ಬೆಂಗಳೂರು: 2023-24ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ ಗ್ರೂಪ್ ʼಎʼ ಮತ್ತು ʼಬಿʼ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಡಿ.29ರಂದು ಭಾನುವಾರ ನಿಗದಿಯಾಗಿರುವ ಪೂರ್ವಭಾವಿ ಮರು ಪರೀಕ್ಷೆಯ ಪ್ರವೇಶ ಪತ್ರವನ್ನು ಕರ್ನಾಟಕ ಲೋಕಸೇವಾ ಆಯೋಗವು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಹಾಲ್ ಟಿಕೆಟ್ (Hall Ticket) ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಈಗಾಗಲೇ ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಕೆಎಎಸ್ ಪ್ರಿಲಿಮ್ಸ್ ಮರು ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಡಿ.29ರಂದು ಬೆಳಗ್ಗೆ 10ರಿಂದ 12 ಗಂಟೆವರೆಗೆ ಪತ್ರಿಕೆ-1 ಮತ್ತು ಮಧ್ಯಾಹ್ನ 2ರಿಂದ 4ಗಂಟೆವರೆಗೆ ಪತ್ರಿಕೆ-2ರ ಪರೀಕ್ಷೆ ನಡೆಯಲಿದೆ.
ಭಾಷಾಂತರ ದೋಷದಿಂದಾಗಿ ರದ್ದುಗೊಳಿಸಲಾಗಿದ್ದ ಕೆಎಎಸ್ ಹುದ್ದೆಗಳ ಪರೀಕ್ಷೆಯನ್ನು ಡಿಸೆಂಬರ್ 29ರಂದು ಮರುನಿಗದಿಪಡಿಸಲಾಗಿದೆ. ಒಟ್ಟು 384 ಹುದ್ದೆಗಳ ನೇಮಕಾತಿಗೆ ಈ ಪರೀಕ್ಷೆ ನಡೆಯಲಿದೆ. ಇದೀಗ ಈ ಪರೀಕ್ಷೆಯ ಪ್ರವೇಶ ಪತ್ರವನ್ನು ಕೆಪಿಎಸ್‌ಸಿ ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ಕೆಪಿಎಸ್‌ಸಿ ವೆಬ್‌ಸೈಟ್ https://kpsc.kar.nic.in/index.htmlಗೆ ಭೇಟಿ ನೀಡಿ, ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಯಾರೆಲ್ಲಾ ಮರು ಪರೀಕ್ಷೆ ಬರೆಯಬಹುದು?
ಗೆಜೆಟೆಡ್ ಪ್ರೊಬೆಷನರ್ಸ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಒಟ್ಟು 384 ಹುದ್ದೆಗಳ ಪೂರ್ವಭಾವಿ ಮರುಪರೀಕ್ಷೆಯನ್ನು, ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳೂ ಬರೆಯಬಹುದಾಗಿದೆ ಎಂದು ಕೆಪಿಎಸ್‌ಸಿ ತಿಳಿಸಿದೆ.
ಈ ಹಿಂದೆ ಆ.27ರಂದು ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಮುಂದೂಡಬೇಕು ಎಂಬ ಅಭ್ಯರ್ಥಿಗಳ ವಿರೋಧದ ನಡುವೆ ಪರೀಕ್ಷೆ ನಡೆದಿತ್ತು. ಆದರೆ, ಪ್ರಶ್ನೆಪತ್ರಿಕೆಗಳಲ್ಲಿ ಕನ್ನಡ ಭಾಷಾಂತರದಲ್ಲಿ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ತೀವ್ರ ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ಕೆಪಿಎಸ್‌ಸಿ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ರೋಶ ಹೊರಹಾಕಿತ್ತು. ಬಳಿಕ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಎರಡು ತಿಂಗಳ ಒಳಗೆ ಮರುಪರೀಕ್ಷೆ ನಡೆಸಲು ಸಿಎಂ ಸಿದ್ದರಾಮಯ್ಯ ಅವರು ಕೆಪಿಎಸ್‌ಸಿಗೆ ಸೂಚನೆ ನೀಡಿದ್ದರು. ಹೀಗಾಗಿ ಡಿ.29ಕ್ಕೆ ಮರು ಪರೀಕ್ಷೆ ನಡೆಯುತ್ತಿದೆ.
ಈ ಸುದ್ದಿಯನ್ನೂ ಓದಿ | Shriram Kalyanram Column: ಬ್ಯಾಂಕ್ ರಕ್ಷಣೆಗೆ ಏಕೆ ಖಾಸಗೀಕರಣ ಉತ್ತರವಲ್ಲ !