Friday, 8th November 2024

Karnataka Population: ಕರ್ನಾಟಕದ 25% ಜನ ಬೆಂಗಳೂರಿನಲ್ಲಿ! ಮ್ಯಾಪ್‌ ನೋಡಿ ರಾಜಧಾನಿಗರಿಗೆ ಗಾಬರಿ!

karnataka population

ಬೆಂಗಳೂರು: ಕರ್ನಾಟಕದ ಜನಸಂಖ್ಯೆಯ (Karnataka Population) ಸುಮಾರು ಕಾಲು ಭಾಗದಷ್ಟು ಜನರು ಬೆಂಗಳೂರು ಮೆಟ್ರೋಪಾಲಿಟನ್ (Bengaluru Metropolitan) ಪ್ರದೇಶದಲ್ಲಿ ವಾಸಿಸುತ್ತಿದ್ದಾರಂತೆ. ರಾಜ್ಯದ ಜನಸಾಂದ್ರತೆ ಎಲ್ಲೆಲ್ಲೆ ಎಷ್ಟೆಷ್ಟಿದೆ ಎಂದು ವಿವರಿಸುವ ನಕ್ಷೆಯೊಂದು ಇಂಟರ್‌ನೆಟ್‌ನಲ್ಲಿ (Viral news) ಸುತ್ತು ಹಾಕುತ್ತಿದೆ. ಇದನ್ನು ನೋಡಿ ಬೆಂಗಳೂರಿಗರು ಗಾಬರಿಯಾಗಿದ್ದಾರೆ.

ಬೆಂಗಳೂರು ಭಾರತದ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಎಂದು ಈಗಾಗಲೇ ರ್ಯಾಂಕಿಂಗ್‌ ದೊರೆತಿದೆ. ಈ ಮಾಹಿತಿ, ಮೆಟ್ರೋ ನಗರ ಬೆಂಗಳೂರಿನ ಮೇಲಿರುವ ಒತ್ತಡವನ್ನು ನಿವಾರಿಸಲು ರಾಜ್ಯದಲ್ಲಿ ಇನ್ನಷ್ಟು ಎರಡನೇ, ಮೂರನೇ ಹಂತದ ನಗರಗಳ ಅಗತ್ಯದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ಜೊತೆಗೆ, ಮ್ಯಾಪ್ಸ್ ಡೈಲಿ ಸಾಮಾಜಿಕ ಮಾಧ್ಯಮ ಪುಟದ ಮಾಲೀಕರಾದ ಸಿದ್ಧಾರ್ಥ್ ಪೇಟಾರೆ ಅವರು ಈ ನಕ್ಷೆಯನ್ನು ಹಂಚಿಕೊಂಡಿದ್ದಾರೆ.

ಹೊಸದಾಗಿ ಬಿಡುಗಡೆಗೊಳಿಸಲಾದ ಜನಸಂಖ್ಯಾ ಸಾಂದ್ರತೆಯ ನಕ್ಷೆಯು ರಾಜ್ಯದ ಜನಸಂಖ್ಯೆಯ 25 ಪ್ರತಿಶತ ಜನ ವಾಸಿಸುವ ಬೆಂಗಳೂರನ್ನು ದಟ್ಟವಾಗಿ ತೋರಿಸಿದೆ. ಮೈಸೂರು, ಹುಬ್ಬಳ್ಳಿ, ಬೆಳಗಾವಿ ಮತ್ತು ಮಂಗಳೂರಿನಂತಹ ನಗರಗಳು ಗಮನಾರ್ಹ ಜನಸಂಖ್ಯೆಯನ್ನು ಹೊಂದಿವೆ. ವಿಶೇಷವಾಗಿ ಪಶ್ಚಿಮ ಘಟ್ಟಗಳು ಮತ್ತು ಮಲೆನಾಡು ವಿರಳ ಜನಸಂಖ್ಯೆಯನ್ನು ಹೊಂದಿವೆ.

“ಆಸಕ್ತಿದಾಯಕ ನಕ್ಷೆ. ಕರ್ನಾಟಕದ ಶೇಕಡಾ 25ರಷ್ಟು ಜನರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಬೆಂಗಳೂರು, ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲದೆ, ದಾವಣಗೆರೆ-ಶಿವಮೊಗ್ಗ, ಹುಬ್ಬಳ್ಳಿ-ಬೆಳಗಾವಿ, ಮಂಗಳೂರು, ಬಳ್ಳಾರಿ, ರಾಯಚೂರು, ಕಲ್ಬುರ್ಗಿ ಮತ್ತು ಬೀದರ್ ಗಮನಾರ್ಹ ಜನಸಂಖ್ಯೆ ಹೊಂದಿರುವ ಇತರ ಪ್ರಮುಖ ಸ್ಥಳಗಳಾಗಿವೆ. ಪಶ್ಚಿಮ ಕರ್ನಾಟಕದ ಸರಳ ಗ್ರಾಫ್ ನೋಡಿ. ಉತ್ತರ ಕನ್ನಡದಿಂದ ಕೊಡಗಿನವರೆಗೆ ಇಡೀ ಕರಾವಳಿ ಮತ್ತು ಮಲೆನಾಡಿನ ದೊಡ್ಡ ಭಾಗದಲ್ಲಿ, ಮಂಗಳೂರು ಮಾತ್ರ ಪ್ರಮುಖ ನಗರ ಕೇಂದ್ರವಾಗಿ ಎದ್ದು ಕಾಣುತ್ತದೆ. ಪರಿಸರ ಒಂದು ಕಾರಣವಾದರೆ ರಾಜಕೀಯ ಕಡೆಗಣನೆ ಇನ್ನೊಂದು ಕಾರಣ. ಮಂಗಳೂರು, ದಾವಣಗೆರೆ, ಹುಬ್ಬಳ್ಳಿ, ಕಲ್ಬುರ್ಗಿಯಲ್ಲಿ ಹೆಚ್ಚಿನ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ಅಗತ್ಯವಿದೆ. ಇದರಿಂದ ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಳ್ಳಬಹುದು. ಮತ್ತು ಬೆಂಗಳೂರಿನ ಮೇಲಿನ ಹೊರೆಯನ್ನು ಕಡಿಮೆ ಮಾಡಬಹುದು” ಎಂದು ಮ್ಯಾಪ್‌ಗೆ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

“ಕರ್ನಾಟಕಕ್ಕೆ ಹೆಚ್ಚಿನ ನಗರಗಳ ಅಗತ್ಯವಿದೆ. ಅಗ್ಗದ ಭೂಮಿ ಸಿಗುವ ಪಟ್ಟಣಗಳ ಅಗತ್ಯವಿದೆ. ಕರಾವಳಿ ಕರ್ನಾಟಕ ಉತ್ತಮ ಆಯ್ಕೆ. ಇನ್ನಷ್ಟು ಅಭಿವೃದ್ಧಿಯು ಮಂಗಳೂರನ್ನು ಬೆಂಗಳೂರಿನಂತೆ ಅಸ್ತವ್ಯಸ್ತಗೊಳಿಸಬಹುದು. ಮಂಗಳೂರು ಈಗಾಗಲೇ ಲಾಂಗ್‌ ವೀಕೆಂಡ್‌ಗಳಲ್ಲಿ ಉಸಿರುಗಟ್ಟಿಸುತ್ತಿದೆ. ಮಲೆನಾಡು ಮತ್ತು ಉತ್ತರ ಕನ್ನಡಕ್ಕೂ ಇದೇ ಆಗುತ್ತದೆ. ಈ ಸ್ಥಳಗಳು ಬೆಂಗಳೂರಿನ ಗತಿ ಪಡೆಯಬಾರದು” ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ.

ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ ಪ್ರಕಾರ, ಬೆಂಗಳೂರಿನ ಜನಸಂಖ್ಯೆಯು 2024ರಲ್ಲಿ 14,008,300 ಎಂದು ಅಂದಾಜಿಸಲಾಗಿದೆ. ನಗರದ ಜನಸಂಖ್ಯೆಯು 1950ರಲ್ಲಿ ಕೇವಲ 745,999 ಆಗಿತ್ತು. ಇದು ಕೆಲವೇ ದಶಕಗಳಲ್ಲಿ ಆದ ವಿಪರೀತ ಬೆಳವಣಿಗೆ. ಇದಲ್ಲದೆ, ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ, ನಗರದ ಜನಸಂಖ್ಯೆಯು 2025ರ ವೇಳೆಗೆ 1.8 ಕೋಟಿ ತಲುಪಬಹುದು ಎಂದು ಅಂದಾಜಿಸಿದೆ.

ಇದನ್ನೂ ಓದಿ: ED Raids: ಅಮೆಜಾನ್, ಫ್ಲಿಪ್‌ಕಾರ್ಟ್‌ ಮಾರಾಟಗಾರರ ಮೇಲೆ ಇಡಿ ದಾಳಿ; ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಶೋಧ