ವಿಶ್ವವಾಣಿ ಕ್ಲಬ್ ಹೌಸ್ (ಸಂವಾದ ೧೫)
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ರೈತ ಮಹಿಳೆ ಕವಿತಾ ಮಿಶ್ರಾ ಮಾತು
ಬೆಂಗಳೂರು : ಹೆಬ್ಬೆಟ್ಟು ಹಾಕುವ ರೈತ ಕೃಷಿ ಕಾಯಕದಲ್ಲಿಯೇ ಕೋಟ್ಯಧಿಪತಿಯಾಗಬಹುದು. ರೈತನ ಮಕ್ಕಳು ಮೈ ತುಂಬಾ ಬಂಗಾರ ಹಾಕಿಕೊಳ್ಳುವ ಕಾಲ ಬಂದೇ ಬರುತ್ತದೆ ಎಂದು ರೈತ ಮಹಿಳೆ ಕವಿತಾ ಮಿಶ್ರಾ ಹೇಳಿದರು.
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸರಳ, ಸಮಾನ, ಸ್ವಾಭಿಮಾನದ ಬದುಕು ಭೂ ತಾಯಿಯಿಂದ
ಕಲಿತೆ. ಎಸಿ ರೂಮಿನಲ್ಲಿ ಕುಳಿತವರಿಗೆ ಕೃಷಿ ಬಗ್ಗೆ ಏನ್ರಿ ಗೊತ್ತು. ಇವತ್ತು ಕೃಷಿಕನಿಗೆ ಹೆಣ್ಣು ಕೊಡಲು ಯಾರೂ ಮುಂದಾಗುವುದಿಲ್ಲ. ಅವರಿಗೆ ಗೊತ್ತಿಲ್ಲ ಕೃಷಿಕ
ಮುಂದೊಂದು ದಿನ ಕೋಟ್ಯಽಪತಿಯಾಗುತ್ತಾನೆ ಅಂತ ಎಂದರು.
ನನ್ನನ್ನು ಮದುವೆ ಮಾಡಿಕೊಟ್ಟ ಮೇಲೆ ಬಹು ರಾಷ್ಟ್ರೀಯ ಕಂಪನಿಯಲ್ಲಿ ನೌಕರಿ ಸಿಕ್ಕಿತು. ನಾನು ನೌಕರಿಗೆ ಹೋಗುವುದಾಗಿ ನನ್ನ ಗಂಡನಲ್ಲಿ ಹೇಳಿದಾಗ, ಅವರು ನನ್ನ ಸಂದರ್ಶನದ ಪತ್ರವನ್ನೇ ಹರಿದು ಹಾಕಿದರು. ಹೊಲ, ಮನಿ ನೋಡ್ಕೊ ಸಾಕು ಅಂದರು. ಅಮ್ಮನನ್ನು ಕೇಳಿದೆ; ಅಮ್ಮ ನೀನು ಬರುವುದಾದರೆ ನಾನು ಬೆಂಗಳೂರಿನಲ್ಲಿ ನೌಕರಿ ಮಾಡ್ತೇನೆ ಎಂದು. ಅದಕ್ಕವರು ಕೊಟ್ಟ ಉತ್ತರ- ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ. ನೀನು ನಿನ್ನ ಗಂಡನ ಮನೆಯಲ್ಲಿ ಹೇಗೆ ಹೇಳುತ್ತಾರೋ ಹಾಗೇ ಮಾಡು ಅಂದರು. ಬೇರೆ ದಾರಿಯಿರದೇ ಕೃಷಿ ಕೆಲಸ ಮಾಡೋದು ಅನಿವಾರ್ಯವಾಯಿತು. ಕಲ್ಲುಗಳೇ ತುಂಬಿದ ೨೨ ಎಕರೆ ಬರಡು ಹೊಲದಲ್ಲಿ ೪೫ ಡಿಗ್ರಿ ಟೆಂಪರೇಚರ್‌ನಲ್ಲಿ ನಾನು ದುಡಿದೆ.
ಗಂಡ ಹೊತ್ತಿಸಿದ ಕೃಷಿಯ ಕಿಡಿ ನನ್ನ ಮನದಲ್ಲಿ ಅದಾಗಲೇ ಹೊತ್ತಿಕೊಂಡಿತ್ತು. ೧೨ ಕೊಳವೆ ಬಾವಿ ಹೊಡೆಸಿದರೂ ನೀರು ಸಿಗಲಿಲ್ಲ. ೧೩ನೇ ಕೊಳವೆ ಬಾವಿಯಲ್ಲಿ ಒಂದೂವರೆ ಇಂಚು ನೀರು ಬಂತು ಎಂದು ಸ್ಮರಿಸಿಕೊಂಡರು.
ನಾನು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ: ದಾಳಿಂಬೆ ಬೇಸಾಯಕ್ಕೆ ಕೈಹಾಕಿದೆ. ಮೊದಲ ಬೆಳೆಯ ಆರು ಲಕ್ಷ ರು. ಆದಾಯ ಕೈಸೇರಿತು. ನಾನು ನೌಕರಿಗೆ ಹೋಗಿದ್ದರೆ ಅಲ್ಲಿ ಸಿಗುವುದಕ್ಕಿಂತಲೂ ಹೆಚ್ಚು ವರಮಾನ ಕೃಷಿಯಲ್ಲಿ ಸಿಕ್ಕಿತು. ಆ ಆದಾಯ ೨ನೇ ಬೆಳೆಯಲ್ಲಿ ?೧೮ ಲಕ್ಷಕ್ಕೇರಿತು. ೬ನೇ ಬೆಳೆ ಯಲ್ಲಿ ?೨೩ ಲಕ್ಷಕ್ಕೇರಿತು. ವಿದೇಶಗಳಿಗೆ ನಾನು ಬೆಳೆದ ದಾಳಿಂಬೆ ಸಾಗಿತು. ?೫೦ ಲಕ್ಷ ಆದಾಯ ಗಳಿಕೆ ನನ್ನ ಮುಂದಿತ್ತು. ಕೈಯಲ್ಲಿದ್ದ ಎಲ್ಲ ಹಣದ ಜತೆ ಸಾಲದ ಮೊತ್ತ ಸೇರಿಸಿ
ದಾಳಿಂಬೆ ಬೆಳೆಗೆ ಸುರಿದೆ. ಕೆಲವು ಕಡೆಗಳಿಂದ ದಾಳಿಂಬೆ ರಿಜೆಕ್ಟ್ ಆಗಿ ವಾಪಸ್ ಬಂದವು.
ಗುಡ್ಡದಿಂದ ಜಾರಿ ಕೆಳಗೆ ಬಿದ್ದ ಅನುಭವ ನನಗಾಯಿತು. ಸಾಲಗಾರರು ಬೆನ್ನತ್ತಿದರು. ಸಂಬಂಧಿಗಳು ದೂರ ಉಳಿದರು. ಆಗ ನಾನು ಆತ್ಮಹತ್ಯೆಗೆ ಪ್ರಯತ್ನಿಸಿದೆ. ಸಾವನ್ನು ಸಮೀಪದಿಂದ ಕಂಡು ಬಂದು ಇಂದು ನಿಮ್ಮ ಮುಂದೆ ನಿಂತಿದ್ದೇನೆ. ಆ ಸಮಯದಲ್ಲಿ ನನ್ನ ಕೈ ಹಿಡಿದವರು ನನ್ನ ಗಂಡ. ಎಲ್ಲರೂ ನನ್ನ ಮೇಲೆ ವಿಶ್ವಾಸ ಕಳೆದುಕೊಂಡಾಗ, ನನ್ನ ಗಂಡ ನನ್ನ ಮೇಲೆ ವಿಶ್ವಾಸವಿಟ್ಟರು. ನಾನು ನನ್ನ ತಪ್ಪನ್ನು ತಿದ್ದಿಕೊಂಡೆ ಎಂದು ಕವಿತಾ ಹೇಳಿದರು.
ಬರಡು ಭೂಮಿಯನ್ನು ಸ್ವರ್ಗ ಮಾಡಿದ ಕವಿತಾ: ಕಂಪ್ಯೂಟರ್ ಸೈ ಡಿಪ್ಲೋಮಾ ಜತೆಗೆ ಎಂಎ ಸೈಕಾಲಜಿ ಓದಿರುವ ಕವಿತಾ ಮಿಶ್ರಾ ಅವರು, ರಾಯಚೂರು ಜಿಯ ಮಾನ್ವಿ ತಾಲೂಕಿನ ಕವಿತಾಳ ಗ್ರಾಮದ ತಮ್ಮ ೧೦ ಎಕರೆ ಬರಡು ಭೂಮಿಯಲ್ಲಿ ಸಾವಯವ ಕೃಷಿ ಹಾಗೂ ಹನಿ ನೀರಾವರಿ ಮೂಲಕ ಆ ಬರಡು ಭೂಮಿಯನ್ನು ಸ್ವರ್ಗ ಮಾಡಿzರೆ. ಕವಿತಾ ಅವರು ತಮ್ಮ ಜಮೀನಿನಲ್ಲಿ ೨,೫೦೦ ಶ್ರೀಗಂಧದ ಸಸಿಗಳನ್ನು ನೆಟ್ಟಿದ್ದಾರೆ. ಅವು ಉತ್ಪನ್ನ ಕೊಡುವ ತನಕ
ಏನಾದರೂ ಬೆಳೆ ಬೆಳೆಯಬೇಕೆಂಬ ತೀರ್ಮಾನಕ್ಕೆ ಬಂದ ಅವರು, ಅದರ ಜತೆಗೆ ೬೦೦ ಪೇರಲ, ೬೦೦ ಸೀತಾಫಲ, ೬೦೦ ಮಾವಿನ ಸಸಿ, ೧೦೦ ಹುಣಿಸೆ,
೧೦೦ ಕರಿಬೇವು, ೧೦೦ ನೇರಳೆ, ೧೦೦ ಬೆಟ್ಟದ ನೆಲ್ಲಿಕಾಯಿ, ೧೦೦ ನಿಂಬೆ, ೧೦೦ ಬಾರಿ ಹಣ್ಣಿನ ಗಿಡ, ೧೦೦ ಮೂಸಂಬಿ, ೧೦೦ ತೆಂಗು ಹಾಗೂ ೧,೦೦೦
ಸಾಗುವಾನಿ ಸಸಿಗಳು ನೆಟ್ಟಿದ್ದಾರೆ.
ಶ್ರೀಗಂಧ ರಕ್ಷಣೆಗೆ ಹೊಸ ವಿಧಾನ: ಶ್ರೀಗಂಧದ ಭದ್ರತೆಯ ವಿಷಯದಲ್ಲೂ ಮೊದಲಿನ ಹಾಗೆ ಆತಂಕಪಡಬೇಕಿಲ್ಲ, ಈಗ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಇ ಸೆಕ್ಯೂರಿಟಿ ಅಳವಡಿಸಿ ಮನೇಲಿ ಕುಳಿತುಕೊಂಡೇ ತೋಟ ಕಾಯಬಹುದು. ಇ-ಪ್ರೊಟೆಕ್ಷನ್‌ನಲ್ಲಿ ಶ್ರೀಗಂಧದ ಮರಗಳಿಗೆ ಒಂದು ಮೈಕ್ರೋ ಚಿಪ್ ಅಳವಡಿಸಲಾಗುವುದು. ಕಳ್ಳ ಮರದ ಹತ್ತಿರ ೨ ಅಡಿ ದೂರದಲ್ಲಿ ಸುಳಿದಾಡಿದರೂ ಸೈರನ್ ಕೂಗುತ್ತದೆ. ಅಷ್ಟೆ ಅಲ್ಲ, ಸಮೀಪದ ಪೊಲೀಸ್ ಠಾಣೆಗೂ ಲಿಂಕ್ ಇರುವುದರಿಂದ ಅಲ್ಲೂ ಸೈರನ್ ಹೊಡೆದುಕೊಳ್ಳುತ್ತದೆ. ಮತ್ತೊಂದು ಪ್ರಯೋಜನವೆಂದರೆ ಅಕಸ್ಮಾತ್ ಕಳ್ಳ ಕದ್ದೋಯ್ದರೂ ಕದ್ದ ಮಾಲು ಎಲ್ಲಿದೆ ಎಂಬುದನ್ನು ಕರಾರುವಕ್ಕಾಗಿ ಪತ್ತೆ ಹಚ್ಚಬಹುದು. ಮಾರುಕಟ್ಟೆ ಬಗ್ಗೆಯೂ ಚಿಂತಿಸಬೇಕಿಲ್ಲ. ಹೊರಗೆ ಮಾರಾಟ ಮಾಡಲಾರದವರು ಕೆಎಸ್‌ಡಿಎಲ್‌ಗೆ ಮಾರಬಹುದು ಎಂದು ಕವಿತಾ ಮಿಶ್ರಾ ಅವರು ಮಾಹಿತಿ ನೀಡಿದ್ದಾರೆ.
ವಿಶ್ವವಾಣಿಯಲ್ಲಿ ಮಾತೆಯ ಮಡಿಲಲ್ಲಿ ಅಂಕಣ
ಸಂಸ್ಕಾರ, ಸಂಸ್ಕೃತಿ, ಜೀವನ, ಕೃಷಿ ಇವೆಲ್ಲವನ್ನೂ ಮೈಗೂಡಿಸಿಕೊಂಡಿರುವ ಕವಿತಾ ಮಿಶ್ರಾ ಅವರು ’ವಿಶ್ವವಾಣಿ’ ದಿನಪತ್ರಿಕೆಯಲ್ಲಿ ’ಮಾತೆಯ ಮಡಿಲಲ್ಲಿ’ ಎಂಬ ಅಂಕಣ ಬರೆಯಲು ಉತ್ಸುಕತೆ ತೋರಿದ್ದಾರೆ.
ಕವಿತಾ ಮಿಶ್ರಾ ಅವರ ಮನವಿ ಏನು?
? ಶ್ರೀಗಂಧದ ಮರಗಳ ರಕ್ಷಣೆ ಮಾಡುವ ಸಾಧನ ಇ ಪ್ರೊಟೆಕ್ಷನ್ ಸಿಸ್ಟಂ ಕಡಿಮೆ ದರದಲ್ಲಿ ಸಿಗುವಂತೆ ಮಾಡಬೇಕು.
? ಶ್ರೀಗಂಧ ಬೆಳೆ ಕಳ್ಳತನವಾದರೆ ವಿಮಾ ಸೌಲಭ್ಯ ಸಿಗುವಂತೆ ಮಾಡಬೇಕು.
? ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶ್ರೀಗಂಧಕ್ಕೆ ಬೇಡಿಕೆ ಹೆಚ್ಚಿದ್ದು, ಕರ್ನಾಟಕ ನೀಡುವ ದರ ಕಡಿಮೆ ಇದೆ. ಹಾಗಾಗಿ ಇ-ಟೆಂಡರ್ ಸಿಸ್ಟ್ಂ ಜಾರಿಗೊಳಿಸಬೇಕು.
ಮಾತು-ಕವಿತೆ
? ಹೆಣ್ಣು ಮಕ್ಕಳು ನದಿ ಇದ್ದ ಹಾಗೆ. ನೀರು ಹರಿಯುವಾಗ ಸಾಕಷ್ಟು ಅಡಚಣೆಯಾಗುತ್ತದೆ
? ನೀರು ಸಾಗರ ಸೇರುತ್ತದೆ. ಹೆಣ್ಣಿನ ಜೀವನವೂ ಅಷ್ಟೆ.
? ಹೆಣ್ಣು ಮಕ್ಕಳು ಮನಸು ಮಾಡಿದರೆ ಜಗತ್ತು ಅಂಗೈಲಿ
? ಯಾವ ಕೆಲಸವೂ ದೊಡ್ಡದಲ್ಲ, ಯಾವ ಕೆಲಸವೂ ಸಣ್ಣದಲ್ಲ
? ಕರೋನಾ ಬಂದ ಮೇಲೆ ಎಲ್ಲರ ಬದುಕು ದುಸ್ತರ. ಎಲ್ಲರಿಗೂ ಅನ್ನ ಹಾಕಿದ ರೈತನಿಗೆ ಸಲಾಂ
? ಗಂಡನ ಜತೆ ಹೊಂದಾಣಿಕೆಯಿಂದ ಇದ್ದರೆ ಉತ್ತಮ ಜೀವನ.
***
ಶ್ರೀಗಂಧದ ರಕ್ಷಣೆ ಹಾಗೂ ರೈತರ ಅನುಕೂಲಕ್ಕೆ ನೀತಿ ಜಾರಿಗೊಳಿಸಲಾಗುತ್ತದೆ. ಅದರಲ್ಲಿ ಸೇರಿಸಬೇಕಾದ ಅಂಶಗಳ ಕುರಿತು ಕವಿತಾ ಮಿಶ್ರಾ ಅವರ ಸಲಹೆಯನ್ನು ಪಡೆಯಲಾಗುತ್ತದೆ.
– ಅರವಿಂದ ಲಿಂಬಾವಳಿ, ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ