Friday, 20th December 2024

Kannada Sahitya Sammelana: ಸಾಹಿತ್ಯ ಸಮ್ಮೇಳನ; ನಾಳಿನ ʼಸಾಹಿತ್ಯದಲ್ಲಿ ರಾಜಕೀಯʼ ಗೋಷ್ಠಿಗೆ ಹೋಗ್ತಾರಾ ಸಿ.ಟಿ ರವಿ?

Kannada Sahitya Sammelana

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಧಾನ ಪರಿಷತ್‌ ಸದಸ್ಯ, ಬಿಜೆಪಿ ಮುಖಂಡ ಸಿ.ಟಿ ರವಿ (CT Ravi) ಅವರು ಭಾಗವಹಿಸಬೇಕಾಗಿದ್ದ ವಿಚಾರಗೋಷ್ಠಿಯೊಂದನ್ನು ಶನಿವಾರ (ಡಿ.21) ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ರವಿ ಅವರೂ ವಿಚಾರ ಮಂಡನೆ ಮಾಡುವ ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪದಲ್ಲಿ ಬಂಧನವಾಗಿದ್ದ ಹಿನ್ನೆಲೆ ಅವರ ಉಪಸ್ಥಿತಿ ಅನುಮಾನ ಎನ್ನಲಾಗಿತ್ತು. ಈ ನಡುವೆ ಸಿ.ಟಿ.ರವಿ ಅವರ ಬಿಡುಗಡೆಗೆ ಹೈಕೋರ್ಟ್‌ ಆದೇಶ ಹೊರಡಿಸಿದೆ. ಆದರೆ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಸಿ.ಟಿ.ರವಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಅವರು ಕಾರ್ಯಕ್ರಮಕ್ಕೆ (Kannada Sahitya Sammelana) ಹಾಜರಾಗ್ತಾರೋ, ಇಲ್ಲವೋ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಮಂಡ್ಯದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ʼಸಾಹಿತ್ಯದಲ್ಲಿ ರಾಜಕೀಯ, ರಾಜಕೀಯದಲ್ಲಿ ಸಾಹಿತ್ಯʼ ಎಂಬ ಹೆಸರಿನ ಗೋಷ್ಠಿಯೊಂದನ್ನು ಇಟ್ಟುಕೊಳ್ಳಲಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ಹೊಸ ವಿಷಯಗಳನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ಇದನ್ನು ಇಟ್ಟುಕೊಳ್ಳಲಾಗಿದೆ. ಈ ಗೋಷ್ಠಿಯಲ್ಲಿ ʼರಾಜಕೀಯ ಚಿಂತಕʼರಾದ ಸಿ.ಟಿ ರವಿ ಅವರು ʼಸಾಹಿತ್ಯ ಕೇಂದ್ರಿತವಾದ ಸೈದ್ಧಾಂತಿಕ- ರಾಜಕೀಯ ನಿಲುವುಗಳುʼ ಎಂಬ ವಿಷಯದಲ್ಲಿ ಭಾಷಣ ಮಾಡಬೇಕಿದೆ. ಈ ಗೋಷ್ಠಿಗೆ ಎಚ್‌.ಕೆ ಪಾಟೀಲ ಅಧ್ಯಕ್ಷರಾಗಿದ್ದು, ಬಿ.ಎಲ್‌ ಶಂಕರ್‌, ಕೆ.ಅನ್ನದಾನಿ, ರವೀಂದ್ರ ರೇಷ್ಮೆ ವಿಷಯ ಭಾಷಣ ಮಾಡಲಿದ್ದಾರೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧದ ಹೇಳಿಕೆ ವಿಚಾರದಲ್ಲಿ ಸಿ.ಟಿ. ರವಿ ಅವರು ಬಂಧನಕ್ಕೆ ಒಳಗಾಗಿದ್ದರು. ಅವರನ್ನು ಪೊಲೀಸರು ಬೆಳಗಾವಿಯ 5ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ನ್ಯಾಯಾಧೀಶೆ ಸ್ಪರ್ಶಾ ಡಿಸೋಜಾ ನೇತೃತ್ವದಲ್ಲಿ ವಿಚಾರಣೆ ನಡೆದಿತ್ತು. ನಂತರ ಬೇಲ್ ಅರ್ಜಿ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್​ಗೆ ವರ್ಗಾವಣೆ ಮಾಡಲಾಗಿತ್ತು.

ಬೆಂಗಳೂರಿನ ಸಿಸಿಎಚ್ 82ನೇ ಕೋರ್ಟ್​ಗೆ ಪ್ರಕರಣ ವರ್ಗಾವಣೆಯಾಗಿದೆ. ಟ್ರಾನ್ಸಿಟ್‌ ವಾರಂಟ್ ನೀಡುವ ಮೂಲಕ ಆದೇಶ ನೀಡಲಾಗಿದೆ. ಘನತೆ, ಗೌರವದಿಂದ ಆರೋಪಿಯನ್ನು ಕರೆದುಕೊಂಡು ಹೋಗಬೇಕು. 24 ಗಂಟೆಯೊಳಗೆ ಬೆಂಗಳೂರಿನ ಕೋರ್ಟ್ ಹಾಜರು ಪಡಿಸಬೇಕು ಎಂದು ಸೂಚನೆ ನೀಡಲಾಗಿತ್ತು. ಹೀಗಾಗಿ ಪೊಲೀಸರು ಬೆಳಗಾವಿಯಿಂದ ಬೆಂಗಳೂರಿನತ್ತ ಸಿಟಿ ರವಿಯನ್ನು ಕರೆದುಕೊಂಡು ಬರುತ್ತಿದ್ದ ನಡುವೆ ಇದು ಸಂಜೆ ಸಿ.ಟಿ.ರವಿ ಅವರ ಬಿಡುಗಡೆಗೆ ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದೆ.

ನಾಳೆ ಬೆಳಗ್ಗೆ 11 ಗಂಟೆಗೆ ಗೋಷ್ಠಿ ಇದೆ. ಇದೀಗ ಸಿ.ಟಿ.ರವಿ ಅವರ ಬಿಡುಗಡೆಗೆ ಹೈಕೋರ್ಟ್‌ ಆದೇಶ ನೀಡಿದ ಕಾರಣ ರವಿ ಅವರು ಗೋಷ್ಠಿಗೆ ಹಾಜರಾಗಲೂಬಹುದು. ಆದರೆ ರವಿ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಸಾಕಷ್ಟು ಆಕ್ರೋಶ ಇದೆ. ಅದು ಸಮ್ಮೇಳನದ ಅಂಗಣದಲ್ಲೂ ಪ್ರತಿಫಲನಗೊಳ್ಳಬಹುದು. ಹೀಗಾಗಿ ಅವರು ಹೋಗದಿರುವ ಸಾಧ್ಯತೆಯೇ ಅಧಿಕ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ | Kannada Sahitya Sammelana: ಸಾಹಿತ್ಯ ಸಮ್ಮೇಳನ ಮೆರವಣಿಗೆ ಉದ್ಘಾಟನೆಗೆ ಪ್ರಮೋದಾದೇವಿ ಒಡೆಯರ್‌ ಗೈರು