ಮ ಸರ್ಕಾರಿ ಕನ್ನಡ ಶಾಲೆಗಳಿಗೆ (Kannada sahitya sammelana) ನಿರೀಕ್ಷೆಗೆ ತಕ್ಕಂತೆ ಪ್ರೋತ್ಸಾಹ ಕೊಡುವಲ್ಲಿ ನಾವು ವಿಫಲರಾಗಿದ್ದೇವೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುವುದು ಕಡಿಮೆ ಆಗುತ್ತಿರುವುದರಿಂದ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ಸಂಜೆ ಪ್ರಧಾನ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ನಮ್ಮ ನಾಡಿಗೆ, ಅದರಲ್ಲೂ ಗ್ರಾಮೀಣ ಪ್ರದೇಶದ ಯುವಸಮುದಾಯಕ್ಕೆ ಒಂದು ಸವಾಲಿದೆ. ಈ ವಿಶ್ವದಲ್ಲಿ ವೈಜ್ಞಾನಿಕ ಪ್ರಗತಿಯ ನಡುವೆ ನಮ್ಮ ಭಾಷೆ ಉಳಿಸಲು ಹೋರಾಟ ನಡೆಸಬೇಕಿದೆ. ಇದು ದೊಡ್ಡ ಸವಾಲು ಎಂಬುದು ನನ್ನ ಅಭಿಪ್ರಾಯ ಎಂದರು.
ನಮ್ಮ ಭಾಷೆ ಉಳಿಸಬೇಕಿದೆ, ಅದಕ್ಕಾಗಿ ಓದುವುದು ಸೂಕ್ತ. ಈಗಿನ ಸಿನಿಮಾಗಳನ್ನು ನೋಡಿದಾಗ ಸಮಾಜಕ್ಕೆ ನಾವು ಏನು ಕೊಡುತ್ತಿದ್ದೇವೆ ಎಂದು ಎನಿಸುತ್ತದೆ. ನಾಡು, ನುಡಿಗೆ ನಮ್ಮ ಕೈಲಾದ ಅಳಿಲು ಸೇವೆ ಮಾಡಬೇಕಿದೆ. 15 ವರ್ಷದ ನಿಮ್ಮ ಜೊತೆಯಲ್ಲಿ ಇರುತ್ತೇವೆ. ನೂರಕ್ಕೆ ನೂರರಷ್ಟು ಕೆಲಸ ಮಾಡುತ್ತೇವೆ. ಪಶ್ಚಿಯ ಬಂಗಾಳದ ಇಸ್ಕೋ, ಭದ್ರಾವತಿ ಕಬ್ಬಿಣ ಮತ್ತು ಕಾರ್ಖಾನೆ, ಎಚ್ಎಂಟಿ ಕಂಪನಿ ಪುನಶ್ಚೇತನಕ್ಕೆ 10 ರಿಂದ 15 ಸಾವಿರ ಕೋಟಿ ವೆಚ್ಚದ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಯುವಕರ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಸಮ್ಮೇಳನದ ನಿರ್ಣಯಗಳು ಜಾರಿ ಆಗಬೇಕು
ಸುಮ್ಮನೆ ಸಮ್ಮೇಳನ ಮಾಡದರೆ ಅದಕ್ಕೆ ಅರ್ಥ ಇಲ್ಲ. ಕೋಟಿ ಕೋಟಿ ವೆಚ್ಚ ಮಾಡಿ ಸಮ್ಮೇಳನ ಮಾಡಿದರೆ ಏನು ಪ್ರಯೋಜನ ? ಸಮ್ಮೇಳನದ ನಿರ್ಣಯಗಳು ಜಾರಿ ಆಗಬೇಕು. ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ತೀರಾ ಕಡಿಮೆ ಆಗಿದೆ. ಕನ್ನಡ ಎಂಬುದು ಬಳಕೆಯ ಭಾಷೆ ಆಗಬೇಕು. ಅನ್ನದ ಭಾಷೆ ಆಗಬೇಕು. ಕನ್ನಡ ಶಾಲೆಗಳು 1900 ಇವೆ. ಸುಧಾರಣೆ ಮಾಡುವ ಬಗ್ಗೆ ಯಾರಿಗೂ ಇಚ್ಛೆ ಇಲ್ಲ. ಶಿಕ್ಷಕರು ಪಾಠ ಮಾಡುವ ಬದಲಾಗಿ ಮೊಟ್ಟೆ, ಚಾಕಲೇಟ್, ಅಕ್ಕಿ ಲೆಕ್ಕ ಇಡುವ ಕೆಲಸ ಮಾಡುತ್ತಾರೆ. ಶಾಲೆಗಳನ್ನು ಮುಚ್ಚುವ ಬದಲಾಗಿ ಅವುಗಳನ್ನು ಸುಧಾರಿಸುವತ್ತ ಚಿಂತಿಸಬೇಕು ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Kannada Sahitya Sammelana: ಪ್ರತಿ ವರ್ಷ ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿ: ಲೇಖಕ ಕಿರಣ್ ಉಪಾಧ್ಯಾಯ