Sunday, 5th January 2025

Cabinet Meeting: ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯ ಮುಖ್ಯಾಂಶಗಳು!

Karnataka: Highlights of the cabinet meeting led by Karnataka Chief Minister Siddaramaiah

ಬೆಂಗಳೂರು: ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅಂದ ಹಾಗೆ ಬಜೆಟ್ ಮಂಡನೆ ದಿನಾಂಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸಲಿದ್ದಾರೆ ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಭಾರತ ಸರ್ಕಾರದ ಆರ್ಥಿಕ ಸಚಿವಾಲಯವು ವಿಶೇಷ ಬಂಡವಾಳ ನೆರವಿನ ಯೋಜನೆಯ ಭಾಗ 7ರ (ಎ) ಅಡಿಯಲ್ಲಿ ಕರ್ನಾಟಕದ ರಾಜ್ಯಕ್ಕೆ ಬಂಡವಾಳ ವೆಚ್ಚಕ್ಕಾಗಿ ದೀರ್ಘಾವಧಿ ಸಾಲದ ರೂಪದಲ್ಲಿ ನೀಡಿರುವ 137.85 ಕೋಟಿಗಳ ಅನುದಾನವನ್ನು ವಿನಿಯೋಗಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, ಸಾಮರ್ಥ್ಯ ಹಾಗೂ ವಿಶ್ವಾಸಾರ್ಹತೆಯ ಹಿನ್ನೆಲೆಯಲ್ಲಿ ಸಾಲವನ್ನು ಪಡೆಯಲಾಗಿದೆ. ಜನಕಲ್ಯಾಣದ ಜೊತೆಗೆ ಅಭಿವೃದ್ದಿ ನಮ್ಮ ಗಮನದಲ್ಲಿದೆ ಹಾಗೂ ಹೊರೆಯನ್ನು ಸರಿದೂಗಿಸುವ ವ್ಯವಹಾರಿಕತೆಯ ಹಿನ್ನೆಲೆಯಲ್ಲಿ ಅನುಮೋದನೆ ನೀಡಲಾಗಿದೆ,” ಎಂದು ಹೇಳಿದ್ದಾರೆ.

ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆಯವರು ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಅಧಿವೇಶನವನ್ನು ಸಮಾಪನಗೊಳಿಸುವ ಬಗ್ಗೆ ರಾಜ್ಯ ಸಚಿವ ಸಂಪುಟ ಎಂದು ನಿರ್ಣಯ ತೆಗೆದುಕೊಂಡಿದೆ.

ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯವರು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ 2022-23 23ನೇ ಸಾಲಿನ ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳ ಇದ್ದಂತಹ 56 ಕೋಟಿ 92ಲಕ್ಷ ರೂಪಾಯಿಗಳ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ವಸತಿ ಶಾಲೆಗಳ ಹಾಗೂ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಬೆಡ್ ಶೀಟ್ ಸೊಳ್ಳೆ ಪರದೆಗಳು ಟ್ರ್ಯಾಕ್ ಸೂಟ್ ಮತ್ತು ನೈಟ್ ಡ್ರೆಸ್ ಗಳ ಸಾಮಗ್ರಿಗಳನ್ನು ಪೂರೈಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಪಶು ವೈದ್ಯ ಸಂಸ್ಥೆಗಳಿಗೆ ನೂತನ ಕಟ್ಟಡ ನಿರ್ಮಾಣ

ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ಆಯವ್ಯಯದಲ್ಲಿ ಘೋಷಣೆಯಾಗಿರುವಂತೆ ಬಾಡಿಗೆ ಮತ್ತು ಶಿಥಿಲಾವಸ್ಥೆಯಲ್ಲಿ ಇರುವಂತಹ 200 ಪಶು ವೈದ್ಯ ಸಂಸ್ಥೆಗಳ ನೂತನ ಕಟ್ಟಡಗಳ ನಿರ್ಮಾಣಕ್ಕಾಗಿ ನಬಾರ್ಡ್ ಅನುದಾನದೊಂದಿಗೆ ನೂರು ಕೋಟಿ ರೂಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಕಾನೂನು ಮಾಪನ ಶಾಸನ ಇಲಾಖೆ 2024-25ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಜ್ಯದ ರೈತರಿಂದ ಭತ್ತ ಮತ್ತು ಬಿಳಿ ಜೋಳ ಖರೀದಿಸಲು ಅವಶ್ಯವಿರುವಂತಹ 580 ಗ್ರಾಂ ತೂಕದ 15 ಲಕ್ಷ ಸೆಣಬಿನ ಗೋಣಿ ಚೀಲಗಳನ್ನು 10 ಕೋಟಿ 88 ಲಕ್ಷ ರೂ ಗಳ ಅಂದಾಜು ವೆಚ್ಚದಲ್ಲಿ ಖರೀದಿಸಲು ಅನುಮೋದನೆ ನೀಡಿದೆ. ಅಲ್ಲದೆ ಆವರ್ತಕ ನಿಧಿ ಅಡಿಯಲ್ಲಿ ರಾಗಿಯನ್ನು ಖರೀದಿಸಲು ಅವಶ್ಯವಿರುವಂತಹ 775 ಗ್ರಾಂ ತೂಕದ 74.82 ಲಕ್ಷ ಸೆಣಬಿನ ಗೋಣಿ ಚೀಲಗಳನ್ನು ಜೆಮ್ ಪೋರ್ಟಲ್ ಮೂಲಕ ಖರೀದಿಸಲು ಕೂಡ ಅನುಮೋದನೆಯನ್ನು ನೀಡಿದೆ.

ಬಂದರು ನಿರ್ಮಾಣಕ್ಕೆ ಅನುಮೋದನೆ

ಕೇಂದ್ರ ಪುರಸ್ಕೃತ ಯೋಜನೆಯಡಿ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿನ ಮೀನುಗಾರಿಕೆ ಬಂದರು ನಿರ್ಮಾಣ ಕಾಮಗಾರಿಯ 209.13 ಕೋಟಿ ರೂ.ಗಳ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕೇಂದ್ರ ಪುರಸ್ಕೃತ ಯೋಜನೆಯಡಿ ಹಾಲಿ ಇರುವ ಮೀನುಗಾರಿಕೆ ಬಂದರುಗಳ ಆಧುನೀಕರಣ ಹಾಗೂ ಮೀನುಗಾರಿಕೆ ಬಂದರು ಮತ್ತು ಇಳಿದಾಣ ಕೇಂದ್ರಗಳಲ್ಲಿ ನಿರ್ವಹಣಾ ಹೂಳೆತ್ತುವಿಕೆಯ ಕಾಮಗಾರಿಗಳಿಗೆ 84.57 ಕೋಟಿ ರೂ.ಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಕೆಐಡಿಬಿ ಸಾಲದ ಮಿತಿ 5000 ಕೋಟಿ ರೂ. ಹೆಚ್ಚಳ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲದ ಮಿತಿ ಪ್ರಸ್ತುತ ರೂ. 500 ಕೋಟಿ ಗಳಿದ್ದು, ಅದನ್ನು ರೂ. 5000 ಕೋಟಿ ರೂ. ಗಳಿಗೆ ಹೆಚ್ಚಿಸಲು ಅನುಮೋದನೆ ನೀಡಲಾಗಿದೆ.

ಚಿಂತಾಮಣಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ವಡಗನಹಳ್ಳಿ ಗ್ರಾಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಟ್ಟಡ ಕಾಮಗಾರಿಗಳಿಗೆ 149.75 ಕೋಟಿ ರೂ ಗಳ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇನ್ನು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಾಯಕ ವಿದ್ಯಾರ್ಥಿ ನಿಲಯಕ್ಕೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ 523.99 ಚ.ಮೀ ವಿಸ್ತೀರ್ಣದ ನಾಗರಿಕ ಸೌಲಭ್ಯ ನಿವೇಶವನ್ನು ರಿಯಾಯಿತಿ ದರದಲ್ಲಿ ಮಂಜೂರು ಮಾಡಲಾಗಿದೆ.

ಈ ಸುದ್ದಿಯನ್ನು ಓದಿ: Cabinet Meeting: ಬಸ್‌ ಪ್ರಯಾಣಿಕರಿಗೆ ಶಾಕ್‌! ಟಿಕೆಟ್‌ ದರ ಶೇ.15ರಷ್ಟು ಹೆಚ್ಚಳ