ಧಾರವಾಡ: ಕೆಎಎಸ್ ಪೂರ್ವಭಾವಿ ಮರು ಪರೀಕ್ಷೆ (KAS Exam) ನಡೆಸಲು ಕರ್ನಾಟಕ ಲೋಕಸೇವಾ ಆಯೋಗದ ಆದೇಶಕ್ಕೆ ನೀಡಿದ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಲಾಗಿದ್ದು, ಇದರಿಂದಾಗಿ ಡಿ. 29ರಂದು ನಿಗದಿಯಾಗಿರುವಂತೆ ಮರು ಪರೀಕ್ಷೆ ನಡೆಸಲು ಕೆಪಿಎಸ್‌ಸಿ ಹಾದಿ ಸುಗಮವಾಗಿದೆ.
ಧಾರವಾಡದ ಹೈಕೋರ್ಟ್ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯರೂರ ಅವರಿದ್ದ ಏಕ ಸದಸ್ಯ ಪೀಠ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಿದೆ. ಈ ಕುರಿತಾಗಿ ಅರ್ಜಿದಾರರು ಬಯಸಿದರೆ ಕರ್ನಾಟಕ ಆಡಳಿತಾತ್ಮಕ ಮಂಡಳಿ(ಕೆಎಟಿ) ಮೊರೆ ಹೋಗಬಹುದು ಎಂದು ಅಭಿಪ್ರಾಯಪಟ್ಟಿದೆ.
2023- 24ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಗಸ್ಟ್ 27ರಂದು ಪೂರ್ವಭಾವಿ ಪರೀಕ್ಷೆ (KAS Prelims) ನಡೆಸಲಾಗಿತ್ತು. ಕನ್ನಡ ಪ್ರಶ್ನೆ ಪತ್ರಿಕೆಯ ಭಾಷಾಂತರದಲ್ಲಿ ಹಲವು ಲೋಪದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮರು ಪರೀಕ್ಷೆಗೆ ಅಭ್ಯರ್ಥಿಗಳು ಸಿಎಂಗೆ ಮನವಿ ಮಾಡಿದ್ದರು. ನಂತರ ಮರು ಪರೀಕ್ಷೆಗೆ ಸಿಎಂ ಆದೇಶಿಸಿದ್ದರು.
ಡಿಸೆಂಬರ್ 29ರಂದು ಕೆಪಿಎಸ್‌ಸಿ ಮರು ಪರೀಕ್ಷೆಗೆ ದಿನಾಂಕ ನಿಗದಿ ಮಾಡಿದ್ದು, ಆದರೆ ಪರೀಕ್ಷೆಯನ್ನು ಹೊಸದಾಗಿ ನಡೆಸುವ ಆದೇಶ ಸರಿಯಲ್ಲ ಎಂದು ಬೆಳಗಾವಿಯ ಸ್ಫೂರ್ತಿ ಭೈರಪ್ಪನವರ ಸೇರಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ ಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಇದೀಗ ತಡೆಯಾಜ್ಞೆ ತೆರವುಗೊಂಡಿದ್ದು, ಡಿಸೆಂಬರ್ 29 ರಂದು ಮರು ಪರೀಕ್ಷೆ ನಡೆಯಲಿದೆ.
ಈ ಸುದ್ದಿಯನ್ನೂ ಓದಿ | One Nation One Election : ಸೋಮವಾರವೇ ಲೋಕಸಭೆಯಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಮಂಡನೆ?
ಹೈಕೋರ್ಟ್ ಧಾರವಾಡ ಪೀಠ ತಡೆಯಾಜ್ಞೆ ತೆರವು ಮಾಡಿದ್ದರಿಂದ ಡಿ.29ಕ್ಕೆ ಕೆಎಎಸ್ ಪೂರ್ವಭಾವಿ ಮರು ಪರೀಕ್ಷೆ ನಡೆಯುವುದು ಬಹುತೇಕ ಖಚಿತವಾಗಿದೆ. ಆದರೆ. ಪರೀಕ್ಷೆಗೆ ತಡೆಕೋರಿ ಸಲ್ಲಿಸಿದ್ದ ಮತ್ತೊಂದು ಅರ್ಜಿಯ ವಿಚಾರಣೆ ಡಿ.19ರಂದು ಬೆಂಗಳೂರಿನ ಹೈಕೋರ್ಟ್ ಪೀಠದಲ್ಲಿ ನಡೆಯಬೇಕಿದೆ. ಸುನಿಲ್ ಕುಮಾರ್ .ಕೆ ಎಂಬುವವರು ರಿಟ್ ಅರ್ಜಿ ಸಲ್ಲಿಸಿದ್ದು, ಈ ಪ್ರಕರಣದಲ್ಲಿ ತಡೆಯಾಜ್ಞೆ ನೀಡದಿದ್ದಲ್ಲಿ ನಿಗದಿಯಂತೆ ಕೆಎಎಸ್ ಪ್ರಿಲಿಮ್ಸ್ ಮರುಪರೀಕ್ಷೆ ನಡೆಯಲಿದೆ.
2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ದಿನಾಂಕ 26-2-2024 ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಸದರಿ ಕೆಎಎಸ್ ಹುದ್ದೆಗಳಿಗೆ ಪೂರ್ವಭಾವಿ ಮರುಪರೀಕ್ಷೆಯನ್ನು ಡಿ. 29ರಂದು ನಡೆಸಲು ನಿಗದಿಪಡಿಸಿದೆ.