ಬೆಂಗಳೂರು: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಾಧಿಪತಿ (Chancellor) ಸ್ಥಾನವನ್ನು ರಾಜ್ಯಪಾಲರಿಂದ (Governor) ಹಿಂಪಡೆದು ಸಿಎಂಗೆ (Chief minister) ನೀಡುವ ವಿಧೇಯಕ ರೂಪಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ (Karnataka Cabinet) ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಒಟ್ಟು 8 ವಿಧೇಯಕಗಳನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆಯಲು ನಿರ್ಧರಿಸಿದ್ದು, ಇದರಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ-2024ಕ್ಕೆ ಸಹ ಸರ್ಕಾರ ಅಂಗೀಕಾರ ಪಡೆದಿದೆ. ಇದರಡಿ ವಿಧೇಯಕದ ತಿದ್ದುಪಡಿ ಮೂಲಕ ಗದಗದ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಕುಲಾಧಿಪತಿಗಳನ್ನಾಗಿ ರಾಜ್ಯಪಾಲರ ಬದಲಿಗೆ ಸಿಎಂ ನೇಮಿಸಲು ತೀರ್ಮಾನಿಸಲಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ ಉಭಯ ಸದನಗಳಲ್ಲಿ ಅಂಗೀಕಾರ ಪಡೆಯಲಿದ್ದು, ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳುಹಿಸಲಾಗುವುದು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಮತ್ತಷ್ಟು ಸಕ್ರಿಯವಾಗಿ ವಿಶ್ವವಿದ್ಯಾಲಯವನ್ನು ಮುನ್ನಡೆಸಲು ಈ ತೀರ್ಮಾನ ಮಾಡಲಾಗಿದೆ. ಗುಜರಾತ್‌ನಲ್ಲೂ ಈ ಮಾದರಿ ಅನುಸರಿಸಲಾಗಿದೆ. ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ. ಇನ್ನು ಮುಂದೆ ಕುಲಾಧಿಪತಿಗಳ ಎಲ್ಲಾ ನಿರ್ಣಯಗಳನ್ನು ರಾಜ್ಯಪಾಲರ ಬದಲಾಗಿ ಸಿಎಂ ನಿರ್ವಹಿಸುತ್ತಾರೆ ಎಂದರು.
ಈ ವಿಧೇಯಕಕ್ಕೂ ರಾಜ್ಯಪಾಲರ ಅಂಗೀಕಾರ ಬೇಕೆ? ಎಂಬ ಪ್ರಶ್ನೆಗೆ, ಯಾವುದೇ ವಿಧೇಯಕ ಮಂಡಿಸಿದರೂ ರಾಜ್ಯಪಾಲರ ಅಂಗೀಕಾರ ಬೇಕು. ಇದನ್ನೂ ಅಂಗೀಕಾರಕ್ಕೆ ಕಳುಹಿಸುತ್ತೇವೆ. ಮುಂದೆ ನೋಡೋಣ ಎಂದು ಉತ್ತರಿಸಿದರು.
ಚಾಣಕ್ಯ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ-2024 ಮಂಡನೆಗೂ ನಿರ್ಧಾರ ಮಾಡಲಾಗಿದೆ. ಈವರೆಗೆ ಎಲ್ಲಾ ಖಾಸಗಿ ವಿಶ್ವವಿದ್ಯಾಲಯಗಳಿಗೆ ಸರ್ಕಾರದ ಪ್ರತಿನಿಧಿ ಒಬ್ಬರನ್ನು ನೇಮಕ ಮಾಡಲಾಗುತ್ತಿತ್ತು. ಆದರೆ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಇದರಿಂದ ವಿನಾಯಿತಿ ನೀಡಲಾಗಿತ್ತು. ಇದನ್ನು ತಿದ್ದುಪಡಿ ಮಾಡಿ ಚಾಣಕ್ಯ ವಿವಿಗೂ ಸರ್ಕಾರದ ಪ್ರತಿನಿಧಿ ನೇಮಿಸಲು ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಕಾರ್ಮಿಕ ಕಲ್ಯಾಣ ನಿಧಿಗೆ ಸಂಗ್ರಹಿಸಲಾಗುತ್ತಿರುವ ವಂತಿಗೆಯನ್ನು ಹೆಚ್ಚಿಸುವ ಸಂಬಂಧ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ 2024ನ್ನು ಮಂಡಿಸಲು ನಿರ್ಧರಿಸಲಾಗಿದೆ. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಕಾರ್ಮಿಕ ಕಲ್ಯಾಣ ನಿಧಿಗೆ ಪ್ರತಿ ಕಾರ್ಮಿಕರಿಂದ ವಾರ್ಷಿಕ 420, ಮಾಲೀಕರಿಂದ ೬ 40 ಹಾಗೂ ಸರ್ಕಾರದಿಂದ 20 ವಂತಿಗೆ ನೀಡಲಾಗುತ್ತಿತ್ತು. ಅದನ್ನು ಹೆಚ್ಚಿಸಿ ಕಾರ್ಮಿಕರಿಂದ ಮತ್ತು ಸರ್ಕಾರದಿಂದ ತಲಾ 250 ಹಾಗೂ ಮಾಲೀಕರಿಂದ 100 ಸಂಗ್ರಹಿಸುವ ಕುರಿತು ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ವಿಧೇಯಕಕ್ಕೆ ತಿದ್ದುಪಡಿ ತರಲಾಗುತ್ತಿದ್ದು, ಅದನ್ನು ಅಧಿವೇಶನದಲ್ಲಿ ಮಂಡಿಸಲಾಗುತ್ತಿದೆ. ಈ ತಿದ್ದುಪಡಿಯಿಂದ ಸರ್ಕಾರಕ್ಕೆ ₹15.81 ಕೋಟಿ ಹೆಚ್ಚುವರಿ ವೆಚ್ಚವಾಗಲಿದ್ದು, ಕಲ್ಯಾಣ ನಿಧಿ ಸಂಗ್ರಹ 200 ಕೋಟಿಗಳಷ್ಟಾಗಲಿದೆ ಎಂದು ಸಚಿವ ಎಚ್. ಪಾಟೀಲ್ ತಿಳಿಸಿದ್ದಾರೆ.